ಶಿಗ್ಗಾವ್

ವಸತಿ ಶಾಲೆಗಳಿಗೆ ಸಚಿವ ಕೋಟಾ ಶ್ರೀನಿವಾಸ ಭೇಟಿ: ಪರೀಶೀಲನೆ

ವಸತಿ ಶಾಲೆಗಳಿಗೆ ಸಚಿವ ಕೋಟಾ ಶ್ರೀನಿವಾಸ ಭೇಟಿ: ಪರೀಶೀಲನೆ

ಲೋಕದರ್ಶನ ವರದಿ 

ಶಿಗ್ಗಾವಿ 07: ತಾಲೂಕಿನ ಜಕ್ಕನಕಟ್ಟಿಯಲ್ಲಿಯ ರಾಣಿ ಚೆನ್ನಮ್ಮ ವಸತಿ ಶಾಲೆ ಮತ್ತು ಮುರಾರ್ಜಿ ದೇಸಾಯಿ ವಸತಿ ಶಾಲೆಗಳಿಗೆ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಭೇಟಿ ನೀಡಿ ಓಬವ್ವ ಆತ್ಮರಕ್ಷಣಾ ಕಲೆಯನ್ನು ವೀಕ್ಷಿಸಿ, ಮಕ್ಕಳೊಂದಿಗೆ ಉಪಹಾರ ಸವಿದು, ನಂತರ ಶಿಕ್ಷಕರೊಂದಿಗೆ ಚರ್ಚಿಸಿದರು. 

ನಂತರ ಮಾದ್ಯಮದವರೊಂದಿಗೆ ಮಾತನಾಡಿದ ಅವರು ವಸತಿ ಶಾಲೆಯ ವಿದ್ಯಾರ್ಥಿನಿಯರು ಪ್ರದರ್ಶಿಸಿದ ಓಬವ್ವ ಆತ್ಮರಕ್ಷಣಾ ಕಲೆಯನ್ನು ತುಂಬಾ ಚೆನ್ನಾಗಿ ತರಬೇತಿ ಪಡೆದು ಪ್ರದರ್ಶಿಸಿದ್ದಾರೆ. ಆತ್ಮರಕ್ಷಣೆಗೆ ಅನುಕೂಲ ಆಗುವಂತೆ ಈ ಕಲೆಯನ್ನು ಹಿಂದುಳಿದ ವರ್ಗಗಳ ಹಾಸ್ಟೆಲ್‌ಗಳಲ್ಲಿ ವಿದ್ಯಾರ್ಥಿನಿಯರಿಗೆ ಅತ್ಯಂತ ಯೋಜನಾಬದ್ಧವಾಗಿ ಕಲಿಸಲಾಗುತ್ತಿದೆ, ಈ ಕಲೆಯಿಂದ ವಿದ್ಯಾರ್ಥಿಗಳ ಬದುಕಿಗೆ ಮತ್ತು ಆತ್ಮರಕ್ಷಣೆಗೆ ಅನುಕೂಲವಾಗುತ್ತದೆ, ಆರಂಭದಲ್ಲಿ ಸ್ವಲ್ಪ ಆತಂಕ ಇತ್ತು ಆದರೆ ಇಂದು ವಿದ್ಯಾರ್ಥಿಗಳು ಇದರಲ್ಲಿ ಭಾಗವಹಿಸಿದ ಮತ್ತು ಕಲಿತಿರುವುದನ್ನು ನೋಡಿದರೆ ಖುಷಿಯಾಗುತ್ತದೆ, ತಮ್ಮ ಇಲಾಖೆಯಡಿಯಲ್ಲಿ ಬರುವ 826 ವಸತಿ ಶಾಲೆಗಳಲ್ಲಿ  6ನೇ ತರಗತಿಯಿಂದ ಈ ಕಲೆಯನ್ನು ಕಲಿಸಲು ಈ ವರ್ಷದಿಂದ ಪ್ರಾರಂಭಿಸುತ್ತಿದ್ದೇವೆ. ಈ ಒಂದು ಯೋಜನೆಗೆ ಸಮವಸ್ತ್ರ ಮತ್ತು ಶಿಕ್ಷಕರ ಸಂಬಳಕ್ಕೆ ಸೇರಿ 18 ಕೋಟಿ ವೆಚ್ಚ ತಗುಲಲಿದ್ದು ಆ ಹಣವನ್ನು ಬಿಡುಗಡೆ ಮಾಡುವಂತೆ ಆದೇಶ ಮಾಡಲಾಗಿದೆ ಎಂದರು. 

ಮುಂದಿನ ವರ್ಷದಿಂದ ಎಲ್ಲಾ ವಸತಿ ಶಾಲೆಗಳಲ್ಲಿ ಇಂಗ್ಲಿಷ್ ಸ್ಪೀಕಿಂಗ್ ಕೋರ್ಸ್‌ ಪ್ರಾರಂಭಿಸುವ ಉದ್ದೇಶವೂ ಇದೆ ಅದಕ್ಕೆ ಬೇಕಾದಂತಹ ಪೂರ್ವ ತಯಾರಿ ಮಾಡಿಕೊಳ್ಳಲಾಗುತ್ತಿದೆ. ದಿನದಿಂದ ದಿನಕ್ಕೆ ವಸತಿ ಶಾಲೆಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. 

ಈ ಸಂದರ್ಭದಲ್ಲಿ ತಾಲೂಕಿನ ವಿವಿಧ ಮುಖಂಡರು ಹಾಗೂ ವಸತಿ ಶಾಲೆಗಳು ಮುಖ್ಯ ಶಿಕ್ಷಕರು ಹಾಗೂ ಶಿಕ್ಷಕರು, ವಿದ್ಯಾರ್ಥಿಗಳು ಇದ್ದರು. 


ಸುದ್ದಿ ಓದಿ