ವಸತಿ ಸೌಲಭ್ಯ ಒದಗಿಸುವಂತೆ ಒತ್ತಾಯಿಸಿ ಹಮಾಲರ ಪ್ರತಿಭಟನೆ
ತಾಳಿಕೋಟೆ: ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಹಮಾಲರಿಗೆ ವಸತಿ ನಿಸೌಲಭ್ಯ ಒದಗಿಸುವಂತೆ ಒತ್ತಾಯಿಸಿ ಹಮಾಲರ ಹಿತರಕ್ಷಣಾ ಸಮಿತಿ ಹಾಗೂ ಬಸವೇಶ್ವರ ಹಮಾಲರ ಸಂಘದ ನೇತೃತ್ವದಲ್ಲಿ ಎಪಿಎಂಸಿಯಲ್ಲಿ ಹಮಾಲಿಯನ್ನು ಸ್ಥಗಿತಗೊಳಿಸಿ ಹಮಾಲರು ಪ್ರತಿಭಟನೆ ನಡೆಸಿದರು.
ಪಟ್ಟಣದ ಎಪಿಎಂಸಿ ಮುಂದುಗಡೆ ಪ್ರತಿಭಟನೆಯನ್ನು ನಡೆಸಿದ ಹಮಾಲರು, ಎಪಿಎಂಸಿ ಲೈಸನ್ಸ್ ಆಧಾರದ ಮೇಲೆ ಮಾರುಕಟ್ಟೆ ಆವರಣದಲ್ಲಿ ಕಳೆದ 30 ವರ್ಷಗಳಿಂದ ಹಮಾಲಿ ಕೆಲಸ ನಿರ್ವಹಿಸುತ್ತಾ ಬಂದಿದ್ದು, ಹಮಾಲರಿಗೆ ನಿವೇಶನದ ಜೊತೆಗೆ ವಸತಿ ಸೌಲಭ್ಯವನ್ನು ಒದಗಿಸುತ್ತೇವೆಂದು ಮೂಗಿಗೆ ತುಪ್ಪ ಸವರುತ್ತಾ ಬರಲಾಗಿದೆ. ಆದರೆ ಇಲ್ಲಿಯವರೆಗೆ ಯಾವುದೇ ರೀತಿ ಸೌಲಭ್ಯಗಳು ಹಮಾಲರಿಗೆ ದಕ್ಕಿಲ್ಲ. ಕೋರೋನಾ ಸಂಕಷ್ಟದ ಸಮಯದಲ್ಲಿ ಮಾಡಲು ಕೆಲಸವೂ ಇಲ್ಲ. ಸ್ವಂತ ಸೂರಿಲ್ಲದ್ದರಿಂದ ಬಾಡಿಗೆ ಕಟ್ಟಲು ಸಾಕಷ್ಟು ತೊಂದರೆಗಳನ್ನು ಅನುಭವಿಸಿದ್ದೇವೆ. ಈಗಾಗಲೇ ಹಮಾಲರಿಗೆ ನಿವೇಶಕ್ಕೆ ಜಾಗ ಮೀಸಲಿಡಲಾಗಿದೆ ಎಂದು ಜಾಗ ತೋರಿಸುತ್ತಾ ಸಾಗಿದ್ದಾರೆ ವಿನಃ ಇಲ್ಲಿಯವರೆಗೆ ಯಾವುದೇ ರೀತಿಯ ಕ್ರಮಕ್ಕೆ ಮುಂದಾಗಿಲ್ಲ. ಹೀಗಾಗಿ ಎಪಿಎಂಸಿ ಲೈಸನ್ಸ್ ಆಧಾರಿತ ಹಮಾಲರೆಲ್ಲರೂ ಮಾರುಕಟ್ಟೆ ಆವರಣದಲ್ಲಿ ದೈನಂದಿನ ಕೆಲಸಗಳನ್ನು ಸ್ಥಗಿತಗೊಳಿಸಿ ವಸತಿ ಸೌಲಭ್ಯ, ಸಮುದಾಯ ಭವನ ಒಳಗೊಂಡು ವಿವಿಧ ಬೇಡೇರಿಕೆ ಈಡೇರಿಸುವಂತೆ ಒತ್ತಾಯಿಸಿ ಪ್ರತಿಭಟನೆಯನ್ನು ನಡೆಸಿದರು.
ಎಪಿಎಂಸಿ ಅಧ್ಯಕ್ಷ ಮಲ್ಲನಗೌಡ ಯಾತಗಿರಿ, ಕಾರ್ಯದರ್ಶಿ ಎಚ್.ಎಸ್.ಅವಟಿ ಧರಣಿ ಸ್ಥಳಕ್ಕೆ ಆಗಮಿಸಿ ಹಮಾಲರ ಮನವೊಲಿಸಲು ಮುಂದಾದರು. ನಂತರ ಬಿಜೆಪಿ ಮುಖಂಡರು, ಎಪಿಎಂಸಿ ಅಧ್ಯಕ್ಷರು ಹಾಗೂ ಹಮಾಲರೊಂದಿಗೆ ಮಾತು ಕತೆ ನಡೆಸಿ ತಮ್ಮ ಬೇಡಿಕೆ ಈಡೇರಿಕೆಗೆ ಬೇಕಾಗ ಅಗತ್ಯ ಕ್ರಮಗಳನ್ನು ಕೈಕೊಳ್ಳುವ ಭರವಸೆ ಹಿನ್ನಲೆಯಲ್ಲಿ ಧರಣಿಯನ್ನು ಅಂತ್ಯಗೊಳಿಸಲಾಯಿತು.
ಈ ಸಂದರ್ಭದಲ್ಲಿ ಪುರಸಭೆ ಸದಸ್ಯ ವಾಸುದೇವ ಹೆಬಸೂರ, ಶರಣಗೌಡ ಗೋಟಖಂಡ್ಕಿ, ಶಿವಶಂಕರ ಹಿರೇಮಠ, ಹಮಾಲರ ಸಂಘಟನೆಯ ಅಧ್ಯಕ್ಷ ಸಂಘಟನೆಯ ಅಧ್ಯಕ್ಷ ಸೋಫಿಸಾಬ ಶರಮುದ್ದೀನ ಪತ್ತೇಖಾನ, ಸದಸ್ಯ ಭೀಮಣ್ಣ ತಳವಾರ, ಉಪಾಧ್ಯಕ್ಷ ಯಮನಪ್ಪ ಬರದೇನಾಳ, ಸದಸ್ಯರಾದ ಸಂಜೀವಪ್ಪ ಬರದೇನಾಳ, ಶರಣಪ್ಪ ಪೂಜಾರಿ, ಶಂಕ್ರು ಮೂಕಿಹಾಳ, ಈರ್ಪ ನಾಯ್ಕೊಡಿ, ಶಿವಪ್ಪ ಮುತ್ತು ಗೌಡರ ಸೇರಿದಂತೆ ಇತರು ಹಮಾಲರು ಇದ್ದರು.