ಗ್ರಾಪಂ ಅಧ್ಯಕ್ಷರಾಗಿ ಮಲ್ಲನಗೌಡ ಆಯ್ಕೆ
ತಾಳಿಕೋಟೆ: ತಾಲೂಕಿನ ಬ.ಸಾಲವಾಡಗಿ ಗ್ರಾಮ ಪಂಚಾಯತಿ ನೂತನ ಅಧ್ಯಕ್ಷರಾಗಿ ಗುಂಡಕನಾಳ ಮತಕ್ಷೇತ್ರದ ಸದಸ್ಯ ಮಲ್ಲನಗೌಡ ಸೋಮನಗೌಡ ಹೊಸಮನಿ ಆಯ್ಕೆಯಾದರು.
ಹಿಂದಿನ ಅಧ್ಯಕ್ಷರಾಗಿದ್ದ ಯಮನಪ್ಪಗೌಡ ಹೊರಗಿನಮನಿ ಅವರ ರಾಜಿನಾಮೆಯಿಂದಾಗಿ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಬುಧವಾರ ಗ್ರಾಮ ಪಂಚಾಯತ ಸಭಾ ಭವನದಲ್ಲಿ ಚುನಾವಣೆ ನಡೆಸಲಾಯಿತು. ಸಾಮಾನ್ಯ ವರ್ಗಕ್ಕೆ ಮಿಸಲಾದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಗುಂಡಕನಾಳ ಗ್ರಾಮದ ಮಲ್ಲನಗೌಡ ಸೋಮನಗೌಡ ಹೊಸಮನಿ ಮತ್ತು ಬ.ಸಾಲವಾಡಗಿ ಗ್ರಾಮದ ಸವಿತಾ ಗುಡಗುಂಟಿ ನಾಮಪತ್ರ ಸಲ್ಲಿಸಿದ್ದರು. ನಾಮಪತ್ರ ವಾಪಸ್ಸು ಪಡೆದುಕೊಳ್ಳದಿರುವದರಿಂದ ಚುನಾವಣೆ ನಡೆದಾಗ ಮಲ್ಲನಗೌಡ ಹೊಸಮನಿ ಅವರಿಗೆ 12 ಮತಗಳು, ಹಾಗೂ ಸವಿತಾ ಗುಡಗುಂಟಿ ಅವರಿಗೆೆ 6 ಮತಗಳು ಬಂದು 1 ಮತ ತಿರಸ್ಕಾರಗೊಂಡಿತು. 12 ಮತಗಳನ್ನು ಪಡೆದ ಮಲ್ಲನಗೌಡ ಹೊಸಮನಿ ಅವರು ಆಯ್ಕೆಗೊಂಡಿದ್ದಾರೆ ಎಮದು ಚುನಾವಣಾಧಿಕಾರಿ ತಾಪಂ ಇಓ ಬಿ.ಆರ್.ಬಿರಾದಾರ ಪ್ರಕಟಿಸಿದರು. ಚುನಾವಣಾ ಸಹಾಯಕರಾಗಿ ಬಸನಗೌಡ ಚೌದ್ರಿ, ಪಿಡಿಓ ನಿಂಗನಗೌಡ ದೊಡಮನಿ, ಕಾರ್ಯದರ್ಶಿ ಎಸ್.ಜಿ.ಅಲ್ಲಾಪೂರ ಕಾರ್ಯನಿರ್ವಹಿಸಿದರು.
ನೂತನ ಅಧ್ಯಕ್ಷ ಅಧ್ಯಕ್ಷ ಮಲ್ಲನಗೌಡ ಹೊಸಮನಿ ಮಾತನಾಡಿ, ಗ್ರಾಮಗಳ ಮೂಲಭೂತ ಸೌಕರ್ಯಕ್ಕೆ ಹೆಚ್ಚಿನ ಒತ್ತು ನಿಡಲಾಗುವುದು. ಈ ಹಿಂದಿನ ಆಡಳಿತ ಮಂಡಳಿಯ ಕಾರ್ಯಕ್ರಮಗಳನ್ನು ಮುಂದುವರೆಸಲಾಗುವುದು. ಗ್ರಾಮಗಳ ಸರ್ವೋತೋಮುಖ ಅಭಿವೃದ್ಧಿಗಾಗಿ ಎಲ್ಲ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಶಾಸಕರಾದ ಸೋಮನಗೌಡ ಪಾಟೀಲ(ಸಾಸನೂರ) ಅವರ ಮಾರ್ಗದರ್ಶನದಲ್ಲಿ ಕಾರ್ಯನಿರ್ವಹಿಸಲಾಗುವದು ಎಂದುರು.
ಈ ಸಂದರ್ಭದಲ್ಲಿ ಮುಖಂಡರಾದ ಶ್ರೀಕಾಂತಗಡ ಗುರಡ್ಡಿ, ಮಾಜಿ ಅಧ್ಯಕ್ಷ ಯಮನಪ್ಪಗೌಡ ನಡುವಿನಮನಿ, ಮುತ್ತುಗೌಡ ಮಾಳಿ(ಬಿಳೇಭಾವಿ), ಗುರುಗೌಡ ಗುರಡ್ಡಿ, ಮಹಾಂತೇಶ ಗುರಡ್ಡಿ, ಮಲ್ಲನಗೌಡ ಕಾರಲಕುಂಟಿ, ಪ್ರಭುಗೌಡ ವಠಾರ, ಮುತ್ತುಗೌಡ ಅಸ್ಕಿ, ಮುದುಕಣ್ಣ ರಾಯರಡ್ಡಿ, ಚಂದ್ರಗೌಡ ಮೂಲಿಮನಿ, ಬಸನಗೌಡ ದೊಡಮನಿ, ಮುದಕಣ್ಣಗೌಡ ಹೊರಗಿನಮನಿ, ಬಿಜೆಪಿ ಎಸ್.ಸಿ. ಮೋರ್ಚಾ ಅಧ್ಯಕ್ಷ ಸುಭಾಸ ಗುಂಡಕಾನಾಳ ಸೇರಿದಂತೆ ಇತರರು ಇದ್ದರು.