ಕುಡಿಯುವ ನೀರಿಗಾಗಿ ದೂರುಗಳು ಬರದಂತೆ ಕಾರ್ಯನಿರ್ವಹಿಸಿ
ಅಧಿಕಾರಿಗಳಿಗೆ ರೂಪಾಲಿ ಎಸ್.ನಾಯ್ಕ ಸೂಚನೆ: ನೀರಿನ ಸಮಸ್ಯೆ ನಿವಾರಣೆಗೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಸಭೆ
ಕಾರವಾರ ಅಂಕೋಲಾ ತಾಲೂಕುಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಕ್ರಮ ಕೈಗೊಳ್ಳಲು ಜೆಜೆಎಂ ಯೋಜನೆಯ ವಿಸ್ತೃತ ಯೋಜನಾ ವರದಿ ತಯಾರಿಸಲು ಮುಖ್ಯಮಂತ್ರಿ
ಬಿ.ಎಸ್.ಯಡಿಯೂರಪ್ಪ ಅವರು ತಿಳಿಸಿದಂತೆ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಹಾಗೂ ಯೋಜನಾ ವರದಿ ತಯಾರಿಸುವ ಏಜನ್ಸಿಯೊಂದಿಗೆ ಚರ್ಚಿಸಲಾಯಿತು.*
ಕಾರವಾರ 04: ಯಾವೊಬ್ಬ ವ್ಯಕ್ತಿಯಿಂದಲೂ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ದೂರುಗಳು ಕೇಳಿಬರದಂತೆ ಕುಡಿಯುವ ನೀರು ಪೂರೈಸಲು ಸಮರೋಪಾದಿಯಲ್ಲಿ ಕೆಲಸ ಮಾಡಬೇಕು ಎಂದು ಕಾರವಾರ
ವಿಧಾನಸಭಾ ಕ್ಷೇತ್ರದ ಶಾಸಕರಾದ ರೂಪಾಲಿ ಎಸ್.ನಾಯ್ಕ ಅಧಿಕಾರಿಗಳಿಗೆ ಸೂಚಿಸಿದರು.
ಇಲ್ಲಿನ ತಾಲ್ಲೂಕು ಪಂಚಾಯತಿ ಸಭಾಂಗಣದಲ್ಲಿ ಗ್ರಾಮ ಪಂಚಾಯತಿಗಳ ವ್ಯಾಪ್ತಿಯಲ್ಲಿನ ನೀರಿನ ಸಮಸ್ಯೆಯ ಕುರಿತು ಗುರುವಾರ ನಡೆದ ಸಭೆಯಲ್ಲಿ ಅವರು ಮಾತನಾಡಿದರು.
ಇನ್ನು ಒಂದೂವರೆ ತಿಂಗಳು ತಾಲ್ಲೂಕಿನಲ್ಲಿ ಹಲವು ಕಡೆಗಳಲ್ಲಿ ನೀರಿನ ಸಮಸ್ಯೆ ಎದುರಾಗುತ್ತದೆ. ಅದನ್ನು ಗಮನದಲ್ಲಿಟ್ಟುಕೊಂಡು ಎಲ್ಲಿ ಬಾವಿಗಳಿವೆಯೋ ಅಲ್ಲಿಂದ ಪೈಪ್ ಲೈನ್ ಅಳವಡಿಸಿ ನೀರು ನೀಡಬೇಕು. ಕುಡಿಯುವ ನೀರಿಗಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ಹೆಚ್ಚು ಗಮನ ಹರಿಸುತ್ತಿದೆ. ಇಷ್ಟಾದರೂ ಜನರಿಂದ ದೂರುಗಳು ಬಂದರೆ ಕ್ರಮಕೈಗೊಳ್ಳಲಾಗುವುದು ಎಂದು ಅಧಿಕಾರಿಗಳಿಗೆ ಎಚ್ಚರಿಸಿದರು.
ಕೆಲವೆಡೆ ಪ್ರತೀ ವರ್ಷ ನೀರಿನ ಸಮಸ್ಯೆ ಎದುರಾಗುತ್ತಿದೆ. ಅಲ್ಲೆಲ್ಲ ಕೇವಲ ತಾತ್ಕಾಲಿಕವಾಗಿ ಕುಡಿಯುವ ನೀರಿನ ಪೂರೈಕೆ ಕೆಲಸ ಮಾಡಿ ಸರ್ಕಾರದ ಹಣ ಪೆÇೀಲು ಮಾಡಬಾರದು. ಅಂತಹ ಸ್ಥಳದಲ್ಲಿ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರಕ್ಕೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಗ್ರಾಮ ಪಂಚಾಯತಿಗಳಲ್ಲಿ ಯಾವ ವಾರ್ಡ್ಗಳಲ್ಲಿ ನೀರಿನ ಸಮಸ್ಯೆ ಇದೆಯೋ ಅಲ್ಲಿಯ ಮಾಹಿತಿಯನ್ನು ಎರಡು ದಿನದಲ್ಲಿ ನೀಡಬೇಕು ಮತ್ತು ಆ ವಾರ್ಡ್ಗಳಿಗೆ ನೀರಿನ ವ್ಯವಸ್ಥೆ ಮಾಡಬೇಕು ಎಂದು ಹೇಳಿದರು.
ತಾಲ್ಲೂಕಿನ ಶಿರವಾಡ, ಚೆಂಡಿಯಾ, ಅಸ್ನೋಟಿಯಲ್ಲಿ ಪರವಾರವಾಡಾದಲ್ಲಿ, ಕೆಳಗಿನ ಕೊಳಗೆಯಲ್ಲಿ ನೀರಿನ ಸಮಸ್ಯೆ ಇದೆ. ಸರ್ಕಾರದಿಂದ ಬರುವ ಹಣವನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು. ಆಯಾ ಯೋಜನೆಗಳಿಗೆ ಬಂದ ಹಣವನ್ನು ಸಮರ್ಪಕವಾಗಿ ಅವಶ್ಯಕವಿರುವ ಕೆಲಸಗಳಿಗೆ ಬಳಸಿಕೊಳ್ಳಬೇಕು. ನೀರಿನ ಸಮಸ್ಯೆ ಬಗೆಹರಿಸುವ ದೃಷ್ಟಿಯಿಂದ ಪಿಡಿಒಗಳು, ಅಧ್ಯಕ್ಷರು ಕ್ರಮಕೈಗೊಂಡು ಜನರಿಗೆ ನೀರಿನ ಸಮಸ್ಯೆ ಬರದಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿದರು.
ಚೆಂಡಿಯಾದಲ್ಲಿ ನೀರಿನ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಎರಡು ದಿನದಲ್ಲಿ ಕ್ರಮಕೈಗೊಳ್ಳಬೇಕು. ಕಳೆದ ವರ್ಷ ಕುಡಿಯುವ ನೀರಿನ ಸಮಸ್ಯೆ ನಿವಾರಣೆ ಮಾಡದ್ದರೆ, ಈ ವರ್ಷ ನೀರಿನ ಸಮಸ್ಯೆ ಬರುತ್ತಿರಲಿಲ್ಲ. ಭಜನಕೇರಿ, ಒಕ್ಕಲಕೇರಿ ನೀರಿನ ಸಮಸ್ಯೆ ಒಂದು ವಾರದಲ್ಲಿ ಬಗೆಹರಿಯಬೇಕು ಎಂದರು.
ನೀರಿನ ಸಮಸ್ಯೆ ನಿವಾರಣೆಗೆ ಬಾವಿ, ಕೊಳವೆಬಾವಿ ಕೊರೆಸುವುದಿದ್ದರೆ ತಜ್ಞರ ಅಭಿಪ್ರಾಯ ಪಡೆಯುವಾಗ ಸ್ಥಳೀಯರನ್ನು ಸೇರಿಸಿಕೊಳ್ಳಬೇಕು. ಬೋಳಶಿಟ್ಟಾದಲ್ಲಿ ಬಾವಿ ನಿರ್ಮಿಸಿ ಪೈಪ್ ಲೈನ್ ಮಾಡಿದರೆ ಸುತ್ತಲಿನ ಗ್ರಾಮಗಳಿಗೆ ನೀರಿನ ಸಮಸ್ಯೆ ನಿವಾರಣೆಯಾಗುತ್ತದೆ. ಎಂದಾದರೆ ಜಾಗವನ್ನು ಗುರುತಿಸಿ ಈಗಿನಿಂದಲೇ ತಾತ್ಕಾಲಿಕ ಕ್ರಮಕೈಗೊಂಡು ಮುಂದಿನ ದಿನದಲ್ಲಿ ಶಾಶ್ವತ ನೀರಿನ ಸಮಸ್ಯೆ ನಿವಾರಣೆಗೆ ಕ್ರಮಕ್ಕೆ ಮುಂದಾಗಬೇಕು ಎಂದು ಅಧಕಾರಿಗಳಿಗೆ ಸೂಚಿಸಿದರು.
ಕಿನ್ನರದಲ್ಲಿ ನಾಲ್ಕು ಕಡೆಗಳಿಂದ ಉಪ್ಪು ನೀರಿನ ಸಮಸ್ಯೆ ಇದೆ. ಕೆರವಡಿ ಗ್ರಾಮದಿಂದ ನೀರನ್ನು ಒದಗಿಸಲಾಗುತ್ತಿದೆ. ಮುಂದಿನ ದಿನದಲ್ಲಿ ಈ ಗ್ರಾಮದ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರಕ್ಕೆ ಕ್ರಮಕೈಗೊಳ್ಳಲಾಗುವುದು. ಮುಡಗೇರಿಯ ಅರ್ಥಲಾವ ಕೆರೆ ಹೂಳೆತ್ತುವ ಕೆಲಸ ಮಾಡಲು ಈಗಾಗಲೆ ಸಣ್ಣ ನೀರಾವರಿ ಇಲಾಖೆಗೆ ಸೂಚನೆ ನೀಡಲಾಗಿದೆ. ಈ ಕೆರೆ ಜನರ ಬಳಕೆಗೆ ಬಂದರೆ ಕೃಷಿ ಚಟುವಟಿಕೆಗೂ ಸಹಾಯಕವಾಗುತ್ತದೆ. ಗ್ರಾಮ ಪಂಚಾಯತಿಗಳಲ್ಲಿರುವ ಸಣ್ಣ ಮತ್ತು ದೊಡ್ಡ ಕೆರೆಗಳ ಮಾಹಿತಿಯನ್ನು ಎಲ್ಲ ಪಿಡಿಒಗಳು ತಲುಪಿಸಬೇಕು ಎಂದರು.
ಸರ್ಕಾರದಿಂದ ನೀರಿನ ವ್ಯವಸ್ಥೆ ಕಲ್ಪಿಸಲು ಅನುದಾನ ಬರುತ್ತದೆ. ಆದರೆ ಈವರೆಗೂ ಕೆಲವೆಡೆ ಬಾವಿ ನಿರ್ಮಾಣ ಮಾಡಿ ಪೈಪ್ಲೈನ್ ಅಳವಡಿಸಿ ಜನರ ಸಮಸ್ಯೆಯನ್ನು ನಿವಾರಿಸಿಲ್ಲ. ಸ್ವಲ್ಪ ಸ್ಪಲ್ಪ ಅನುದಾನ ಬಳಸಿಕೊಂಡರೂ ಕುಡಿಯುವ ನೀರಿನ ಸಮಸ್ಯೆ ನಿವಾರಿಸಬಹುದು. ವೈಲವಾಡದ ಮಹಾಸತಿವಾಡದ ಕೆರೆ ಹೂಳೆತ್ತಿ ಪುನಶ್ಚೇತನಗೊಳಿಸಿ ಜನರಿಗೆ ನೀರನ್ನು ತಲುಪಿಸಬಹುದು. ಈ ಹಿಂದೆ ಮಹಾಸತಿವಾಡಾದ ಕೆರೆ ಸುತ್ತ ಬಾವಿಗಳನ್ನು ನಿರ್ಮಿಸುವಂತೆ ಅಲ್ಲಿಯ ಜನರು ಮನವಿಯನ್ನು ನೀಡಿದ್ದರು. ಮುಡಗುಳಿ ಕೆರೆಯನ್ನು ಹೂಳೆತ್ತಿ ಜನರಿಗೆ ನೀರು ತಲುಪಿಸಲು ಮುಂದಾಗಬೇಕು ಎಂದರು.
ಗ್ರಾಮ ಪಂಚಾಯತಿಗಳಿಂದ ಪೂರೈಸಲಾಗುವ ನೀರನ್ನು ತೋಟಕ್ಕೆ ಬಳಕೆ ಮಾಡದೆ ಕುಡಿಯಲು ಮಾತ್ರ ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದು ಜನತೆಯನ್ನೂ ಶಾಸಕರು ವಿನಂತಿಸಿದರು.
ಪಿಡಿಓಗಳು ನೀರಿನ ಸಮಸ್ಯೆ ನಿವಾರಣೆಗೆ ಆದ್ಯತೆ ನೀಡಬೇಕು. ಪಂಚಾಯತಿಗಳಲ್ಲಿ ನೀರಿನ ಸಮಸ್ಯೆ ನಿವಾರಣೆಗೆ ಹಣದ ಕೊರತೆ ಇದ್ದರೆ ತಿಳಿಸಿ, ಶಾಸಕರ ಅನುದಾನದಿಂದ ಹಣ ಒದಗಿಸಲಾಗುವುದು. 2023ರ ವೇಳೆಗೆ ಜಲಜೀವನ ಮಿಷನ್ ಯೋಜನೆಯಲ್ಲಿ ಎಲ್ಲ ಗ್ರಾಮಗಳಿಗೆ ನೀರು ತಲುಪಿಸಲು ಕೇಂದ್ರ ಸರ್ಕಾರ ಯೋಜನೆಯನ್ನು ಪ್ರಾರಂಭಿಸಿದೆ. ಅದರ ಮೂಲಕ ಮುಂದಿನ ದಿನಗಳಲ್ಲಿ ನಿರಿನ ಸಮಸ್ಯೆ ನಿವಾರಿಸಬಹುದು. ಅಲ್ಲದೇ, ಉಪ್ಪು ನೀರು ತಡೆಯಲು ಖಾಲ್ಯಾರ್ಂಡ್ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಬಜೆಟ್ನಲ್ಲಿ ಅನುಮೋದನೆ ನೀಡಿದ್ದು, ಅದು ಆರಂಭವಾದರೆ ಜಲ ಮೂಲಗಳಿಗೆ ಉಪ್ಪು ನೀರು ಬರುವುದು ತಪ್ಪುತ್ತದೆ ಎಂದರು.
ತಹಶೀಲ್ದಾರ್ ಆರ್.ವಿ.ಕಟ್ಟಿ, ತಾಲೂಕಾ ಪಂಚಾಯತ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆನಂದಕುಮಾರ್, ವಿವಿಧ ಗ್ರಾಮ ಪಂಚಾಯತಗಳ ಅಧ್ಯಕ್ಷರು, ಉಪಾಧ್ಯಕ್ಷರು, ಪಿಡಿಓಗಳು, ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.