ಕೃಷಿ ತ್ಯಾಜ್ಯಗಳ ನಿರ್ವಹಣೆಯಲ್ಲಿ ಕಾಂಪೋಷ್ಟ್ ಕಲ್ಚರ್ ಬಳಕೆ ಕುರಿತು ಪ್ರಾತ್ಯಕ್ಷಿಕೆ
ರಾಣಿಬೆನ್ನೂರ 01: ಸಾವಯವ ಕೃಷಿ ಸಂಸ್ಥೆ, ಕೃಷಿ ವಿಶ್ವವಿದ್ಯಾಲಯ, ಧಾರವಾಡ ಹಾಗೂ ಹನುಮನಮಟ್ಟಿ ಕೃಷಿ ವಿಜ್ಞಾನ ಕೇಂದ್ರ ಇವರ ಸಂಯುಕ್ತ ಆಶ್ರಯದಲ್ಲಿ ಕೃಷಿ ತ್ಯಾಜ್ಯಗಳ ನಿರ್ವಹಣೆಯಲ್ಲಿ ಕಾಂಪೋಷ್ಟ್ ಕಲ್ಚರ್ ಬಳಕೆ ಕುರಿತು ಪ್ರಾತ್ಯಕ್ಷಿಕೆಯನ್ನು ಹಾವೇರಿ ತಾಲೂಕಿನ ಹಳೆರಿತ್ತಿ ಗ್ರಾಮದ ಪ್ರಗತಿಪರ ರೈತ ನೀಲನಗೌಡ ಪಾಟೀಲ ಇವರ ಹೊಲದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಈ ವೇಳೆ ಕೀಟಶಾಸ್ತ್ರ ವಿಜ್ಞಾನಿ ಡಾ.ಕೆ. ಪಿ. ಗುಂಡಣ್ಣವರ ಮಾತನಾಡಿ. ಕಾಂಪೋಷ್ಟ್ ಕಲ್ಚರ್ ಬಳಕೆಯ ಬಗ್ಗೆ ಹಾಗೂ ತಯಾರಿಸುವ ವಿಧಾನದ ಬಗ್ಗೆ ಮಾಹಿತಿ ನೀಡಿದರು. ಸಾವಯವ ಕೃಷಿ ಸಂಸ್ಥೆಯ ಡಾ. ಸಿ. ಆರ್. ಪಾಟೀಲ ಮಾತನಾಡಿ, ಕಾಂಪೋಷ್ಟ ಕಲ್ಚರ್ನ್ನು ತಯಾರಿಸುವ ವಿಧಾನಗಳು ಹಾಗೂ ಬಳಕೆಯ ವಿಧಾನಗಳನ್ನು ಪ್ರಾತ್ಯಕ್ಷಿಕೆಯ ಮೂಲಕ ರೈತರಿಗೆ ಸವಿಸ್ತಾರವಾಗಿ ವಿವರಿಸಿಕೊಟ್ಟರು.
ಅಗಡಿ ಗ್ರಾಮದ ಸಾವಯವ ಕೃಷಿಕ ನಿಜಲಿಂಗಪ್ಪ ಬಸೇಗಣ್ಣಿ ಮಾತನಾಡಿ, ರೈತರು ಕೇವಲ ರಾಸಾಯನಿಕ ಗೊಬ್ಬರ, ಪೀಡೆನಾಶಕಗಳ ಮಾರು ಹೋಗದೆ ತಮ್ಮದೆ ಆದ ಪದ್ಧತಿಯಲ್ಲಿ ಸಾವಯವ ಗೊಬ್ಬರ ಹಾಗೂ ಕೀಟನಾಶಕಗಳನ್ನು ತಯಾರಿಸಿ ಬಳಸುವುದರಿಂದ ಉತ್ತಮವಾದ ಆಹಾರ ಪದಾರ್ಥ ದೊರೆಯುವುದರ ಜೊತೆಗೆ ಉತ್ತಮವಾದ ಆರೋಗ್ಯವನ್ನು ಸಹ ಕಾಪಾಡಬಹುದೆಂದು ರೈತರಿಗೆ ಸಲಹೆ ನೀಡಿದರು.
ಪ್ರಗತಿಪರ ರೈತ ನೀಲನಗೌಡ ಪಾಟೀಲ ಮಾತನಾಡಿ, ಈ ಕಾಂಪೋಷ್ಟ ಕಲ್ಚರ್ ಬಳಕೆಯನ್ನು ನಾನು ಸುಮಾರು ವರ್ಷಗಳಿಂದ ಮಾಡುತ್ತಿದ್ದು, ಇದರ ಉಪಯೋಗವನ್ನು ಪಡೆದುಕೊಂಡಿರುತ್ತೇನೆ ಹಾಗೂ ಇದನ್ನು ಉಪಯೋಗ ಮಾಡುವುದರಿಂದ ಕೃಷಿಯಲ್ಲಿ ಉಪಯೋಗವಾಗದ ತ್ಯಾಜ್ಯ ವಸ್ತುಗಳನ್ನು ಸಕ್ರೀಯವಾಗಿ ಕಳೆತು ಇಳುವರಿಯಲ್ಲಿ ಅಧಿಕ ಲಾಭವನ್ನು ಪಡೆಯಬಹುದು ಎಂದರು.
ಪ್ರಾಧ್ಯಾಪಕ ಡಾ| ಶೇಖರಪ್ಪ, ಡಾ| ಎಂ. ಎನ್. ಶ್ರೀನಿವಾಸ ರೈತರಿಗೆ ಸೂಕ್ತ ಮಾಹಿತಿ ನೀಡಿದರು. ಸುಮಾರು 35 ಜನ ರೈತರು ಪಾಲ್ಗೊಂಡಿದ್ದರು.