ಕಾರವಾರ

ಹೈಕೋರ್ಟ ಸೂಚನೆಯ ಮೇರೆಗೆ ಹಿರಿಯ ಪರಿಸರ ಅಧಿಕಾರಿಯಿಂದ ಸ್ಥಳ ಭೇಟಿ

ಹೈಕೋರ್ಟ ಸೂಚನೆಯ ಮೇರೆಗೆ ಹಿರಿಯ ಪರಿಸರ ಅಧಿಕಾರಿಯಿಂದ ಸ್ಥಳ ಭೇಟಿ
ಮೀನುಗಾರರ ಮುಖಂಡರು ಹಾಗೂ ಪರಿಸರ ಪರ ಇರುವ ಓರ್ವರು ಪರಿಸರ ಅಧಿಕಾರಿಗೆ ಮೌಖಿಕ ತಕರಾರು ಹೇಳಿದ ಕ್ಷಣ

ಕಾರವಾರ ಬಂದರು : ಎರಡನೇ ಹಂತದ ವಿಸ್ತರಣೆ ವಿವಾದ : 

ಕಾರವಾರ 01: ಕೇಂದ್ರ ಬಿಜೆಪಿ ಸರ್ಕಾರದ ಕನಸಿನ ಯೋಜನೆಯ ಸಾಗರಮಾಲಾದ ಭಾಗವಾಗಿರುವ ಅಲೆ ತಡೆಗೋಡೆ ನಿರ್ಮಾಣದ ಕಾಮಗಾರಿ ಸ್ಥಳ ವಿವಾದಕ್ಕೆ ಈಡಾಗಿದ್ದು, ವಿವಾದಿತ ಸ್ಥಳಕ್ಕೆ ಮಂಗಳೂರಿನ ಹಿರಿಯ ಪರಿಸರ ಅಧಿಕಾರಿ ರಮೇಶ್ ನಾಯ್ಕ, ಕಾರವಾರದ ಪರಿಸರ ಅಧಿಕಾರಿ ಡಾ.ಲಕ್ಷ್ಮೀಕಾಂತ, ಸಹಾಯಕ ಪರಿಸರ ಅಧಿಕಾರಿ ಗಣೇಶ್ ಹೆಗಡೆ ಭೇಟಿ ನೀಡಿದರು. ಎರಡನೇ ಹಂತದ ಬಂದರು ವಿಸ್ತರಣೆಗೆ ಅಲೆತಡೆಗೋಡೆ ಕಾಮಗಾರಿಗೆ ಸರ್ಕಾರ ಮುಂದಾಗಿತ್ತು. 175 ಕೋಟಿ ರೂ,ವೆಚ್ಚದ ಅಲೆ ತಡೆಗೋಡೆ ಕಾಮಗಾರಿ ನಿರ್ಮಾಣ ಆರಂಭವಾಗುತ್ತಿದ್ದಂತೆ, ಪರಿಸರ ಇಲಾಖೆಯ ಅನುಮತಿ ಪತ್ರ ಪಡೆದಿಲ್ಲ ಎಂದು ಮೀನುಗಾರರ ಮುಖಂಡರೋರ್ವರು ಹೈಕೋರ್ಟನಲ್ಲಿ ತಕರಾರು ಅರ್ಜಿ ಸಲ್ಲಿಸಿದ್ದರು. ಅರ್ಜಿ ಪರೀಶೀಲಿಸಿದ ಹೈಕೊರ್ಟ ಪರಿಸರ ಇಲಾಖೆಯ ಅಭಿಪ್ರಾಯ ಕೇಳಿತ್ತು. ಪರಿಸರ ಇಲಾಖೆ ಮೊದಲು ಸಲ್ಲಿಸಿದ ವರದಿಯನ್ನು ಹಿಂದೆ ಪಡೆದು, ಹೊಸದಾಗಿ ಪರಿಸರ ಪ್ರಭಾವ ಮತ್ತು ಪರಿಣಾಮಗಳ ವರದಿ ನೀಡುವುದಾಗಿ ಹೈಕೊರ್ಟಗೆ ಹೇಳಿತ್ತು.  

ಕೋರ್ಟಗೆ ನೀಡಿದ ಮಾತಿನಂತೆ ಮಂಗಳೂರಿನ ಹಿರಿಯ ಪರಿಸರ ಅಧಿಕಾರಿ ಕಾರವಾರ ಬೀಚ್ ಮತ್ತು ಬಂದರು, ಬಾವುಟಕಟ್ಟೆ ಪ್ರದೇಶ, ಬೈತಖೋಲ ಪ್ರದೇಶಗಳನ್ನು ಗುರುವಾರ ಪರೀಶೀಲಿಸಿದರು. ಹಾಗೂ ಬಂದರು ಇಲಾಖೆಯ ಬಳಿ ಕೆಲ ಮಾಹಿತಿ ಪಡೆದರು. ಬಾವುಟ ಕಟ್ಟೆ ಪಕ್ಕದ ರಾಜಾಕಾಲುವೆ ನೀರು ಸೇರುವ ಹಳ್ಳದ ಬದಿಯಿಂದ ಅಲೆ ತಡೆಗೋಡೆ ನಿರ್ಮಾಣಕ್ಕೆ ಬಂದರು ಇಲಾಖೆ ಉದ್ದೇಶಿಸಿದ್ದು, ಮಕ್ಕಳ ಉದ್ಯಾನವನದ ಪ್ಯಾರಾಗೋಲಾದಿಂದ ಅಲೆ ತಡೆಗೋಡೆ ನಿರ್ಮಾಣದ ಉದ್ದೇಶವನ್ನು ಕೈಬಿಟ್ಟಿದೆ ಎಂದು ಹೇಳಲಾಗುತ್ತಿದೆ. ಈ ಮಾಹಿತಿ ಸರ್ಕಾರದ ಬಳಿ ಇದ್ದು, ಹೈಕೋರ್ಟಗೆ ಸಹ ಸರ್ಕಾರದಿಂದ ಮಾಹಿತಿ ನೀಡಿರುವ ಸಾಧ್ಯತೆಗಳಿವೆ. ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗೆ ರಾಜ್ಯ ಸರ್ಕಾರ ಜಾಣ ಮತ್ತು ಕಾನೂನು ಬದ್ಧ ನಡೆಯನ್ನು ಇಡುತ್ತಿರುವ ಲಕ್ಷಣಗಳು ಗೋಚರವಾಗಿವೆ. ಬೀಚ್ ಹಾಗೂ ಮೀನುಗಾರರನ್ನು ಉಳಿಸಿಕೊಂಡೇ ಬಂದರು ಅಭಿವೃದ್ಧಿಗೆ ಸರ್ಕಾರ ಚಿಂತನೆ ನಡೆಸಿದಂತೆ ಕಾಣುತ್ತಿದೆ.  

ಹಿರಿಯ ಪರಿಸರ ಅಧಿಕಾರಿ ಪೋಲೀಸ್ ಬಂದೋಬಸ್ತನಲ್ಲಿ ಬಂದರು ಮತ್ತು ಯೋಜನೆಯ ಉದ್ದೇಶಿತ ಸ್ಥಳವನ್ನು ನೋಡುವಾಗ ಮೀನುಗಾರರ ಮುಖಂಡ ರಾಜು ತಾಂಡೇಲ ಉಪಸ್ಥಿತರಿದ್ದು, ಯೋಜನೆ ಮೀನುಗಾರರಿಗೆ ಮಾರಕ ಎಂದು ಹೇಳಿದರು. ಮೀನುಗಾರರ ಕಲೆ ಯುವ ಮುಖಂಡರು ಯೋಜನೆಗೆ ವಿರೋಧ ವ್ಯಕ್ತಪಡಿಸಿದರು. ವಕೀಲ ಬಿ.ಎಸ್‌.ಪೈ ಹೈಕೊರ್ಟ ಆದೇಶವನ್ನು ಪರಿಸರ ಇಲಾಖೆ ಪಾಲಿಸಿಲ್ಲ. ಈ ಬಗ್ಗೆ ಮತ್ತೆ ಕೋರ್ಟ ಮೆಟ್ಟಿಲು ಹತ್ತುವುದಾಗಿ ಹೇಳಿದರು. ಎಲ್ಲವನ್ನು ಪರಿಸರ ಅಧಿಕಾರಿಗಳು ಶಾಂತ ಚಿತ್ತದಿಂದ ಆಲಿಸಿ, ಬಂದರು, ಬೈತಖೋಲ, ಕಾರವಾರ ಬೀಚ್, ನಡುಗಡ್ಡೆಗಳ ಮಾಹಿತಿ ಪಡೆದು , ತೆರಳಿದರು. ಪರಿಸರ ಇಲಾಖೆಯಿಂದ ಹೈಕೋರ್ಟಗೆ ಹೊಸದಾಗಿ ವರದಿ ಸಲ್ಲಿಸುವ ಸಂಬಂಧ ಸ್ಥಳ ಭೇಟಿಗೆ ಹಿರಿಯ ಪರಿಸರ ಅಧಿಕಾರಿ ಬಂದಿದ್ದರು.  

ಬಂದರು ಎರಡನೇ ಹಂತದ ವಿಸ್ತರಣೆ ಹಾಗೂ ಹಡಗು ತಂಗುದಾಣ ಬರ್ತ ನಿರ್ಮಾಣಕ್ಕೆ ಇನ್ನು ಟೆಂಡರ್ ಕರೆಯಬೇಕಿದೆ. ಬೈತಖೋಲ ನಿರಾಶ್ರಿತರ ಸಮಸ್ಯೆ ಬೆಟ್ಟದಂತೆ ಬೆಳೆದಿದೆ. ಅಲ್ಲದೇ ಬಂದರು ಕಾರ್ಯಚಟುವಟಿಕೆ ವಿಸ್ತರಣೆಗೆ ಮೊದಲು ಅಲೆ ತಡೆಗೋಡೆ ನಿರ್ಮಾಣ ಕಾರ್ಯ ಬಾಕಿಯಿದೆ. ಅಲೆತಡೆಗೋಡೆ ನಿರ್ಮಾಣದ ನಂತರವೇ ವಾಣಿಜ್ಯ ಬಂದರು ಎರಡನೇ ಹಂತದ ವಿಸ್ತರಣೆಗೆ ಚಾಲನೆ ಸಿಗಬೇಕಿದೆ.  

ರಾಜ್ಯ ಸರ್ಕಾರದ ಜಾಣ ನಡೆ:  

ಎಲ್ಲಾ ಯೋಜನೆಗಳು ವಿವಾದವಾಗುತ್ತಿರುವ ಕಾರಣ ಕೋರ್ಟ ನಿರ್ದೇಶನ ಪಡೆದೇ ಕೆಲಸ ಆರಂಭಿಸಲು ಸರ್ಕಾರ ಕಾರ್ಯತಂತ್ರ ಮಾಡಿದೆ. ಹಾಗಾಗಿ ಜಾಣ ಹೆಜ್ಜೆಗಳಿಗೆ ಸರ್ಕಾರ ಮುಂದಾಗಿದೆ. ಹಿಂದೆ ಕಾಂಗ್ರೆಸ್ ಸರ್ಕಾರವಿದ್ದಾಗ ಮಂಜೂರಿಯಾದ ಯೋಜನೆ ಇದಾಗಿದ್ದರೂ, ಈಗ ವಿರೋಧಿ ರಾಜಕೀಯ ಬಿಜೆಪಿ ಮತ್ತು ಸರ್ಕಾರಕ್ಕೆ ಬಿಸಿತುಪ್ಪವಾಗಿದೆ. ಹಾಗಾಗಿ ಎಲ್ಲೂ ಕಾನುನು ಉಲ್ಲಂಘನೆಯಾಗದಂತೆ ಹೆಜ್ಜೆ ಇಡಲು ತಿರ್ಮಾನಿಸಿದೆ ಎನ್ನಲಾಗುತ್ತಿದೆ.  

ಬಂದರು ಅಲೆತಡೆ ಗೋಡೆ ನಿರ್ಮಾಣದ ವಿಷಯದಲ್ಲಿ ಸ್ಥಳೀಯ ಶಾಸಕರು ಒಂದೆಡೆ ಸರ್ಕಾರದ ನಿಲುವು ಹಾಗೂ ಇನ್ನೊಂದೆಡೆ ಜನ ವಿರೋಧವನವನ್ನು ಗಮನಿಸಿ ತಟಸ್ಥ ನಿಲುವಿಗೆ ಬಂದು ನಿಂತಿದ್ದಾರೆ. ಯೋಜನೆ ಅನುಷ್ಠಾನ ಮಾಡಿದರೆ, ಮತದರರನ್ನು ಕಳೆದುಕೊಳ್ಳಬೇಕಾದ ಸನ್ನಿವೇಶ ಇರುವ ಕಾರಣ, ಬೃಹತ್ ಯೋಜನೆಗಳ ಬಗ್ಗೆ ಮಾತನಾಡುವುದನ್ನು ಶಾಸಕಿ ನಿಲ್ಲಿಸಿದ್ದಾರೆ.  

ಸುದ್ದಿ ಓದಿ