ಮಂಗಸೂಳಿ ಪಿಕೆಪಿಎಸ್: ರವಿ ಪೂಜಾರಿ ಪೆನಲ್ಗೆ ಭರ್ಜರಿ ಗೆಲುವು
ಅಥಣಿ 17: ಮಂಗಸೂಳಿಯ ಅಶೋಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಆಡಳಿತ ಮಂಡಳಿಯ ಚುನಾವಣೆಯಲ್ಲಿ ಮಾಜಿ ಜಿಲ್ಲಾ ಪಂಚಾಯತ ಸದಸ್ಯ ರವಿ ಪೂಜಾರಿ ನೇತೃತ್ವದ ಸಹಕಾರಿ ಪೆನಲ್ ನ ಎಲ್ಲ 12 ಅಭ್ಯರ್ಥಿಗಳು ಭಾರೀ ಬಹುಮತದಿಂದ ಆಯ್ಕೆಯಾಗಿದ್ದಾರೆ.
ಚುನಾವಣೆಯಲ್ಲಿ ಆಯ್ಕೆಯಾದ ಹಿನ್ನೆಲೆಯಲ್ಲಿ ಆಯೋಜಿಸಿದ್ದ ವಿಜಯೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿದ ಧುರೀಣ ರವಿ ಪೂಜಾರಿ, ರೈತರ ಸಹಕಾರದಿಂದಲೇ ಈ ಸಹಕಾರಿ ಸಂಘದ ಆಡಳಿತ ಮಂಡಳಿಯ ಚುನಾವಣೆಯಲ್ಲಿ ನನ್ನ ನೇತೃತ್ವದ ಅಭ್ಯರ್ಥಿಗಳ ನಗೆಲುವಿಗೆ ಕಾರಣ ಎಂದರು. ಮುಂದಿನ ದಿನಗಳಲ್ಲಿ ಈ ಸಹಕಾರಿ ಸಂಘದ ಮೂಲಕ ರೈತರಿಗೆ ಸರಕಾರದ ಸಾಲದ ಯೋಜನೆಗಳನ್ನು ಮನೆ ಬಾಗಿಲಿಗೆ ತಲುಪಿಸುತ್ತೇವೆ ಎಂದ ಅವರು ಚುನಾವಣೆಯಲ್ಲಿ ಸಹಕಾರ ಪೆನಲ್ ನ ಅಭ್ಯರ್ಥಿಗಳ ಮೇಲೆ ವಿಶ್ವಾಸ ಇಟ್ಟು ಮತ ನೀಡಿದ ರೈತ ಬಾಂಧವರಿಗೆ ಕೃತಜ್ಞತೆ ಗಳನ್ನು ಸಲ್ಲಿಸಿದರು.
ಕಾಂಗ್ರೆಸ್ ಮುಖಂಡ ಸಂಜಯ ತಳವಲಕರ ಮಾತನಾಡಿ, ಅಶೋಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಪ್ರಾರಂಭದಿಂದಲೂ ರೈತರ ಏಳಿಗೆಗಾಗಿ ಶ್ರಮಿಸುತ್ತಿದ್ದು, ರೈತರ ಸಂಕಷ್ಟದ ಸಮಯದಲ್ಲಿಯೂ ಸಹ ಸಹಾಯ ಹಸ್ತ ಚಾಚುವ ಮೂಲಕ ರೈತರ ಪರವಾಗಿ ನಿಲ್ಲುವ ಮೂಲಕ ಗೌರವ ಕೊಡಬೇಕು ಎಂದು ಹೇಳಿದರು. ಚುನಾವಣೆಯಲ್ಲಿ ಜಯಶಾಲಿಯಾದ ಮುಕುಂದ ಪೂಜಾರಿ ಮಾತನಾಡಿ, ಮಾಜಿ ಜಿಲ್ಲಾ ಪಂಚಾಯತ ಸದಸ್ಯ ರವಿ ಪೂಜಾರಿ, ಕಾಂಗ್ರೆಸ್ ಮುಖಂಡ ಸಂಜಯ ತಳವಲಕರ ಹಾಗೂ ಮಂಗಸೂಳಿ ಗ್ರಾಮದ ಹಿರಿಯರ ಮಾರ್ಗದರ್ಶನದಲ್ಲಿ ಸಹಕಾರಿ ಸಂಘವನ್ನು ಯಶಸ್ವಿಯಾಗಿ ಮುನ್ನಡೆಸಿಕೊಂಡು ಹೋಗುತ್ತೇವೆ ಎಂದು ಹೇಳಿದ ಅವರು ಸಹಕಾರ ಪೆನಲ್ನ ಎಲ್ಲ 12 ಅಭ್ಯರ್ಥಿಗಳು ಭಾರೀ ಬಹುಮತದಿಂದ ಆಯ್ಕೆ ಮಾಡಿದ್ದಕ್ಕೆ ಎಲ್ಲ ಮತದಾರರನ್ನು ಅಭಿನಂದಿಸಿದರು.
ಧುರೀಣರಾದ ಅಶೋಕ ಮಗದುಮ್, ಅಮರ ಪಾಟೀಲ, ಬಾಬಾ ಪಾಟೀಲ, ಪ್ರಶಾಂತ ಪಾಟೀಲ, ಧನಾಜಿ ಪಾಟೀಲ, ಮಹಾದೇವ ಮೆಂಡಿಗೇರ, ರಾಜು ಪವಾರ, ದಿಲೀಪ ಮಗದುಮ್, ಮೀರಾಸಾಬ ಸನದಿ ಸೇರಿದಂತೆ ನೂರಾರು ರೈತರು ಉಪಸ್ಥಿತರಿದ್ದರು. ಚುನಾವಣೆಯಲ್ಲಿ ಮುಕುಂದ ಪೂಜಾರಿ, ಅಶೋಕ ಪೂಜಾರಿ, ಪ್ರಫುಲ್ ಮಗದುಮ್, ಭರಮಾ ಮಾಲದಾರ, ಇಬ್ರಾಹಿಂ ಮುಲ್ಲಾ, ಸುವರ್ಣಾ ಭರತ ಮಾಳಿ, ಶ್ರೀಮತಿ ಸಂಗೀತಾ ಸುನೀಲ ದೇಸಾಯಿ, ಮಲ್ಹಾರಿ ಮೇತ್ರಿ, ಧನಪಾಲ ಪಟ್ಟಣಶೆಟ್ಟಿ, ರಮೇಶ ನಾಯಿಕ, ರಾಜು ಕಾಂಬಳೆ, ರಮೇಶ ಮಾಳಿ ಸಹಕಾರ ಪೆನಲ್ ನಲ್ಲಿ ಆಯ್ಕೆಯಾಗಿದ್ದಾರೆ.
ಚುನಾವಣಾಧಿಕಾರಿಯಾಗಿ ಸಹಕಾರಿ ಇಲಾಖೆ ಅಧಿಕಾರಿ ರವೀಂದ್ರ ನೂಲಿ, ಸಹಾಯಕರಾಗಿ ಬಿ.ಬಿ.ನಾಗನೂರ ಕಾರ್ಯನಿರ್ವಹಿಸಿದರು. ಸಹಕಾರಿ ಸಂಘದ ಕಾರ್ಯದರ್ಶಿ ಸುಭಾಶ ಪೂಜಾರಿ ಹಾಗೂ ಸಿಬ್ಬಂದಿ ಬಿ.ಎಲ್.ಪೂಜಾರಿ ಉಪಸ್ಥಿತರಿದ್ದರು.