ಮಹಾಂತ ಶಿವಯೋಗಿಗಳ ನಡೆನುಡಿ ಅನುಕರಣೀಯ: ಡಾ. ಬಿರಾದಾರ
ಯರಗಟ್ಟಿ 30: ನಡೆದಾಡುವ ದೇವರು, ಭಕ್ತರ ಪಾಲಿನ ಕಾಮಧೇನು-ಕಲ್ಪವೃಕ್ಷ, ಶತಾಯುಷಿ, ಇಪ್ಪತ್ತನೆಯ ಶತಮಾನದ ಬಸವಣ್ಣ ಮುರಗೋಡದ ಮಹಾಂತ ಶಿವಯೋಗಿಗಳ ನಡೆನುಡಿ ಅನುಕರಣೀಯ ಎಂದು ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಡಾ. ರಾಜಶೇಖರ ಬಿರಾದಾರ ಹೇಳಿದರು.
ಪಟ್ಟಣದ ಮಹಾಂತ ದುರದುಂಡೇಶ್ವರ ಮಠದಲ್ಲಿ ಆಯೋಜಿಸಿದ ಮುರಗೋಡದ ಮಹಾಂತ ಶಿವಯೋಗಿಗಳ 155ನೆಯ ಜಯಂತೋತ್ಸವ ಕಾರ್ಯಕ್ರಮದಲ್ಲಿ 'ದೇವರಂಥ ಮನುಷ್ಯ: ಮಹಾಂತ ಶಿವಯೋಗಿಗಳು' ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದ ಅವರು, ಭಕ್ತರಿಗಾಗಿ ಸದಾ ಮಿಡಿಯುತ್ತಿದ್ದ ಮಹಾಂತ ಶ್ರೀಗಳು ಬಸವಾದಿ ಶಿವಶರಣರ ಆದರ್ಶಗಳನ್ನು ತಾವು ಅಳವಡಿಸಿಕೊಂಡು, ಭಕ್ತರಲ್ಲೂ ಬೆಳೆಸಲು ಅನವರತ ಶ್ರಮಿಸಿದರು. ನಿಸ್ವಾರ್ಥ, ನಿಷ್ಕಲ್ಮಶ ಸಾಮಾಜಿಕ ಉಪಯುಕ್ತ ಕಾಯದಿಂದಾಗಿ ಅವರ ಸಹಜ ಜೀವನವೇ ದೂರದಿಂದ ನೋಡುತ್ತಿರುವ ನಮಗೆ ಪವಾಡದಂತೆ ಕಾಣಿಸುತ್ತಿದೆ. ಆಧುನಿಕ ಒತ್ತಡದ ಬದುಕಿಗೆ ಮಹಾಂತ ಶಿವಯೋಗಿಗಳ ಜೀವನ ವಿಧಾನದ ಅನುಕರಣೆಯೊಂದೇ ಪರಿಹಾರವಾಗಿದೆ ಎಂದು ಪ್ರತಿಪಾದಿಸಿದರು.
ಬೈಲಹೊಂಗಲದ ಖ್ಯಾತ ಉದ್ಯಮಿ ವಿಜಯ ಮೆಟಗುಡ್ಡ ಅವರು ಮಾತನಾಡಿ, ಉತ್ತರ ಕರ್ನಾಟಕ ಮಾತ್ರವಲ್ಲದೆ ಬೆಂಗಳೂರಿಗೂ ಮಹಾಂತಜ್ಜನವರ ಮಹಿಮೆ ವಿಸ್ತರಣೆಯಾಗಿದೆ ಎಂದು ಹೇಳಿದರು.
ಕಾರ್ಯಕ್ರಮದ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಕಟಕೋಳ ವಿರಕ್ತಮಠದ ಸಚ್ಚಿದಾನಂದ ಮಹಾಸ್ವಾಮಿಗಳು, ಮಹಾಂತಜ್ಜನವರು ಪಾದವಿಟ್ಟ ಯರಗಟ್ಟಿ ನೆಲವು ಪುಣ್ಯಕ್ಷೇತ್ರವಾಗಿದೆ ಎಂದು ಹೇಳಿದರು.
ಹಿರಿಯರಾದ ಅಶೋಕ ಹಾದಿಮನಿಯವರು ಶ್ರೀಮಠದ ನಿರ್ಮಾಣದಲ್ಲಿ ಮಹಾಂತ ಶ್ರೀಗಳ ಕೊಡುಗೆಯನ್ನು ಸ್ಮರಿಸಿದರು.
ಆಶಾ ಪರೀಟ ಅವರು ಮಾತನಾಡಿ ನೈತಿಕ ಅಧಃಪತನದ ಪ್ರಸ್ತುತ ಸಂದರ್ಭದಲ್ಲಿ ಮಹಾಂತ ಶ್ರೀಗಳ ಜೀವನ ಅನುಕರಣೀಯ ಎಂದು ಹೇಳಿದರು.
ಗೋಕಾಕದ ಹೃತಿಕಾ ಕಲಾಚೇತನ ತಂಡದಿಂದ ವಚನ ನೃತ್ಯ ಪ್ರದರ್ಶನ ನಡೆಯಿತು. ಪ್ರಸಕ್ತ ಸಾಲಿನ ಎಸ್.ಎಸ್.ಎಲ್.ಸಿ. ಮತ್ತು ಪಿ.ಯು.ಸಿ. ಪರೀಕ್ಷೆಯಲ್ಲಿ ಶೇ. 85ಅ ಕ್ಕಿಂತ ಹೆಚ್ಚು ಅಂಕ ಪಡೆದ ಪಟ್ಟಣದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.ಮಠದ ಅಧ್ಯಕ್ಷರಾದ ಮಹಾಂತೇಶ ಜಕಾತಿ, ಗೀರೀಶ ಹಂಪಣ್ಣವರ, ರಾಜೇಂದ್ರ ವಾಲಿ, ಶಶಿಕಾಂತ ಹಾದಿಮನಿ, ಈರಣ್ಣ ಬೆಣ್ಣಿ, ಉಮಾದೇವಿ ಪೂರ್ವಿಮಠ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಶಿವಕುಮಾರ ಜಕಾತಿ ನಿರೂಪಿಸಿದರು. ಶಿವಾನಂದ ಬಳಿಗಾರ ವಂದಿಸಿದರು.