ತುಂಬಗಿ ಪಿಕೆಪಿಎಸ್ ಅಧ್ಯಕ್ಷರಾಗಿ ಮಾಡಗಿ ಅವಿರೋಧ ಆಯ್ಕೆ
ತಾಳಿಕೋಟಿ: ಸಮೀಪದ ತುಂಬಗಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ನಿ., ಇದರ ನೂತನ ಅಧ್ಯಕ್ಷರಾಗಿ ಈ ಭಾಗದ ಪ್ರಭಾವಿ ದುರೀಣ ಬಸನಗೌಡ ಸಂ. ಮಾಡಗಿ ಅವರು ಅವಿರೋಧವಾಗಿ ಆಯ್ಕೆಯಾದರು.
ಈ ಹಿಂದೆ ಸಂಘದ ಅಧ್ಯಕ್ಷರಾಗಿದ್ದ ಲಕ್ಷ್ಮೀಪತಿರಾವ್ ದೇಶಮುಖ್ ಇವರ ಅಕಾಲಿಕ ನಿಧನದಿಂದಾಗಿ ತೆರವಾದ ಅಧ್ಯಕ್ಷ ಸ್ಥಾನಕ್ಕಾಗಿ ಈ ಚುನಾವಣೆ ಜರುಗಿತು. ಸಂಘದ ಒಟ್ಟು 12 ಸದಸ್ಯರ ಪೈಕಿ 11 ಸದಸ್ಯರು ಚುನಾವಣಾ ಪ್ರಕ್ರೀಯೆಯಲ್ಲಿ ಭಾಗವಹಿಸಿದ್ದರು. ಜೆ.ಡಿ.ಎಸ್. ಜಿಲ್ಲಾ ಅಧ್ಯಕ್ಷ, ಸಂಘದ ಸದಸ್ಯ ಬಸನಗೌಡ ಸಂ. ಮಾಡಗಿ ಅವರೊಬ್ಬರೆ ಅಧ್ಯಕ್ಷ ಸ್ಥಾನಕ್ಕಾಗಿ ನಾಮಪತ್ರ ಸಲ್ಲಿಸಿದ್ದರಿಂದ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ವಿಜಯಕುಮಾರ ಉತ್ನಾಳ ಘೋಷಿಸಿದರು.
ನೂತನ ಅಧ್ಯಕ್ಷ ಬಸನಗೌಡ ಸಂ. ಮಾಡಗಿ ಮಾತನಾಡಿ ಸಂಘದ ಸದಸ್ಯರ ಅಕಾಲಿಕ ನಿಧನದಿಂದಾಗಿ ಈ ಚುನಾವಣೆ ಜರುಗಿದೆ. ಅವರ ಅವಧಿಯಲ್ಲಿ ತೆಗೆದುಕೊಂಡ ಉತ್ತಮ ನಿರ್ಧಾರಗಳನ್ನು ಮುಂದುವರೆಸಿಕೊಂಡು ಹೋಗುವದರ ಜೊತೆಗೆ ಸಂಘ ಇನ್ನೂ ಹೆಚ್ಚಿನ ಅಭಿವೃದ್ಧಿ ಸಾಧಿಸುವಂತಾಗಲು ಶಕ್ತಿ ಮೀರಿ ಪ್ರಯತ್ನಿಸುತ್ತೇನೆ ಎಂದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷ ಅವ್ವಪ್ಪಗೌಡ ಬಿರಾದಾರ, ಸದಸ್ಯರಾದ ಭೀಮನಗೌಡ ಅಂಗಡಗೇರಿ, ಕರಬಸಪ್ಪ ಮೇಟಿ, ಅಕ್ಕಮಹಾದೇವಿ ಸೋಮನಾಳ, ಶಿವಲಿಂಗಮ್ಮ ಡೋಣೂರ, ಮಲ್ಲಣ್ಣ ತೋಟದ, ಸುಭಾಸ ತಾಳಿಕೋಟಿ, ಬಸಪ್ಪ ಚಲವಾದಿ, ಭೀಮಣ್ಣ ಕೊಣ್ಣೂರ, ಮಲ್ಲಣ್ಣ ನಂದ್ಯಾಳ, ಆಯ್.ಕೆ. ಮಣ್ಣೂರ, ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.