ಬಸವೇಶ್ವರ ಮೂರ್ತಿ ಪ್ರತಿಷ್ಠಾಪನೆಗೆ ಕ್ರಮ ಕೈಗೂಳ್ಳುವಂತೆ ಶಾಸಕ ಎ.ಎಸ್.ಪಾಟೀಲ ಮನವಿ
ತಾಳಿಕೋಟೆ,ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಅಶ್ವಾರೂಢವಾದ ಬಸವೇಶ್ವರರ ಭವ್ಯ ಮೂರ್ತಿಯನ್ನು ಪ್ರತಿಷ್ಠಾಪಿಸಲು ಕ್ರಮ ಕೈಕೊಳ್ಳಲಾಗುವದು. ನಾನಾ ಕಾರಣಗಳಿಂದ ನಿಂತು ಹೋಗಿದ್ದ ಬಸವ ಜಯಂತಿಯನ್ನು ಈ ವರ್ಷದಿಂದ ಅದ್ದೂರಿಯಾಗಿ ಆಚರಣೆ ಮಾಡಲಾಗುವದು ಎಂದು ಮುದ್ದೇಬಿಹಾಳ ಶಾಸಕ, ಕರ್ನಾಟಕ ಆಹಾರ ಮತ್ತು ನಾಗರೀಕ ಸರಬರಾಜು ನಿಗಮದ ಅಧ್ಯಕ್ಷ ಎ.ಎಸ್.ಪಾಟೀಲ ನಡಹಳ್ಳಿ ಹೇಳಿದರು.
ಅವರು ಪಟ್ಟಣದ ಎಪಿಎಂಸಿ ಸಭಾಭವನದಲ್ಲಿ ನಡೆದ ಬಸವ ಜಯಂತಿ ಉತ್ಸವ ಸಮಿತಿಯ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ಬಸವ ಜಯಂತಿಯನ್ನು ಪಟ್ಟಣದಲ್ಲಿ ಪ್ರತಿ ವರ್ಷ ಅದ್ದೂರಿಯಾಗಿ ಆಚರಿಸಬೇಕು ಎನ್ನುವದು ಬಸವಾಭಿಮಾನಿಗಳ ಆಶಯವಾಗಿದೆ. ಅದನ್ನು ಈಡೇರಿಸಲಾಗುವದು. ಪ್ರತಿ ವರ್ಷ ಬಸವ ಜಯಂತಿಯಂದು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವದು. ರಾಜವಾಡೆಯಿಂದ ಬಸವೇಶ್ವರ ವೃತ್ತದವರೆಗೆ ಅದ್ದೂರಿಯಾಗಿ ಮೆರವಣಿಗೆ ಮಾಡಲಾಗುವದು. ವಚನ ಸಾಹಿತ್ಯದ ವಿವಿಧ ಆಯಾಮಗಳನ್ನು ಮುಂದಿನ ಪಿಳಿಗೆಗೆ ಪರಿಚಯಿಸುವ ಕಾರ್ಯಕ್ರಮಗಳನ್ನು ಕೈಕೊಳ್ಳಲಾಗುವದು. ಪಟ್ಟಣದಲ್ಲಿ ಬಸವೇಶ್ವರ ವೃತ್ತ ಎಂದು ನಾಮಕರಗೊಂಡ ವೃತ್ತದಲ್ಲಿ ಬಸವೇಶ್ವರ ಮೂರ್ತಿ ಸ್ಥಾಪಿಸಬೇಕೆನ್ನುವದು ಎಲ್ಲರ ಆಶಯವಾಗಿದೆ. ಪಟ್ಟಣದ ಹೃದಯ ಭಾಗದಲ್ಲಿರುವ ವೃತ್ತದಲ್ಲಿ ಸರಕಾರ ಹಾಗೂ ಜನರ ಸಹಭಾಗಿತ್ವದಲ್ಲಿ ಮೂರ್ತಿ ಪ್ರತಿಷ್ಠಾಪಿಸಲು ಕ್ರಮ ಕೈಕೊಳ್ಳಲಾಗುವದು ಎಂದರು.
ಸಾಹಿತಿ ಅಶೋಕ ಹಂಚಲಿ ಮಾತನಾಡಿ, ಬಸವೇಶ್ವರ ಮೂರ್ತಿ ಪ್ರತಿಷ್ಠಾಪಿಸಬೇಕು ಎನ್ನುವದು ಬಹುದಿನಗಳ ಆಶಯವಾಗಿದೆ. ಮೂರ್ತಿ ಪ್ರತಿಷ್ಠಾಪಿಸಲು ಒಮ್ಮತದ ನಿರ್ಣಯಗಳನ್ನು ಪುರಸಭೆ ಆಡಳಿತ ಮಂಡಳಿಗೆ ಸೂಚಿಸಬೇಕು. ಅದಕ್ಕೆ ಬೇಕಾದ ಅನುದಾನ ಒದಗಿಸಬೇಕು ಎಂದು ಮನವಿ ಮಾಡಿದರು.
ಸಾಹಿತಿ ಶ್ರೀಕಾಂತ ಪತ್ತಾರ, ವಸಂತ ಜೋಶಿ, ಡಾ.ವಿ.ಎಸ್.ಕಾರ್ಚಿ, ಗುಂಡುರಾವ ಧನಪಾಲ, ರಮೇಶ ಮೂಕಿಹಾಳ, ಪ್ರಭುಗೌಡ ಮದರಕಲ್ಲ, ಮಲ್ಲಿಕಾರ್ಜುನ ಹಿಪ್ಪರಗಿ, ಶಿವಲಿಂಗಮ್ಮ ಬಳಗಾನೂರ, ಅಪ್ಪಾಸಾಹೇಬ ಮೂಲಿಮನಿ, ಆರ್.ಎಲ್.ಕೊಪ್ಪದ, ಡಾ.ಶ್ರೀಶೈಲ ಹುಕ್ಕೇರಿ ಮಾತನಾಡಿ, ಬಸವೇಶ್ವರ ಮೂರ್ತಿ ಪ್ರತಿಷ್ಠಾಪನೆ, ಬಸವ ಉತ್ಸವ ಆಚರಣೆಗೆ ಸಲಹೆ ಸೂಚನೆಗಳನ್ನು ನೀಡಿದರು.
ಈ ಸಂದರ್ಭದಲ್ಲಿ ಕೈಲಾಸಪೇಠೇಯ ಬಸವಪ್ರಭು ದೇವರು, ಮಾಜಿ ಜಿಪಂ ಸದಸ್ಯರಾದ ಬಸನಗೌಡ ವಣಕ್ಯಾಳ, ಎಸ್.ಎ.ಸರೂರ, ಕಾಸಿನಾಥ ಸಜ್ಜನ, ಎಮ್.ಎಸ್.ಸರಶೆಟ್ಟಿ, ದ್ಯಾಮನಗೌಡ ಪಾಟೀ, ಡಾ.ಗುರು ಚಿತ್ತರಗಿ ಸೇರಿದಂತೆ ಇತರರು ಇದ್ದರು. ಸೋಮಶೇಖರ ಹಿರೇಮಠ ಪ್ರಾರ್ಥಿಸಿದರು. ಮಹಾಂತೇಶ ಮುರಾಳ ಸ್ವಾಗತಿಸಿದರು. ಜಿ.ಎಸ್.ಜಮ್ಮಲದಿನ್ನಿ ನಿರೂಪಿಸಿದರು.