ಮಹಾಂತೇಶ ಕವಟಗಿಮಠ ಸೋ ಕಾಲ್ಡ ಪ್ರೋಟೊಕಾಲ್ ಎಮ್ಎಲ್ಸಿ: ಹೆಬ್ಬಾಳಕರ ಲೇವಡಿ
ಲೋಕದರ್ಶನ ವರದಿ
ಅಥಣಿ 25: ವಿಧಾನ ಪರಿಷತ್ ಚುನಾವಣೆಗೆ ಸ್ಪರ್ಧಿಸಿರುವ ಮಹಾಂತೇಶ ಕವಟಗಿಮಠ ಬೆಳಗಾವಿ ಜಿಲ್ಲೆಯ ಸೋ ಕಾಲ್ಡ ಪ್ರೋಟೊಕಾಲ್ ಎಮ್ಎಲ್ಸಿ ಎಂದು ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮೀ ಹೆಬ್ಬಾಕರ ಲೇವಡಿ ಮಾಡಿದರು.
ಅವರು ಅಥಣಿಯ ಡಾ.ಆರ್.ಎಚ್.ಕುಲಕರ್ಣಿ ಸಭಾ ಭವನದಲ್ಲಿ ಆಯೋಜಿಸಿದ್ದ ಗ್ರಾಮ ಪಂಚಾಯತ ಸದಸ್ಯರ ಸಮಾವೇಶದಲ್ಲಿ ಮಾತನಾಡುತ್ತಿದ್ದರು.
ಮಹಾಂತೇಶ ಕವಟಗಿಮಠ ಎರಡು ಬಾರಿ ವಿಧಾನ ಪರಿಷತ್ ಸದಸ್ಯರಾಗಿದ್ದರೂ ಕೂಡ ಜಿಲ್ಲೆಯಲ್ಲಿ ತಮ್ಮ ಅಸ್ತಿತ್ವನ್ನು ಉಳಿಸಿಕೊಳ್ಳಲೇ ಇಲ್ಲ ಎಂದ ಅವರು ಈ ಬಾರಿ ಕಾಂಗ್ರೆಸ್ ಪಕ್ಷದ ಯುವ ಅಭ್ಯರ್ಥಿ ಚನ್ನರಾಜ ಹಟ್ಟಿಹೋಳಿ ಇವರಿಗೆ ಪ್ರಥಮ ಪ್ರಾಶಸ್ತ್ಯ ಮತ ನೀಡಿ ಆಯ್ಕೆ ಮಾಡಬೇಕು ಎಂದು ಮನವಿ ಮಾಡಿದರು.
ಕಾಂಗ್ರೆಸ್ ಪಕ್ಷದ ರಾಜ್ಯ ಕಾರ್ಯಾಧ್ಯಕ್ಷ, ಶಾಸಕ ಸತೀಶ ಜಾರಕಿಹೊಳಿ ಮತನಾಡಿ, ಪಕ್ಷೇತರ ಅಭ್ಯರ್ಥಿ ಲಖನ್ ಜಾರಕಿಹೊಳಿ ಪರವಾಗಿ ಪ್ರಚಾರ ಕಾರ್ಯ ಮಾಡುತ್ತಿರುವ ರಮೇಶ ಕಾರಕಿಹೊಳಿ ಇವರು ಇತ್ತೀಚಿಗೆ ಕಾಂಗ್ರೆಸ್ ಹಾಗೂ ಬಿಜೆಪಿ ಮುಖಂಡರ ಮನೆಗಳಿಗೆ ಭೇಟಿ ಮಾಡಿದ ಭಾವಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಬಿಡುಗಡೆ ಮಾಡಿ ಬಿಜೆಪಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಹಾಗೂ ಮತದಾರರಲ್ಲಿ ಗೊಂದಲ ಮೂಡಿಸುವ ತಂತ್ರಗಾರಿಕೆಯಲ್ಲಿ ತೊಡಗಿದ್ದಾರೆ. ಯಾವ ಕಾರಣಕ್ಕೂ ಮತದಾರರು ಅಥವಾ ಕಾರ್ಯಕರ್ತರು ಗೊಂದಲಕ್ಕೀಡಾಗದೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಚನ್ನರಾಜ ಹಟ್ಟಿಹೊಳಿ ಇವರಿಗೆ ಹೆಚ್ಚಿನ ಮತ ನೀಡುವ ಮೂಲಕ ವಿಧಾನ ಪರಿಷತ್ಗೆ ಆಯ್ಕೆ ಮಾಡಬೇಕು ಎಂದು ಮನವಿ ಮಾಡಿದರು.
ವಿಧಾನ ಪರಿಷತ್ ಅಭ್ಯರ್ಥಿ ಚನ್ನರಾಜ ಹಟ್ಟಿಹೊಳಿ ಮತ ನೀಡಿ ಎಂದು ಮತದಾರರಲ್ಲಿ ಮನವಿ ಮಾಡಿದರು.
ಸಮಾವೇಶದಲ್ಲಿ ಮಾಜಿ ಸಚಿವ ವೀರಕುಮಾರ ಪಾಟೀಲ, ಶಾಸಕರಾದ ರಾಜು ಕಾಗೆ, ಎ.ಬಿ.ಪಾಟೀಲ, ಶಹಜಹಾನ ಡೊಂಗರಗಾಂವ, ಜಿಲ್ಲಾಧ್ಯಕ್ಷ ಲಕ್ಷ್ಮಣರಾವ ಚಿಂಗಳೆ ಮಾತನಾಡಿದರು. ಉಪ ಚುನಾವಣೆ ಕಾಂಗ್ರೆಸ್ ಅಭ್ಯರ್ಥಿ ಗಜಾನನ ಮಂಗಸೂಳಿ, ಅಥಣಿ ಬ್ಲಾಕ್ ಅಧ್ಯಕ್ಷ ಸಿದ್ಧಾರ್ಥ ಸಿಂಗೆ, ಧುರೀಣರಾದ ರಾವಸಾಹೇಬ ಐಹೊಳೆ, ರಮೇಶ ಸಿಂದಗಿ, ಅಸ್ಲಂ ನಾಲಬಂದ, ಶ್ಯಾಮರಾವ ಪೂಜಾರಿ, ಸವೀತಾ ಪೂಜಾರಿ, ಸತ್ಯಪ್ಪಾ ಬಾಗೆನ್ನವರ, ಸುನೀಲ ಸಂಕ, ಓಂಪ್ರಕಾಶ ಪಾಟೀಲ, ಸುರೇಶ ಪಾಟೀಲ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಸಿದ್ಧಾರ್ಥ ಸಿಂಗೆ ಕಾರ್ಯಕ್ರಮ ನಿರೂಪಿಸಿದರು.