ಸೌಂದತ್ತಿ

ಮಹರ್ಷಿ ವಾಲ್ಮೀಕಿ ಜಯಂತಿ ಉತ್ಸಾಹದಿಂದ ಆಚರಿಸಬೇಕು: ಶಾಸಕ ವಿಶ್ವಾಸ ವೈದ್ಯ

ಮಹರ್ಷಿ ವಾಲ್ಮೀಕಿ ಜಯಂತಿ ಉತ್ಸಾಹದಿಂದ ಆಚರಿಸಬೇಕು: ಶಾಸಕ ವಿಶ್ವಾಸ ವೈದ್ಯ

ಸವದತ್ತಿ 14: ಮಹರ್ಷಿ ವಾಲ್ಮೀಕಿ ಜಯಂತಿ ಉತ್ಸವವನ್ನು ತಾಲೂಕಾ ಮಟ್ಟದಲ್ಲಿ ಉತ್ಸಾಹದಿಂದ ಎಲ್ಲರೂ ಸೇರಿ ಆಚರಿಸಬೇಕಿದ್ದು, ಎಲ್ಲ ಇಲಾಖೆಯ ಅಧಿಕಾರಿಗಳು ಅ.28ರಂದು ಕಡ್ಡಾಯವಾಗಿ ಉಪಸ್ಥಿತರಿರುವುದರ ಜೊತೆಗೆ ಕಾರ್ಯಕ್ರಮದ ಅಚ್ಚುಕಟ್ಟತೆಯ ಕಡೆಗೆ ವಿಶೇಷ ಗಮನ ಹರಿಸಬೇಕೆಂದು ಶಾಸಕ ವಿಶ್ವಾಸ ವೈದ್ಯ ಹೇಳಿದರು. 

ತಾ.ಪಂ ಸಭಾಭವನದಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ಅಂಗವಾಗಿ ಅಧಿಕಾರಿಗಳು ಮತ್ತು ಸಮಾಜದ ಮುಖಂಡರ ಸಮ್ಮುಖದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು. 

ಪಟ್ಟಣದ ರಾಮಾಪೂರಸೈಟ್‌ದಲ್ಲಿರುವ ವಾಲ್ಮೀಕಿ ಭವನದಲ್ಲಿ ಜಯಂತಿಯನ್ನು ಆಚರಿಸಲಾಗುತ್ತಿದ್ದು, ಸಾರ್ವಜನಿಕರು ಮತ್ತು ಸಮಾಜದ ಮುಖಂಡರೆಲ್ಲರೂ ಸೇರಿ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸೋಣ ಎಂದರು. 

ಸಮಾಜದ ಮುಖಂಡ ರಾಘವೇಂದ್ರ ಪೂಜಾರ ಮಾತನಾಡಿ, ಮಹರ್ಷಿ ವಾಲ್ಮೀಕಿ ಸಮುದಾಯಭವನಗಳಲ್ಲಿ ಸರಿಯಾದಂತ ಮೂಲಭೂತ ಸೌಕರ್ಯಗಳು ಇಲ್ಲದಾಗಿದ್ದು, ಈ ಕುರಿತು ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದರೂ ಸಹಿತ ಯಾವುದೆ ಕಾರ್ಯವಾಗುತ್ತಿಲ್ಲ ಎಂದರು. 

ಸಮಾಜದ ಮುಖಂಡ ಜಗದೀಶ ಶಿರಸಂಗಿ ಮಾತನಾಡಿ, ಮಹರ್ಷಿ ವಾಲ್ಮೀಕಿ ಜಯಂತಿಯು ಸರಕಾರದ ನೇತೃತ್ವದ ಕಾರ್ಯಕ್ರಮವಾದರೂ ಸಹಿತ ಸಮಾಜದ ಪ್ರತಿಯೊಬ್ಬರು ಹಾಗೂ ಸಾರ್ವಜನಿಕರೆಲ್ಲರೂ ಸೇರಿ ಜಯಂತಿ ಆಚರಣೆ ಮಾಡುವದರಲ್ಲಿ ಸಾಮ್ಯತೆಯನ್ನು ಕಾಣಬಹುದಾಗಿದೆ ಎಂದರು.  ಆ ನಿಟ್ಟಿನಲ್ಲಿ ಎಲ್ಲರೂ ಸೇರಿ ಜಯಂತಿಯನ್ನು ಆಚರಿಸುವ ಮೂಲಕ ಜಯಂತಿಗೆ ಮೆರಗು ತರೋಣ ಎಂದರು. 

ಬಸವರಾಜ ತಳವಾರ ಮಾತನಾಡಿ, ಪ.ಜಾತಿ ಮತ್ತು ಪ.ಪಂಗಡದ ಜನರಿಗೆ ಸರಕಾರದಿಂದ ಬರುವಂತ ಯೋಜನೆಗಳನ್ನು ಅಧಿಕಾರಿಗಳು ಸರಿಯಾದ ಸಮಯದಲ್ಲಿ ತಿಳಿಸಿದಲ್ಲಿ ಸಮಾಜದ ಬಡಜನರಿಗೆ ಅನುಕೂಲವಾಗಲು ಸಾಧ್ಯ ಎಂದರು. 

ಗ್ರೇಡ್‌-2 ತಹಸೀಲ್ದಾರ ಎಮ್‌.ವಿ.ಗುಂಡಪ್ಪಗೋಳ ಮಾತನಾಡಿ, ಅ.28ಕ್ಕೆ ಮಹರ್ಷಿ ವಾಲ್ಮೀಕಿ ಜಯಂತಿ ಹಾಗೂ ಅ.18ರಂದು ಸವದತ್ತಿ ಪಟ್ಟಣಕ್ಕೆ ವೀರರಾಣಿ ಚನ್ನಮ್ಮಾ ಜ್ಯೋತಿಯು ಆಗಮಿಸಲಿದ್ದು, ಎಲ್ಲ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಯವರು ಎರಡು ಕಾರ್ಯಕ್ರಮದಲ್ಲಿ ಭಾಗಿಯಾಗಿ ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸಬೇಕೆಂದರು. 

ತಾ.ಪಂ ಇಓ ಯಶವಂತಕುಮಾರ, ಬಿಇಓ ಮೋಹನ ದಂಡಿನ, ಸಮಾಜ ಕಲ್ಯಾಣಾಧಿಕಾರಿ ಆರ್‌.ಆರ್‌.ಕುಲಕರ್ಣಿ, ಮುಖ್ಯಾಧಿಕಾರಿ ಪ್ರಕಾಶ ಚನ್ನಪ್ಪನವರ, ಸಮಾಜದ ಮುಖಂಡರಾದ ದ್ಯಾಮಣ್ಣ ಸುತಗಟ್ಟಿ, ವೆಂಕಟೇಶ ತಳವಾರ, ಎಮ್‌.ಮಲ್ಲಪ್ಪ, ಪ್ರಕಾಶ ಮಲ್ಲೂರ, ಮಹಾದೇವ ಬಡೆಪ್ಪನವರ, ಲಕ್ಕನ್ನವರ ಹಾಗೂ ಸಮಾಜ ಬಾಂಧವರು ಮತ್ತು ತಾಲೂಕುಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು. 


ಸುದ್ದಿ ಓದಿ