ತಾಳಿಕೋಟಿ

ಶಾಸಕ ಸಿ. ಟಿ. ರವಿ ಹೇಳಿಕೆ ಖಂಡಿಸಿ ಪ್ರತಿಭಟನೆ ಅಮಾನತ್ತಿಗೆ ಆಗ್ರಹ

ಶಾಸಕ ಸಿ. ಟಿ. ರವಿ ಹೇಳಿಕೆ ಖಂಡಿಸಿ ಪ್ರತಿಭಟನೆ ಅಮಾನತ್ತಿಗೆ ಆಗ್ರಹ

ತಾಳಿಕೋಟಿ 12: ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ  ಹಾಗೂ ಶಾಸಕ ಸಿಟಿ. ರವಿ ರಾಜಪೂತ ಸಮಾಜದ ಕುರಿತು ಹೇಳಿರುವ ಅವಹೇಳನಕಾರಿ ಹೇಳಿಕೆಯನ್ನು ಖಂಡಿಸಿ ಅವರ ಸದಸ್ಯತ್ವ ರದ್ದುಗೊಳಿಸಿ ಪಕ್ಷದಿಂದ ಅಮಾನತ್ತುಗೊಳಿಸಬೇಕೆಂದು ಆಗ್ರಹಿಸಿ ರಾಜಪೂತ ಸಮಾಜದ ವತಿಯಿಂದ ತಹಶೀಲ್ದಾರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು. 

ಮಂಗಳವಾರ ಪಟ್ಟಣದ ರಾಜಪೂತ ಗಲ್ಲಿಯ ಅಂಬಾಭವಾನಿ ಮಂದಿರದಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆಯು ಶಾಸಕ ಸಿ.ಟಿ ರವಿ ವಿರುದ್ಧ ಧಿಕ್ಕಾರಗಳನ್ನು ಕೂಗುತ್ತಾ ಕತ್ರಿ ಬಝಾರ ಮೂಲಕ ಹಾದು ಶಿವಾಜಿ ವೃತ್ತದಿಂದ ಮಹಾರಾಣಾ ಪ್ರತಾಪಸಿಂಹ ಸರ್ಕಲ್ಗೆ ತಲುಪಿ ಸಭೆಯಾಗಿ ಮಾರ್ಪಟ್ಟಿತು. 

ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡುತ್ತಾ ಪುರಸಭೆ ಮಾಜಿ ಸದಸ್ಯ ವಿಜಯಸಿಂಗ ಹಜೇರಿ ಶಾಸಕ ಸಿ. ಟಿ. ರವಿ ಅವರು 800 ವರ್ಷಗಳ ಇತಿಹಾಸ ಹೊಂದಿದ ರಾಜಪೂತ ಸಮಾಜವನ್ನು ಸರಿಯಾಗಿ ಅರ್ಥಮಾಡಿಕೊಳ್ಳದೆ ಈ ಸಮಾಜದ ಕುರಿತು ಹಗುರವಾಗಿ ಮಾತನಾಡಿ ಉದ್ಧಟತನವನ್ನು ತೊರಿದ್ದಾರೆ. ಅವರು ಶಾಸಕರಾಗಿ ಮುಂದುವರೆಯುವ ಯಾವ ನೈತಿಕತೆಯು ಉಳಿಸಿಕೊಂಡಿಲ್ಲ. ಅವರನ್ನು ತಕ್ಷಣ ಶಾಸಕ ಸ್ಥಾನದಿಂದ ಅಮಾನತ್ತುಗೊಳಿಸಿ ಕಾನೂನು ಕ್ರಮಕ್ಕೆ ಒಳಪಡಿಸಬೇಕೆಂದು ಆಗ್ರಹಿಸಿದರು.

ಮುಖಂಡ ಸುರೇಶ ಹಜೇರಿ ಮಾತನಾಡಿ ದೇಶದ ಸ್ವಾತಂತ್ರ್ಯಕ್ಕೆ ಹಾಗೂ ಹಿಂದೂ ಧರ್ಮದ ಉಥ್ಥಾನಕ್ಕೆ ರಾಜಪೂತರ ಕೊಡುಗೆ ಅಪಾರವಾಗಿದೆ. ದೇಶದ ಸೈನ್ಯದಲ್ಲಿ ರಾಜಪೂತ ರೆಜಿಮೆಂಟ್ ಸ್ಥಾಪಿಸಲಾಗಿದ್ದು ಸಿ. ಟಿ. ರವಿ ಅವರು ಮರೆತಿದ್ದಾರೆ. ಇತಿಹಾಸವನ್ನು ತಿಳಿಯದೆ. ಮಾತನಾಡುವುದು ಅವರಿಗೆ ಶೋಭೆ ತರುವುದಿಲ್ಲ ಅವರು ಪಕ್ಷದಲ್ಲಿ ಇರಲು ಅರ್ಹರಾಗಿಲ್ಲ ತಕ್ಷಣ ಅವರನ್ನು ಎಲ್ಲಾ ಹುದ್ದೆಗಳಿಂದ ತೆಗೆದುಹಾಕಬೇಕು ಎಂದು ಹೇಳಿದರು.

ಶಿರಸ್ತೆದಾರ ಜಗದೀಶ ಜೈನಾಪೂರ ಮೂಲಕ ಘನತೆವೆತ್ತ ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಲಾಯಿತು. 

ಪ್ರತಿಕೃತಿ ದಹಿಸಿ ಆಕ್ರೋಶ: ರಾಜಪೂತ ಸಮಾಜದ ಕುರಿತು ಅವಹೇಳನಕಾರಿಯಾಗಿ ಮಾತನಾಡಿದ ಶಾಸಕ ಸಿ. ಟಿ. ರವಿ ಅವರ ಪ್ರತಿಕೃತಿ ದಹಿಸಿ ಆಕ್ರೋಶವನ್ನು ವ್ಯಕ್ತಪಡಿಸಲಾಯಿತು.

  ರಾಜಪೂತ ಸಮಾಜದ ಅಧ್ಯಕ್ಷ ಹರಿಸಿಂಗ ಮೂಲಿಮನಿ, ಗೋವಿಂದಸಿಂಗ ಗೌಡಗೇರಿ, ಪ್ರಕಾಶ ಹಜೇರಿ, ಪುರಸಭೆ ಸದಸ್ಯ ಜೈಸಿಂಗ ಮೂಲಿಮನಿ, ಸುರೇಶ ಹಜೇರಿ, ಗೋವಿಂದಸಿಂಗ ಮೂಲಿಮನಿ, ರತನಸಿಂಗ ಕೊಕಟನೂರ, ಅಮಿಥಸಿಂಗ ಮನಗೂಳಿ, ಸುಭಾಷ ಗೌಡಗೇರಿ, ರಘುರಾಮಸಿಂಗ ಹಜೇರಿ, ಭರತಸಿಂಗ ವಿಜಾಪೂರ, ಗೋಪಾಲಸಿಂಗ ರಜಪೂತ, ರಮೇಶ ಗೌಡಗೇರಿ, ಬಾಬು ಹಜೇರಿ, ಪಿಂಟೂ ಹಜೇರಿ, ಶಿರಸಕುಮಾರ ಹಾಗೂ ಸಮಾಜದ ಮಹಿಳಾ ಮಂಡಳಿಯ ಸದಸ್ಯರು ಇದ್ದರು 

ಸುದ್ದಿ ಓದಿ