ಕಾಡುಹಂದಿ ಮಾಂಸ ಸಾಗಿಸುತ್ತಿದ್ದ ವ್ಯಕ್ತಿ ಬಂಧನ
ರಾಣೇಬೆನ್ನೂರು, ಸೆ.22: ಕಾಡುಹಂದಿಯನ್ನು ಬೇಟೆಯಾಡಿ ಅದರ ಮಾಂಸ ಸಾಗಿಸಲು ಯತ್ನಿಸುತ್ತಿದ್ದ ವ್ಯಕ್ತಿಯನ್ನು ಅರಣ್ಯಾಧಿಕಾರಿಗಳು ಮಿಂಚಿನ ದಾಳಿ ನಡೆಸಿ ಬಂಧಿಸಿದ್ದಾರೆ. ತಾಲೂಕಿನ ಹುಲತ್ತಿ ಗ್ರಾಮದ ಬಳಿ ಸೋಮವಾರ ಘಟನೆ ನಡೆದಿದ್ದು, ಕೃಷ್ಣಮೃಗ ಅಭಯಾರಣ್ಯದ ವ್ಯಾಪ್ತಿಯಲ್ಲಿ ಕಾಡುಹಂದಿ ಮಾಂಸ ಸಾಗಿಸುತ್ತಿದ್ದ ಬಸಲಿಕಟ್ಟಿ ತಾಂಡಾದ ಚಂದು ಹನುಮಂತಪ್ಪ ಲಮಾಣಿ ಎಂಬಾತನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಬಸಲಿಕಟ್ಟಿ ತಾಂಡಾದ ಬೀರೆಶ್ ಲಮಾಣಿ, ಸಂಜು ಲಮಾಣಿ ಹಾಗೂ ವಿಜೇ ಲಮಾಣಿ ತಲೆಮರೆಸಿಕೊಂಡಿದ್ದಾರೆ. ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸತೀಶ್ ಪೂಜಾರ ಸೇರಿದಂತೆ ಹಿರಿಯ-ಕಿರಿಯ ಅರಣ್ಯಾಧಿಕಾರಿಗಳು ಹಾಗೂ ಸಿಬ್ಬಂದಿ ದಾಳಿಯಲ್ಲಿ ಪಾಲ್ಗೊಂಡಿದ್ದರು.