ರಾಣೆಬೆನ್ನೂರ

ನಿರ್ವಾತ ಕಂತೆ ಕಟ್ಟುವ ತಂತ್ರಜ್ಞಾನ ಸದುಪಯೋಗ ಮಾಡಿಕೊಳ್ಳಿ

ನಿರ್ವಾತ ಕಂತೆ ಕಟ್ಟುವ ತಂತ್ರಜ್ಞಾನ ಸದುಪಯೋಗ ಮಾಡಿಕೊಳ್ಳಿ

ರಾಣಿಬೆನ್ನೂರ 29: ನಿರ್ವಾತ ಕಂತೆ ಕಟ್ಟುವ ತಂತ್ರಜ್ಞಾನವು ಒಂದು ಉತ್ತಮ ಕೊಯ್ಲೋತ್ತರ ತಂತ್ರಜ್ಞಾನವಾಗಿದ್ದು, ರೈತರು ಈ ತರಬೇತಿಯ ಸದುಪಯೋಗ ಮಾಡಿಕೊಳ್ಳಬೇಕು ಎಂದು ಹನುಮನಮಟ್ಟಿ ಕೃಷಿ ಮಹಾವಿದ್ಯಾಲಯ ಡೀನ್ ಡಾ. ಆರ್. ಬಸವರಾಪ್ಪ ಹೇಳಿದರು.

ಗುರುವಾರ ಹನುಮನಮಟ್ಟಿ ಕೃಷಿ ವಿಜ್ಞಾನ ಕೇಂದ್ರದಲ್ಲಿ  ಏರ್ಪಡಿಸಿದ್ದ ಕೃಷಿ ಉತ್ಪನ್ನಗಳ ನಿರ್ವಾತ ಕಂತೆ ಕಟ್ಟುವ ತಂತ್ರಜ್ಞಾನ ಬಳಕೆಯ ಕುರಿತ ತರಬೇತಿ ಕಾರ್ಯಗಾರ ಉದ್ಘಾಟಿಸಿ ಮಾತನಾಡಿದ ಅವರು, ಭಾರತ ದೇಶದಲ್ಲಿ ಕೊಯಿಲೋತ್ತರ ಉತ್ಪನ್ನಗಳು ಒಂದು ಸಮೀಕ್ಷೆಯ ಪ್ರಕಾರ ಶೇ.30 ರಷ್ಟು ಹಾಳಾಗುವುದೆಂದು ತಿಳಿದು ಬಂದಿದೆ. ಹೀಗೆ ಕೃಷಿ ಉತ್ಪನ್ನಗಳ ಹಾಳಾಗುವಿಕೆಯನ್ನು ವೈಜ್ಞಾನಿಕವಾಗಿ ಹತೋಟಿ ಮಾಡಿದರೆ ನಮ್ಮ ದೇಶವು ಆಹಾರ ಉತ್ಪನ್ನದಲ್ಲಿ ಸ್ವಾವಲಂಬತ್ವ ಇನ್ನಷ್ಟು ಹೆಚ್ಚುವುದರಲ್ಲಿ ಸಂದೇಹವಿಲ್ಲ. ಗ್ರಾಮೀಣ ಪ್ರದೇಶಗಳಲ್ಲಿ ಈ ಕೊಯಿಲೋತ್ತರ ಕೃಷಿ ಉತ್ಪನ್ನಗಳನ್ನು ಮತ್ತು ಬೀಜಗಳ ಪೋಲಾಗುವಿಕೆಯನ್ನು ಹತೋಟಿ ಮಾಡುವುದು ಅವಶ್ಯವಾಗಿದೆ ಎಂದರು.

ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥ ಡಾ. ಅಶೋಕ ಪಿ ಮಾತನಾಡಿ,  ನಮ್ಮ ದೇಶದಲ್ಲಿ ಶೇಕಡಾ 25 ರಿಂದ 30 ರಷ್ಟು ಕೃಷಿ ಉತ್ಪನ್ನವು ಸರಿಯಾಗಿ ಕೊಯ್ಲೋತ್ತರದ ತಂತ್ರಜ್ಞಾನ ಅಳವಡಿಸಿಕೊಳ್ಳದೆ ಇರುವುದರಿಂದ ಹಾನಿಯಾಗುತ್ತಿದ್ದು, ಈ ನಿಟ್ಟಿನಲ್ಲಿ ಇಂದಿನ ತರಬೇತಿಯು ಈ ಹಾನಿಯನ್ನು ತಪ್ಪಿಸಲು ಸಹಕಾರಿಯಾಗುತ್ತಿದ್ದು, ರೈತರು ಈ ತರಬೇತಿಯ ಸದುಪಯೋಗ ಮಾಡಿಕೊಂಡು ಕೃಷಿ ಉತ್ಪನ್ನದಲ್ಲಿ ಆಗುವ ನಷ್ಟವನ್ನು ಕಡಿಮೆಗೊಳಿಸಲು ಶ್ರಮಿಸಬೇಕು ಎಂದರು.

ನಿರ್ವಾತ ಪ್ಯಾಕಿಂಗ್ ಕಟ್ಟುವ ಯಂತ್ರ ಹೆಚ್ಚಿನ ಸಾಂದ್ರತೆಯ ಪಾಲಿಥೀನ್ ಚೀಲದಲ್ಲಿ ಆಹಾರ ಪದಾರ್ಥ ಹಾಕಿ ಕುಗ್ಗಿಸಿ, ಪಾಲಿಥೀನ್  ಚೀಲದಲ್ಲಿನ ಗಾಳಿಯನ್ನು ಹೊರತೆಗೆದು ಪ್ಯಾಕ್ ಮಾಡುತ್ತದೆ. ಈ ಪ್ರಕ್ರಿಯೆ ಸುಮಾರು 3 ನಿಮಿಷದಲ್ಲಿ ಪೂರ್ಣಗೊಳ್ಳುತ್ತದೆ. ಹೀಗೆ ಕಟ್ಟಿಟ್ಟ ಪದಾರ್ಥವನ್ನು ಹೆಚ್ಚು ಕಾಲ ಶೇಖರಿಸಿಟ್ಟು, ಮಾರುಕಟ್ಟೆ ದರ ಬಂದಾಗ ಮಾರಾಟ ಮಾಡಬಹುದಾಗಿದೆ. ಕೃಷಿ ವಿಶ್ವವಿದ್ಯಾಲಯ ಸಂಶೋಧಿಸಿದ ತಂತ್ರಜ್ಞಾನ ಯಶಸ್ವಿಯಾಗಿದ್ದುದರಿಂದ ಸಮಸ್ತ ರೈತ ಬಾಂದವರಿಗೆ ತಂತ್ರಜ್ಞಾನದ ಬಳಕೆಯಾಗಬೇಕು ಎಂದು ತಿಳಿಸಿದರು.

ಧಾರವಾಡ ಕೃಷಿ ವಿಶ್ವವಿದ್ಯಾಲಯ ಪ್ರಾಧ್ಯಾಪಕ  ಡಾ| ಡಿ. ಎಸ್. ಉಪ್ಪಾರ, ಡಾ. ಎಸ್. ಈ. ರಾಜು, ಕೀಟಶಾಸ್ತ್ರ ವಿಜ್ಞಾನಿ ಡಾ| ಕೆ. ಪಿ. ಗುಂಡಣ್ಣವರ, ವಿಜ್ಞಾನಿ ಡಾ| ಸಂತೋಷ್ ಹೆಚ್.ಎಂ, ಮಣ್ಣು ವಿಜ್ಞಾನಿ ಡಾ. ರಾಜಕುಮಾರ ಜಿ. ಆರ್, ಡಾ| ಮಹದೇವ ಖೇತಗೌಡರ ರೈತರಿಗೆ ವಿಷಯವಾರು ತರಬೇತಿ ನೀಡಿದರು. ಡಾ. ಶಿವಮೂರ್ತಿ ಡಿ, ವನಸಿರಿ ಗ್ರಾಮೀಣಾಭಿವೃದ್ಧಿ ಸಂಸ್ಥೆ ಹನುಮಂತಪ್ಪ, ಡಾ| ಸ್ನೇಹಾ ಶಿಗಿಹಳ್ಳಿ,  ಸುವರ್ಣಾ ಹೆಗಡೆ ಇದ್ದರು. 30 ಕ್ಕೂ ಹೆಚ್ಚು ರೈತರು ತರಬೇತಿ ಕಾರ್ಯಗಾರದಲ್ಲಿ ಭಾಗವಹಿಸಿದ್ದರು.

ಸುದ್ದಿ ಓದಿ