ಮಹಾನ್ ವಿಜ್ಞಾನಿ ಮೇಡಂ ಕ್ಯೂರಿ’ಯವರ ಸ್ಮರಣ ದಿನದ ಕಾರ್ಯಕ್ರಮ
ಧಾರವಾಡ 10: ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ(ಎ. ಐ. ಎಂ. ಎಸ್. ಎಸ್) ಮತ್ತು ಕೆ. ಇ. ಬೋರ್ಡ್ ಪದವಿ ಪೂರ್ವ ಕಾಲೇಜಿನ ಮಹಿಳಾ ಸಮಿತಿಯಿಂದ ಜಂಟಿಯಾಗಿ ಚಿರಂತನ ಸ್ಫೂರ್ತಿಯ ಸೆಲೆ, ಮಹಾನ್ ವಿಜ್ಞಾನಿ ಮೇಡಂ ಕ್ಯೂರಿಯವರ ಸ್ಮರಣ ದಿನದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಎ. ಐ. ಎಂ. ಎಸ್. ಎಸ್ ನ ಜಿಲ್ಲಾ ಅಧ್ಯಕ್ಷರಾದ ಮಧುಲತಾ ಗೌಡರ್ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಾ- ‘ಮಹಾನ್ ವ್ಯಕ್ತಿಗಳನ್ನು ನೆನೆಯುವುದು ಒಂದು ಸಂಪ್ರದಾಯವಾಗಬಾರದು, ಬದಲಾಗಿ ಅವರ ಜೀವನ ಮೌಲ್ಯಗಳು ನಮ್ಮ ಬದುಕಿಗೆ ಆದರ್ಶವಾಗಬೇಕು. ಮೇಡಂ ಕ್ಯೂರಿ ಮನುಕುಲದ ಏಳಿಗೆಗಾಗಿ ಜೀವತೆತ್ತ ಮಹಾನ್ ಚೇತನ. ಮಹಿಳೆ ಎಂದಿಗೂ ಪುರುಷನ ಮಟ್ಟಕ್ಕೆ ಏರಲಾರಳು ಎಂಬ ಮನೋಭಾವಕ್ಕೆ ಕೊಡಲಿ ಪೆಟ್ಟು ಕೊಟ್ಟ ಧೀರ ಮಹಿಳೆ. ಕೀರ್ತಿ- ಹಣ ಅವಳ ಸಾಮಾಜಿಕ ಬದ್ಧತೆಯನ್ನು ಭ್ರಷ್ಟವಾಗಿಸಲು ಸಾಧ್ಯವಾಗಲಿಲ್ಲ. ಅವರು ಸಂಶೋಧಿಸಿದ ರೆಡಿಯಂ ವಿಜ್ಞಾನ ಜಗತ್ತಿಗೆ ಹೊಸ ಇಂದ್ರಿಯವಾಯಿತು. ಬಡತನ ಹಿ ಪುರುಷ ಶ್ರೇಷ್ಠತೆಯ ಧೋರಣೆಗಳನ್ನು ಮೆಟ್ಟಿನಿಂತು ವಿಜ್ಞಾನ ಕ್ಷೇತ್ರದಲ್ಲಿ ಮೊಟ್ಟಮೊದಲ ಬಾರಿಗೆ ಎರಡು ನೊಬೆಲ್ ಬಹುಮಾನ ಗಳಿಸಿಕೊಂಡ ಏಕೈಕ ವ್ಯಕ್ತಿ ಮೇಡಂ ಕ್ಯೂರಿ. ಇವತ್ತಿಗೂ ಮಹಿಳೆ ‘ಬ್ರೂಣದಿಂದ ಹಿಡಿದು, ಸಮಾಧಿಯವರೆಗೆ’ ಅತ್ಯಂತ ಶೋಚನೀಯ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾಳೆ. ಘನತೆ-ಗೌರವದ ಜೀವನಕ್ಕಾಗಿ ಹೆಜ್ಜೆ-ಹೆಜ್ಜೆಗೂ ಸೆಣೆಸಾಡುತ್ತಿದ್ದಾಳೆ. ಇಂತಹ ಸಂದರ್ಭದಲ್ಲಿ ಮೇಡಂ ಕ್ಯೂರಿಯ ಜೀವನ -ಹೋರಾಟ ಹೆಣ್ಣುಮಕ್ಕಳಿಗೆ ದಾರೀದೀಪವಾಗಬೇಕಿದೆ’ಎಂದು ನುಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲರಾದ ಸುನೀತಾ ಕಡಪಟ್ಟಿ ವಹಿಸಿದ್ದರು, ಕಾಲೇಜಿನ ಮಹಿಳಾ ಸಮಿತಿಯ ಅಧ್ಯಕ್ಷ ಹೇಮಲತಾ ಕರಿಗಾರ, ಉಪಾಧ್ಯಕ್ಷರಾದ ಸುಮಾ ಬಿಸಗುಪ್ಪಿ, ಎ. ಐ. ಎಂ. ಎಸ್. ಎಸ್ ನ ಜಿಲ್ಲಾ ಕಾರ್ಯದರ್ಶಿಯಾದ ಗಂಗೂಬಾಯಿ ಕೋಕರೆ, ಉಪಾಧ್ಯಕ್ಷರಾದ ದೇವಮ್ಮ ದೇವತ್ಕಲ್ ಉಪಸ್ಥಿತರಿದ್ದರು.