ಸುಸಜ್ಜಿತ ಲ್ಯಾಬ್ ನಿರ್ಮಾಣಕ್ಕೆ ಶಾಸಕ ಬಸವರಾಜ ಶಿವಣ್ಣನವರ ಭರವಸೆ
ಬ್ಯಾಡಗಿ:ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರಕ್ಕೆ ಶೀಘ್ರದಲ್ಲೇ ವೈದ್ಯಾಧಿಕಾರಿಗಳ ವಸತಿ ನಿಲಯ ನಿರ್ಮಾಣ ಸೇರಿದಂತೆ ಕೊರತೆಯಿರುವ ಅಗತ್ಯ ಸಿಬ್ಬಂದಿ ಭರ್ತಿ ಹಾಗೂ ಸುಸಜ್ಜಿತ ಲ್ಯಾಬ್ ನಿರ್ಮಾಣಕ್ಕೆ ಮುಂದಾಗುವುದಾಗಿ ಶಾಸಕ ಬಸವರಾಜ ಶಿವಣ್ಣನವರ ಭರವಸೆ ನೀಡಿದರು.
ಪಟ್ಟಣದ ಕಾಂಗ್ರೆಸ್ ಕಛೇರಿ ಆವರಣದಲ್ಲಿ ಕಾಂಗ್ರೆಸ್ ತಾಲ್ಲೂಕಾ ಘಟಕದ ವತಿಯಿಂದ ಬೆಂಗಳೂರಿನ ಸಪ್ತಗಿರಿ ಆಸ್ಪತ್ರೆ ಸಹಯೋಗದಲ್ಲಿ ಜರುಗಿದ ಹೃದ್ರೋಗ, ನರರೋಗ ಹಾಗೂ ಮೂತ್ರಪಿಂಡಗಳ ಉಚಿತ ತಪಾಸಣೆ ಶಿಬಿರ ಉದ್ಘಾಟಿಸಿ ಮಾತನಾಡಿದರು. ವೈದ್ಯರ ಪರಿಶ್ರಮ ಹಾಗೂ ನಿಸ್ವಾರ್ಥ ಸೇವೆಯಿಂದ ಸ್ಥಳೀಯ ಆರೋಗ್ಯ ಸಮುದಾಯ ಕೇಂದ್ರವು ರಾಜ್ಯ ದಲ್ಲೇ ಹತ್ತನೇ ಅತ್ಯುತ್ತಮ ಆರೋಗ್ಯ ಕೇಂದ್ರ ಎಂಬ ಕೀರ್ತೆಗೆ ಭಾಜನವಾಗಿದೆ, ನಿತ್ಯವೂ 400 ಕ್ಕೂ ಅಧಿಕ ಹೊರ ರೋಗಿಗಳು (ಒಪಿಡಿ) ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ, ಪುರುಷ ವ್ಯದ್ಯರೇ 50ಕ್ಕೂ ಹೆಚ್ಚು ಮಕ್ಕಳನ್ನು ಹೆರಿಗೆ ಮಾಡಿಸುತ್ತಿದ್ದಾರೆ, ಈಗಿರುವ ಸೌಲಭ್ಯದಲ್ಲೇ ಸಾಕಷ್ಟು ಆಪರೇಶನ್ಗಳನ್ನು ಮಾಡಿ ಯಶಸ್ವಿಯಾಗಿರುವ ಉದಾಹರಣೆಗಳಿವೆ ಎಂದರು.
ತಜ್ಞ ವೈದ್ಯರ ಅಗತ್ಯವಿದೆ:ಸಮುದಾಯ ಆರೋಗ್ಯ ಕೇಂದ್ರಕ್ಕೆ ಇನ್ನಷ್ಟು ತಜ್ಞ ವೈದ್ಯರು ಸೇರಿದಂತೆ ಮಹಿಳಾ ವೈದ್ಯರ ಅವಶ್ಯ ಕತೆಯಿದ್ದು ಶೀಘ್ರದಲ್ಲೇ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ, ವೈದ್ಯರ ನಿಯೋಜನೆ ಮಾಡಿಸಲಾಗುವುದು, ಅಲ್ಲದೇ ಈಗಿರುವ ಶವಾಗಾರದಲ್ಲಿ (ಪಿ.ಎಂ.ರೂಮ್) ಕೇವಲ ಒಂದು ಶವಕ್ಕೆ ಅವಕಾಶವಿದೆ, ನೂತನ ಶವಾಗಾರ ನಿರ್ಮಿಸುವ ಮೂಲಕ ಇನ್ನಷ್ಟು ಹೈಜಿನಿಕ್ ಮಾಡಲಾಗುವುದು, ವೈದ್ಯಾಧಿಕಾರಿಗಳು ಬೇರೊಂದು ಊರಿನಲ್ಲಿ ಮನೆ ಮಾಡಿಕೊಂಡಿರುವ ಬಗ್ಗೆ ಮಾಹಿತಿ ಲಭ್ಯವಿದ್ದು ಸುಸಜ್ಜಿತ ವಸತಿ ನಿಲಯಗಳನ್ನು ನಿರ್ಮಿಸುವ ಮೂಲಕ ಕೇಂದ್ರ ಸ್ಥಳದಲ್ಲೇ ಲಭ್ಯವಿರುವಂತೆ ನೋಡಿ ಕೊಳ್ಳ ಲಾಗುವುದು ಎಂದರು.
ಆಯೋಜನೆ ಸುಲಭವಲ್ಲ: ಉಚಿತ ವೈದ್ಯಕೀಯ ಶಿಬಿರ ಆಯೋಜಿಸುವುದು ಸುಲಭದ ಮಾತಲ್ಲ ವೈದ್ಯಕೀಯ ಸೇವೆಗಳನ್ನು ಉಚಿತವಾಗಿ ನೀಡಿದಾಗ ಮಾತ್ರ ರೋಗಿಗಳು ಗಣನೀಯ ಸಂಖ್ಯೆಯಲ್ಲಿ ಸೇರುತ್ತಾರೆ, ಆದಾಗ್ಯೂ ಕಷ್ಟಪಟ್ಟು ಉತ್ತಮ ರೀತಿ ಯಲ್ಲಿ ಆಯೋಜಿಸಿದಲ್ಲಿ ಸಾಕಷ್ಟು ಜನರಿಗೆ ಆರೋಗ್ಯಸೇವೆ ಉಚಿತವಾಗಿ ಪಡೆಯಲು ಸಹಕಾರಿಯಾಗಲಿದೆ, ಇದಾದ ಬಳಿ ಕವೂ ಬಡಕುಟುಂಬದ ಹಿನ್ನೆಲೆಯುಳ್ಳ ರೋಗಿಗಳು ಹೆಚ್ಚಿನ ತಪಾಸಣೆಗೆ ಆಸ್ಪತ್ರೆಗೆ ಹೋಗುವುದಿಲ್ಲ ಏಕೆಂದರೆ ಭೇಟಿ ನೀಡಲು ದುಬಾರಿ ಎಂಬ ಅಭಿಪ್ರಾಯಕ್ಕೆ ಬರುತ್ತಿರುವುದು ಖೇದದ ಸಂಗತಿ ಎಂದರು.
ಒತ್ತಡ ಕಡಿಮೆ ಮಾಡಿಕೊಳ್ಳಿ: ಡಾ.ಪುಟ್ಟರಾಜು ಮಾತನಾಡಿ, ಅನಿಯಂತ್ರಿತ ಕೆಲಸದ ಒತ್ತಡವು ಅಧಿಕ ರಕ್ತದೊತ್ತಡಕ್ಕೆ ಕಾರಣ ವಾಗಬಹುದಲ್ಲದೇ ತನ್ಮೂಲಕ ಹೃದ್ರೋಗಕ್ಕೆ ಕಾರಣವಾಗಬಹುದು, ಅಂತಹ ಒತ್ತಡದಿಂದ ಹೊರಬರುವಂತಹ ಪ್ರಯತ್ನಗಳು ನಡೆಯಬೇಕು ಒಂದು ವೇಳೆ ಒತ್ತಡ ನಿರಂತರವಾಗಿದ್ದಲ್ಲಿ ರೋಗಗಳು ನಮ್ಮ ಮೇಲೆ ಆಕ್ರಮಣಕ್ಕೆ ಸಜ್ಜಾಗುತ್ತವೆ, ಹೀಗಾಗಿ ಆತಂಕ, ಖಿನ್ನತೆ, ಜೀರ್ಣ ಸಮಸ್ಯೆ, ತಲೆನೋವು, ಸ್ನಾಯುಸೆಳೆತ ಹೃದ್ರೋಗ, ಹೃದಯಾಘಾತ, ಅಧಿಕ ರಕ್ತದೊತ್ತಡ ಮತ್ತು ಪಾಶ್ರ್ವವಾಯು, ನಿದ್ರಾಹೀನತೆ ಇನ್ನಿತರ ಸಮಸ್ಯೆಗಳು ಎದುರಾಗಲಿವೆ ಎಂದರು.
ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಏಕನಾಥ್ ಭಾನುವಳ್ಳಿ ಬ್ಯಾಡಗಿ ಬ್ಲಾಕ್ ಅಧ್ಯಕ್ಷ ದಾನಪ್ಪ ಚೂರಿ, ಕಾಗಿನೆಲೆ ಬ್ಲಾಕ್ ಅಧ್ಯಕ್ಷ ಶಿವನಗೌಡ ವೀರನಗೌಡ್ರ, ಮುಖಂಡರಾದ ಬಸವರಾಜ ಸವಣೂರು, ಡಾ.ಎ.ಎಮ್.ಸೌದಾಗರ, ನಾಗರಾಜ ಆನ್ವೇರಿ, ಆರ್.ಜಿ.ಕಳ್ಯಾಳ, ವೀರನಗೌಡ ಪೊಲೀಸ್ಗೌಡ್ರ, ಪ್ರಕಾಶ ಬನ್ನಿಹಟ್ಟಿ, ಸುರೇಶಗೌಡ ಪಾಟೀಲ, ಡಿ.ಎಚ್.ಬುಡ್ಡನಗೌಡ್ರ, ಬೀರಪ್ಪ ಬಣಕಾರ, ಚನ್ನಬಸಪ್ಪ ಹುಲ್ಲತ್ತಿ, ಮುತ್ತಣ್ಣ ಶಿಗ್ಗಾವಿ, ಶಿವಪುತ್ರಪ್ಪ ಅಗಡಿ, ಮಲ್ಲಿಕಾಜರ್ುನ ಕರಲಿಂಗಪ್ಪನವರ ಇನ್ನಿತರರಿದ್ದರು ಮಾರುತಿ ಅಚ್ಚಿಗೇರಿ ಸ್ವಾಗತಿಸಿದರು, ರಮೇಶ ಸುತ್ತಕೋಟಿ ವಂದಿಸಿದರು.