ಅ. 26 ರಿಂದ ಮಲ್ಲಿಕಾರ್ಜುನ ಅವರ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ
ಕಲಬುರಗಿ 23 : ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಧನಸಹಾಯ ಅಡಿಯಲ್ಲಿ ರಾಯಚೂರಿನ ಯುವ ಚಿತ್ರಕಲಾವಿದ ಮಲ್ಲಿಕಾರ್ಜುನ ಅವರ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನವನ್ನು ಅ.26 ರಿಂದ 28, 2026 ರವರೆಗೆ ನಗರದ ಬಿಸಿಲು ಆರ್ಟ್ ಗ್ಯಾಲರಿ-02 ರಲ್ಲಿ ಹಮ್ಮಿಕೊಳ್ಳಲಾಗಿದೆ.
ಬೆಂಗಳೂರು ದೂರದರ್ಶನ ಕೇಂದ್ರದ ಗ್ರಾಫಿಕ್ಸ್ ಮೇಲ್ವಿಚಾರಕ ಹಾಗೂ ಹಿರಿಯ ಚಿತ್ರಕಲಾವಿದ ಶ್ರೀಶೈಲ ಗುಡೇದ ಅ. 26, 2026 ರಂದು ಸಾಯಂಕಾಲ 4:30 ಗಂಟೆಗೆ ಕಲಾ ಪ್ರದರ್ಶನವನ್ನು ಉದ್ಘಾಟಿಸುವರು. ಚಿತ್ರಕಲಾವಿದ ಮತ್ತು ಚಿತ್ರಕಲಾ ಶಿಕ್ಷಕ ಮಲ್ಲಿಕಾರ್ಜುನ್ ವಿ ಕೋರಳ್ಳಿ ಮುಖ್ಯ ಅತಿಥಿಯಾಗಿ ಬಾಗವಹಿಸಲಿದ್ದು, ಹಿರಿಯ ಚಿತ್ರಕಲಾವಿದ ಮತ್ತು ವ್ಹಿ.ಬಿ. ಬಿರಾದಾರ ಕಲಾ ಪ್ರತಿಷ್ಠಾನದ ಅಧ್ಯಕ್ಷ ವ್ಹಿ.ಬಿ. ಬಿರಾದಾರ ಅಧ್ಯಕ್ಷತೆ ವಹಿಸಲಿದ್ದಾರೆ.
ಗುಲಬರ್ಗಾ ವಿಶ್ವವಿದ್ಯಾಲಯದಿಂದ ಚಿತ್ರಕಲೆಯಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಮಲ್ಲಿಕಾರ್ಜುನ ಅವರು ವಿವಿಧ ಮಾಧ್ಯಮದಲ್ಲಿ ರಚಿಸಿದ ಸುಮಾರು 15ಕ್ಕೂ ಹೆಚ್ಚು ಚಿತ್ರಕಲಾಕೃತಿಗಳು ಪ್ರದರ್ಶನಗೊಳ್ಳಲಿವೆ. ದೆಹಲಿ, ಹೈದ್ರಾಬಾದ್, ಕೇರಳ, ಬೆಂಗಳೂರು, ಮೈಸೂರು, ಕಲಬುರಗಿ, ದಾವಣಗೆರೆ, ರಾಯಚೂರು, ಹಂಪಿ ಮತ್ತು ಬಾದಾಮಿ ಸೇರಿದಂತೆ ದೇಶದ ವಿವಿಧ ನಗರಗಳಲ್ಲಿ ನಡೆದ 20ಕ್ಕೂ ಹೆಚ್ಚು ಪ್ರತಿಷ್ಠಿತ ಕಲಾ ಪ್ರದರ್ಶನಗಳಲ್ಲಿ ಭಾಗವಹಿಸಿದ್ದಾರೆ.
15ಕ್ಕೂ ಹೆಚ್ಚು ರಾಜ್ಯ ಮತ್ತು ರಾಷ್ಟ್ರ ಮಟ್ಟದ ಕಲಾಶಿಬಿರಗಳಲ್ಲಿ ಭಾಗವಹಿಸಿದ್ದಾರೆ. ಮೂರು ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ ಮತ್ತು ನಾಲ್ಕು ಸಮೂಹ ಚಿತ್ರಕಲಾ ಪ್ರದರ್ಶನಗಳಲ್ಲಿ ಇವರ ಚಿತ್ರಕಲಾಕೃತಿಗಳು ಪ್ರದರ್ಶನಗೊಂಡಿವೆ. ಎಂಟಕ್ಕು ಹೆಚ್ಚು ರಾಜ್ಯ ಮತ್ತು ರಾಷ್ಟ್ರ ಮಟ್ಟದ ಕಲಾ ಸ್ಪರ್ಧೆಗಳಲ್ಲಿ ಭಾಗವಹಿಸಿ, ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. ಅ.26 ರಿಂದ ಅ. 28, 2026 ರವರೆಗೆ ಬೆಳಿಗ್ಗೆ 10:00 ಗಂಟೆಯಿಂದ ಸಾಯಂಕಾಲ 6:00 ಗಂಟೆವರೆಗೆ ಕಲಾ ಪ್ರದರ್ಶನವನ್ನು ವೀಕ್ಷಿಸಲು ಸಾರ್ವಜನಿಕರಿಗೆ ಮುಕ್ತ ಅವಕಾಶವಿದೆ.