ಪತ್ತಿನ ಸಂಘದ ಕಟ್ಟಡ ಕಾಮಗಾರಿಗೆ ಶಾಸಕ ಸೋಮನಗೌಡ ಭೂಮಿಪೂಜೆ
ತಾಳಿಕೋಟಿ: ಸಮೀಪದ ಸಾಸನೂರ ಗ್ರಾಮದ ಕೃಷಿ ಪತ್ತಿನ ಸಹಕಾರಿ ಸಂಘ ಇದರ ನೂತನ ಕಟ್ಟಡ ನಿರ್ಮಾಣ ಕಾಮಗಾರಿಗೆ ದೇ. ಹಿಪ್ಪರಗಿ ಶಾಸಕ ಸೋಮನಗೌಡ ಪಾಟೀಲ(ಸಾಸನೂರ) ಭೂಮಿ ಪೂಜೆ ನೆರವೇರಿಸಿದರು.
ಯುಗಾದಿ ಹಬ್ಬದ ನಿಮಿತ್ಯ ತಮ್ಮ ಸ್ವಗ್ರಾಮವಾದ ಸಾಸನೂರಕ್ಕೆ ಕುಟುಂಬ ಸಮೇತ ಆಗಮಿಸಿ ಗ್ರಾಮದ ಆರಾಧ್ಯ ದೈವ ಮಾರುತೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ದರ್ಶನ ಪಡೆದು ನಂತರದಲ್ಲಿ ಸುಮಾರು ರೂ. 31 ಲಕ್ಷ ಮೋತ್ತದ ಕಟ್ಟಡ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಅವರು ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು.
ನನ್ನ ತಂದೆಯವರಾದ ದಿ. ಬಿ.ಎಸ್.ಪಾಟೀಲ(ಸಾಸನೂರ) ಅವರು ಈ ಸಹಕಾರಿ ಸಂಘದ ಬೆಳವಣಿಗೆಯಲ್ಲಿ ಅಪಾರ ಕಾಳಜಿ ವಹಿಸಿದ್ದರು. ಈ ಭಾಗದ ರೈತರು ಆರ್ಥಿಕವಾಗಿ ಸ್ವಾವಲಂಬಿಗಳಾಗಬೇಕೆಂಬುದು ಅವರ ಕನಸಾಗಿತ್ತು. ನಾನು ಸಹ ಈ ಉದ್ದೇಶಕ್ಕಾಗಿಯೆ ಇಂದು ಭೂಮಿಪೂಜೆಯನ್ನು ನೆರವೇರಿಸಿದ್ದೇನೆ. ಈ ಸಂಘವು ಇನ್ನು ಮುಂದೆ ಸುಸಜ್ಜಿತವಾದ ಕಟ್ಟಡದಲ್ಲಿ ಕಾರ್ಯ ನಿರ್ವಹಿಸಲಿದೆ. ಕ್ಷೇತ್ರವನ್ನು ಸಮಗ್ರವಾಗಿ ನೀರಾವರಿಗೆ ಒಳಪಡಿಸಲು ಹಗಲಿರುಳು ಶ್ರಮಿಸುತ್ತಿದ್ದೇನೆ.
ಈ ಭಾಗದ ಮಹತ್ವದ ರೂ. 780ಕೋಟಿ ವೆಚ್ಚದ ಯೋಜನೆಯಾದ ಬೂದಿಹಾಳ-ಪೀರಾಪೂರ ಇದರ ಭೂಮಿ ಪೂಜೆಯನ್ನು ಮುಖ್ಯಮಂತ್ರಿಗಳಾದ ಬೊಮ್ಮಾಯಿಯವರು ಶೀಘ್ರದಲ್ಲಿಯೇ ಮಾಡಲಿದ್ದಾರೆ. ಇದಕ್ಕೆ ನಿಮ್ಮೆಲ್ಲರ ಸಹಕಾರ ಬೇಕು ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಸಾಹಿತಿ ಅಶೋಕ ಹಂಚಲಿ ಇಡೀ ದೇಶಕ್ಕೆ ಅನ್ನ ನೀಡುವ ಅನ್ನದಾತ ರೈತನ ಬದುಕು ಸ್ವಾವಲಂಬಿಯ ಬದುಕಾಗಬೇಕು ಅವನು ನೀಡುವಂಥವನಾಗಬೇಕೆ ಹೋರತು ಬೇಡುವವನಾಗಬಾರದು ಸಹಕಾರ ಸಂಘಗಳ ಮೂಲಕ ನಮ್ಮ ರೈತನ ಜೀವನ ಉಜ್ವಲವಾಗಲು ಸಾಧ್ಯ ಇದೆ. ಇದಕ್ಕಾಗಿ ಅವರು ಪರಸ್ಪರ ಸಹಕರಿಸುವ ಅಗತ್ಯವಿದೆ ಎಂದು ತಿಳಿಸಿದರು.
ಶಾಸಕ ಸಹೋದರ ಹಾಗೂ ಪಿ.ಕೆ.ಪಿ.ಎಸ್ ಅಧ್ಯಕ್ಷ ಸುರೇಶಗೌಡ ಪಾಟೀಲ(ಸಾಸನೂರ) ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಜಿ.ಪಂ. ಮಾಜಿ ಸದಸ್ಯ ಶಿವಾನಂದ ದೇಸಾಯಿ ಕ್ಷೇತ್ರ ಶಿಕ್ಷಣಾಧಿಕಾರಿ ಸಂಗಮೇಶ ಪೂಜಾರಿ, ಬಸನಗೌಡ ಪಾಟೀಲ(ಚಬನೂರ) ಶಿಕ್ಷಕ ಬಿ.ಟಿ. ವಜ್ಜಲ ಅಯ್ಯನಗೌಡ ಸಾಸನೂರ, ಶೇಖರಗೌಡ ಪಾಟೀಲ, ರೇವಣಸಿದ್ದಯ್ಯ ಹಿರೇಮಠ, ಬಸನಗೌಡ ಬಿಂಜಲಭಾವಿ, ನಿಂಗನಗೌಡ ಚೌದ್ರಿ, ಶಂಕರಗೌಡ ಜಲಪೂರ, ಸೋಮನಗೌಡ ಸಾಸನೂರ, ಪರಮಣ್ಣ ಸಹುಕಾರ, ಮತ್ತಿತರರು ಉಪಸ್ಥಿತರಿದ್ದರು.