ಬೀಗ ಜಡಿದು ಪ್ರತಿಭಟನೆ : ಮಿಣಜಗಿ ಗ್ರಾಪಂಕ್ಕೆ ಮೂಲಭೂತ ಸೌಲಭ್ಯ ಒದಗಿಸುವಂತೆ ಆಗ್ರಹಿಸಿ ಪ್ರತಿಭಟನೆ
ತಾಳಿಕೋಟೆ14: ತಾಲೂಕಿನ ಮಿಣಜಗಿ ಗ್ರಾಮದ ಎಸ್.ಸಿ ಕಾಲೋನಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸುವಂತೆ ಒತ್ತಾಯಿಸಿ ಅಲ್ಲಿನ ನಿವಾಸಿ ಹಾಗೂ ಅಂಬೇಡ್ಕರ ಸೇನೆಯ ಪದಾಧಿಕಾರಿಗಳು ಗ್ರಾಮ ಪಂಚಾಯತಿಗೆ ಬೀಗ ಜಡಿದು ಪ್ರತಿಭಟನೆ ನಡೆಸಿದ ಪ್ರಸಂಗ ಗುರವಾರ ನಡೆದಿದೆ.
ಮಿಣಜಗಿ ಗ್ರಾಮದಲ್ಲಿ ಎಸ್.ಸಿ ಕಾಲನಿಯಲ್ಲಿ ಸುಮಾರು 1 ಸಾವಿರ ಜನಸಂಖ್ಯೆ ಹೊಂದಿದ್ದು ಅಲ್ಲಿನ ನಿವಾಸಿಗಳಿಗೆ ಮೂಲಭೂತ ಸೌಲಭ್ಯ ಇರುವದಿಲ್ಲ. ರಸ್ತೆ ಮೇಲೆ ಚರಂಡಿ ನೀರು ಹರಿಯುತ್ತಿದ್ದರೂ ಸಹಿತ ಯಾರು ಕೇಳುತ್ತಿಲ್ಲ. ಜನಪ್ರತಿನಿಧಿಗಳು, ಅಧಿಕಾರಿಗಳು ಇತ್ತ ಸುಳಿಯುತ್ತಿಲ್ಲ. ಮೂಲಭೂತ ಸೌಲಭ್ಯ ಒದಗಿಸುವಂತೆ ಗ್ರಾಮ ಪಂಚಾಯತಗೆ ತಿಳಿಸಿದ್ದರೂ ಸಹಿತ ಯಾವುದೇ ಕ್ರಮ ಕೈಕೊಂಡಿಲ್ಲ. ಸ್ಥಳಕ್ಕೆ ಹಿರಿಯ ಅಧಿಕಾರಿಗಳು ಆಗಮಿಸಬೇಕು. ಇಲ್ಲವಾದಲ್ಲಿ ಮುದ್ದೇಬಿಹಾಳ ಶಾಸಕರು ಆಗಮಿಸಿ ಕಾಲನಿಯ ಸಮಸ್ಯೆಯನ್ನು ಆಲಿಸಿ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಕ್ರಮ ಕೈಕೊಳ್ಳುವವರೆಗೂ ಹೋರಾಟ ಕೈಬಿಡುವದಿಲ್ಲ ಎಂದು ಪ್ರತಿಭಟನಾಕಾರರು ಪಟ್ಟು ಹಿಡಿದರು.
ವಿಷಯ ತಿಳಿದು ಸ್ಥಳಕ್ಕಾಗಮಿಸಿದ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಬಿ.ಆರ್.ಬಿರಾದಾರ, ಎಸೈ ವಿನೋದ ದೊಡಮನಿ, ಪಿಡಿಓ ಬಿ.ಎಮ್.ಸಾಗರ ಪ್ರತಿಭಟನಾಕಾರರ ಮನವಿಯನ್ನು ಆಲಿಸಿದರು, ಈ ಸಂದರ್ಭದಲ್ಲಿ ಚರಂಡಿ ನೀರು ಸಾರಾಗವಾಗಿ ಹರಿದು ಹೋಗುವಂತೆ ಕ್ರಮ ಕೈಕೊಳ್ಳಲಾಗುವದು. ಸಿಸಿ ರಸ್ತೆ ಕಾಮಗಾರಿ ಬಗ್ಗೆ ಮೇಲಾಧಿಕಾರಿಗಳಿಗೆ ಮಾಹಿತಿ ನೀಡಿ, ಅವರ ನಿರ್ದೇಶನದ ಪ್ರಕಾರ ಕ್ರಮ ಕೈಕೊಳ್ಳುವುದಾಗಿ ಭರವಸೆ ನೀಡಿದ ಹಿನ್ನಲೆಯಲ್ಲಿ ಪ್ರತಿಭಟನೆಯನ್ನು ಹಿಂತೆಗೆದುಕೊಳ್ಳಲಾಯಿತು.
ಈ ಸಂದರ್ಭದಲ್ಲಿ ಅಂಬೇಡ್ಕರ ಸೇನೆಯ ತಾಲೂಕು ಪ್ರಧಾನ ಕಾರ್ಯದರ್ಶಿ ಗೋಪಾಲ ಕಟ್ಟಿಮನಿ, ಗ್ರಾಮಸ್ಥರಾದ ರಾಮಪ್ಪ ತಳವಾರ, ಬಾಬು ರಾಂಪೂರ, ಹೈಯಾಳಪ್ಪ ಚಲವಾದಿ, ಪ್ರಭು ಮಾದರ, ಶರಣಮ್ಮ ಮಾದರ, ಮಲ್ಲಮ್ಮ ಮಾದರ, ಸತ್ಯಮ್ಮ ಚಲವಾದಿ, ಮಾಯಮ್ಮ ಬಿದ್ನಾಳ, ರೇಣುಕಾ ತಳವಾರ, ಸಂಗಮ್ಮ ಮಾದರ, ಲಕ್ಷ್ಮೀಬಾಯಿ ಚಲವಾದಿ, ದೇವಕ್ಕೆಮ್ಮ ಮಾದರ, ಬಸಮ್ಮ ಚಲವಾದಿ, ಯಮನವ್ವ ತಳವಾರ, ಗಂಗವ್ವ ಮಾದರ, ಪಾರ್ವತಿ ತಳವಾರ, ಮರಲಿಂಗವ್ವ ಚಲವಾದಿ, ಭೀಮವ್ವ ರಾಂಪೂರ, ಉಮ್ಮಕ್ಕ ಕೊಣ್ಣೂರ, ರೇಣುಕಾ ಚಲವಾದಿ, ರೇಖಾ ಮಾದರ, ರೇಣುಕಾ ಮುರಾಳ, ಕಾಶಿಬಾಯಿ ಮಾದರ, ಶಾಂತವ್ವ ಚಟ್ನಳ್ಳಿ ಸೇರಿದಂತೆ ಇತರರು ಇದ್ದರು.