ಮಾಲಾದೇವಿ ಕ್ರೀಡಾಂಗಣ ಅಭಿವೃದ್ಧಿಗೆ ಒತ್ತು : ಮಾಲಾದೇವಿ ದೇವಸ್ಥಾನ ಸಮಿತಿ ಜೊತೆ ಚರ್ಚಿಸಿದ ಶಾಸಕಿ
ಕಾರವಾರ 15: ಸಾರ್ವಜನಿಕರಿಗೆ ಹಾಗೂ ಕ್ರೀಡಾಪಟುಗಳಿಗೆ ಅನುಕೂಲವಾಗುವಂತೆ ಜಿಲ್ಲೆಯಲ್ಲಿಯೇ ಮಾದರಿಯಾಗುವಂತೆ ಮಾಲಾದೇವಿ ಕ್ರೀಡಾಂಗಣವನ್ನು ಅಭಿವೃದ್ಧಿಪಡಿಸಲಾಗುವುದು ಎಂದು ಕಾರವಾರ-ಅಂಕೋಲಾ ವಿಧಾನಸಭಾ ಕ್ಷೇತ್ರದ ಶಾಸಕಿ ರೂಪಾಲಿ ಎಸ್. ನಾಯ್ಕ ಅವರು ಹೇಳಿದರು.
ನಗರದ ಮಾಲಾದೇವಿ ಮೈದಾನದ ಅಭಿವೃದ್ಧಿಗಾಗಿ ನಗರಸಭೆಯ ಸಭಾಭವನದಲ್ಲಿ ಏರ್ಪಟಟ ಸಭೆಯಲ್ಲಿ ಸ್ಥಳೀಯ ಕ್ರೀಡಾಪಟುಗಳು, ನಗರಸಭೆ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಪೌರಾಯುಕ್ತರೊಂದಿಗೆ ಚರ್ಚಿಸಿದರು.
ಜಿಲ್ಲಾ ಕೇಂದ್ರವಾದ ಕಾರವಾರದಲ್ಲಿ ಸುಸಜ್ಜಿತವಾದ ಕ್ರೀಡಾಂಗಣವಿಲ್ಲದೆ ಕ್ರೀಡಾಪಟುಗಳು, ಕ್ರೀಡಾಭಿಮಾನಿಗಳು ಸಮಸ್ಯೆ ಎದುರಿಸುತ್ತಿದ್ದಾರೆ. ಅದಕ್ಕಾಗಿ ಈಗಾಗಲೇ ಕಾರವಾರ ಮಾಲಾದೇವಿ ಕ್ರೀಡಾಂಗಣ ಅಭಿವೃದ್ದಿಗೆ ಯೋಜನೆಯನ್ನು ರೂಪಿಸಲಾಗಿದೆ. ಅದರಂತೆ ಕ್ರೀಡಾಂಗಣ ಅಭಿವೃದ್ಧಿಯಾದರೆ ಕ್ರೀಡಾಪಟುಗಳಿಗೆ ಅನುಕೂಲವಾಗುತ್ತದೆ. ಮಾಲಾದೇವಿ ಕ್ರೀಡಾಂಗಣ ಜಿಲ್ಲೆಯಲ್ಲಿಯೇ ಮಾದರಿ ಕ್ರೀಡಾಂಗನಣವಾಗಿ ನಿರ್ಮಾಣವಾಗಬೇಕು ಹಾಗೂ ಕಾರವಾರ ಅಭಿವೃದ್ಧಿಗೆ ಸಾರ್ವಜನಿಕರ ಸಲಹೆ ಸೂಚನೆ ಅಗತ್ಯವಾಗಿದೆ ಎಂದರು.
ಮಾಲಾದೇವಿ ಕ್ರೀಡಾಂಗಣದಲ್ಲಿ ಸಾರ್ವಜನಿಕರಿಗೆ ಅನುಕೂಲವಾಗುವಂತೆ ವಾರ್ಕಿಂಗ್ ಪಾಥ್, ಆವರಣಗೋಡೆ ಸೇರಿದಂತೆ ಅವಶ್ಯಕವಾಗಿರುವ ಅಭಿವೃದ್ಧಿ ಮಾಡಲಾಗುವುದು. ಇವುಗಳನ್ನು ನೋಡಿಕೊಳ್ಳಲು ಸಮಿತಿಯೊಂದನ್ನು ನೇಮಿಸಿ ಕ್ರೀಡಾಂಗಣ ನಿರ್ವಹಣೆಗೆ ಕ್ರಮ ಕೈಗೊಳ್ಳಲಾಗುವುದು ಎಂದರು.
ನಗರ ಬೇರೆ ಬೇರೆ ಪ್ರದೇಶದಲ್ಲಿರುವ ಕ್ರೀಡಾಂಗಣಗಳ ಅಭಿವೃದ್ಧಿಗೆ ಯೋಜನೆ ರೂಪಿಸಲಾಗುತ್ತಿದ್ದು, ಕ್ರಮಕೈಗೊಳ್ಳಲಾಗುವುದು. ಮುಂದಿನ ದಿನಗಳಲ್ಲಿ ಅವುಗಳ ಅಭಿವೃದ್ಧಿಯೂ ಆಗುತ್ತದೆ ಎಂದು ಹಿರಿಯ ಕ್ರೀಡಾಪಟುಗಳಿಗೆ ಭರವಸೆ ನೀಡಿದರು. ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷ ಡಾ. ನಿತಿನ್ ಪಿಕಳೆ, ಉಪಾಧ್ಯಕ್ಷ ಪ್ರಕಾಶ ನಾಯ್ಕ, ಪೌರಾಯುಕ್ತ ಆರ್.ಪಿ.ನಾಯ್ಕ, ಮಾಲಾದೇವಿ ದೇವಸ್ಥಾನ ಸಮಿತಿ ಸದಸ್ಯರು, ಕ್ರೀಡಾಪಟುಗಳು ಉಪಸ್ಥಿತರಿದ್ದರು.