ಎಪಿಎಂಸಿ ಅಧ್ಯಕ್ಷರಾಗಿ ಮಲ್ಲನಗೌಡ ಆಯ್ಕೆ
ತಾಳಿಕೋಟೆ 02: ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಅಧ್ಯಕ್ಷರಾಗಿ ಕಾಂಗ್ರೆಸ್ ಪಕ್ಷದ ಬೆಂಬಲಿತ ಮಲ್ಲನಗೌಡ ಶಾಂತಗೌಡ ಯಾತಗಿರಿ ಅವಿರೋಧವಾಗಿ ಆಯ್ಕೆಯಾದರು.
ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆವರಣದಲ್ಲಿ ಮಂಗಳವಾರ ಚುನಾವಣೆ ನಡೆಸಲಾಯಿತು. ಹಿಂದಿನ ಅಧ್ಯಕ್ಷ ರಾಮನಗೌಡ ಇಂಗಳಗಿ ರಾಜಿನಾಮೆಯಿಂದ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಮಲ್ಲನಗೌಡ ಶಾಂತಗೌಡ ಯಾತಗಿರಿ, ಬಿಜಾನಅಲಿ ನೀರಲಗಿ, ಪ್ರಭು ಸಂಗಪ್ಪ ಡೇರೆಧ ನಾಮಪತ್ರ ಸಲ್ಲಿಸಿದರು. ಆದರೆ ಕೊನೆಯ ಕ್ಷಣದಲ್ಲಿ ಬಿಜಾನಅಲಿ ನೀರಲಗಿ, ಪ್ರಭು ಸಂಗಪ್ಪ ಡೇರೆಧ ಇಬ್ಬರು ನಾಮಪತ್ರವನ್ನು ಹಿಂಪಡೆದುಕೊಂಡಿದ್ದರಿಂದ ಮಲ್ಲನಗೌಡ ಶಾಂತಗೌಡ ಯಾತಗಿರಿ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ತಹಶೀಲ್ದಾರ ಅನಿಲಕುಮಾರ ಢವಳಗಿ ಘೋಷಣೆ ಮಾಡಿದರು. ನಾಮಪತ್ರ ಹಿಂಪಡೆದುಕೊಂಡ ತಕ್ಷಣದಿಂದ ಇಬ್ಬರು ಸದಸ್ಯರು ಚುನಾವಣೆ ಕಣದಿಂದ ಹೊರನಡೆದರು. 16 ಸದಸ್ಯ ಬಲದ ಚುನಾವಣೆಯಲ್ಲಿ 9 ಸದಸ್ಯರು ಚುನಾವಣೆಗೆ ಹಾಜರಾಗಿದ್ದರು. 7 ಸದಸ್ಯರು ಗೈರು ಉಳಿದರು.
ಚುನಾವಣಾ ಸಹಾಯಕರಾಗಿ ಎಪಿಎಂಸಿ ಕಾರ್ಯದರ್ಶಿ ಆಯ್.ಜಿ.ಅವಟಿ, ತಹಶಿಲ್ದಾರ ಕಚೇರಿಯ ಶಿರಸ್ತೆದಾರ ಶ್ರೀಶೈಲ ರಾಘಪ್ಪಗೋಳ, ಮುನ್ನಾ ಅತ್ತಾರ, ಎ.ಎಸ್.ಬಾಬಾನಗರ, ವಿರೇಶ ಬಿರಾದಾರ ಕಾರ್ಯನಿರ್ವಹಿಸಿದರು. ಚುನಾವಣಾ ಫಲಿತಾಂಶ ಘೋಷಣೆಯಾಗುತ್ತಿದ್ದಂತೆ ಮಲ್ಲನಗೌಡ ಯಾತಗರಿ ಅವರ ಬೆಂಬಲಿಗರು ಪಟಾಕ್ಷಿ ಸಿಡಿಸಿ ಸಹಿ ಹಂಚಿ ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ಸದಸ್ಯ ಗುರು ತಾರನಾಳ, ಗುರಬಾಯಿ ಮುರಾಳ, ರಾಮನಗೌಡ ಇಂಗಳಗಿ, ಯಲ್ಲಪ್ಪ ವಿಜಯಕರ, ಭೀರಪ್ಪ ಯರಝರಿ, ಸಾಹೇಬಗೌಡ ಮೇಟಿ, ಮಹಾದೇವಪ್ಪ ಕುಂಬಾರ, ನೀಲಮ್ಮ ನಾಗರಡ್ಡಿ, ಮುಖಂಡರುಗಳಾದ ಬಸನಗೌಡ ಪಾಟೀಲ, ಸಂಗನಗೌಡ ಹೆಗರಡ್ಡಿ, ಶರಣು ದೇಸಾಯಿ, ಬಸನಗೌಡ ಜೈನಾಪೂರ, ಶಾಂತಗೌಡ ಹೊಸಹಳ್ಳಿ, ಸಂಗನಗೌಡ ಅಸ್ಕಿ ಸೇರಿದಂತೆ ಇತರರು ಇದ್ದರು.