ಸಂಸಾರದಲ್ಲಿ ಸತಿ-ಪತಿ ಒಂದಾಗಿದ್ದರೆ ಜೀವನ ಸಾರ್ಥಕ: ಶಿವಯೋಗೀಶ್ವರ ಶ್ರೀ
ರಾಣೇಬೆನ್ನೂರು 05: ಸಂಸಾರದಲ್ಲಿ ಸತಿ - ಪತಿ ಒಂದಾಗಿದ್ದರೆ ಬದುಕು ಬಂಗಾರವಾಗುತ್ತದೆ. ಒಲೆಗೆ ಮೂರು ಗುಂಡುಗಳು ಹೇಗೆ ಅವಶ್ಯವೋ ಅದರಲ್ಲಿ ಸತಿ - ಪತಿ ಎರಡು ಗುಂಡುಗಳು. ಮತ್ತೊಂದು ಗುಂಡು ಧರ್ಮದ ಗುಂಡು. ಈ ಮೂರನ್ನೂ ವಾಸ್ತವಿಕ ಅರ್ಥವನ್ನು ಮಾಡಿಕೊಂಡು ಜೀವನ ಸಾಗಿಸಿದರೆ ಯಾರಿಗೂ ಎಂದಿಗೂ ಕಷ್ಟವೆನ್ನುವುದು ಇಲ್ಲ. ಅದಕ್ಕಾಗಿ ಸಂಸ್ಕೃತಿಯ ಪರಂಪರೆಯಲ್ಲಿ ನಾವೆಲ್ಲರೂ ಸಾಗಿ ನಿತ್ಯದ ಬದುಕಿನಲ್ಲಿ ಧರ್ಮದ ಆಚರಣೆಯನ್ನು ಅನುಸರಿಸಿಕೊಂಡು ಸಾಗಬೇಕಾದ ಇಂದಿನ ಅಗತ್ಯವಿದೆ ಎಂದು ಗುಡ್ಡದ ಆನ್ವೇರಿ ಜಂಗಮ ಕ್ಷೇತ್ರದ ಶ್ರೀ ಮ.ನಿ.ಪ್ರ. ಶಿವಯೋಗೀಶ್ವರ ಮಹಾಸ್ವಾಮಿಗಳು ನುಡಿದರು.
ಅವರು ಮಂಗಳವಾರ ತಾಲೂಕಿನ ಗುಡ್ಡದ ಆನ್ವೇರಿ ವಿರಕ್ತ ಮಠದಲ್ಲಿ ಶ್ರೀ ಮದಥಣಿ ಮುರುಘೇಂದ್ರ ಶಿವಯೋಗೀಶ್ವರರ ಜಾತ್ರಾ ಮಹೋತ್ಸವ, ಜೀವನ ದರ್ಶನ ಪ್ರವಚನ ಸಮಾರೋಪ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು. ಭಾರತೀಯ ಸಂಸ್ಕೃತಿ ಪರಂಪರೆಯಲ್ಲಿ ಗ್ರಾಮೀಣ ನಾಗರಿಕರು ವೇದ ಇತಿಹಾಸ ಕಾಲಗಳಿಂದಲೂ ಭಕ್ತಿ, ಭಾವ, ಪೂಜೆ - ಪುನಸ್ಕಾರ, ಜಾತ್ರೆ ಹಿ ಉತ್ಸವ, ಹಬ್ಬ - ಹರಿದಿನಗಳು ಆಚಾನೋಚವಾಗಿ ಸಾಗಿ ಬಂದಿವೆ. ಮನುಷ್ಯ ಎಷ್ಟೇ ಆದುನಿಕತೆ ತಂತ್ರಜ್ಞಾನದಲ್ಲಿ ಸಾಗಿದ್ದರೂ ಸಹ ಇತಿಹಾಸದ ಪರಂಪರೆ ಎಂದಿಗೂ ಮರೆಯಾಗಲಾರದು ಎಂದರು.
ಗ್ರಾಮದ ಜಂಗಮ ಕ್ಷೇತ್ರಕ್ಕೆ 300 ವರ್ಷಗಳ ಭವ್ಯ ಇತಿಹಾಸ ಪರಂಪರೆ ಇದೆ. ಬಸವಣ್ಣನವರು ಜನಿಸಿ 889 ವರ್ಷಗಳಾಗಿವೆ. 69 ವರ್ಷಗಳಿಂದ ಜಾತ್ರೆ, ತೇರು, ಕಡುಬಿನ ಕಾಳಗ ಮತ್ತಿತರೆ ಧಾರ್ಮಿಕ ಕಾರ್ಯಕ್ರಮಗಳ ಜೊತೆಗೆ ನಾಡಿನ ಮಹಾನ್ ಶರಣ - ಶರಣೆಯರ ಜೀವನ ಚರಿತ್ರೆಯ ಪ್ರವಚನವನ್ನು ಭಕ್ತ ಸಮುದಾಯಕ್ಕೆ ಕೊಡುವುದರ ಮೂಲಕ ನಮ್ಮ ಸಂಸ್ಕೃತಿ, ಪರಂಪರೆ ಮುಂದುವರಿಸಿಕೊಂಡು ಸಾಗುತ್ತಿದ್ದೇವೆ. ಇದರ ಯಶಸ್ವಿಗೆ ಗ್ರಾಮಸ್ಥರ ಮತ್ತು ಸಮಸ್ತ ಭಕ್ತಾಧಿಗಳ ಸಹಾಯ ಸಹಕಾರ ಕಾರಣವಾಗಿದೆ. ಮದುವೆ ಸ್ವರ್ಗದಲ್ಲಿಯೇ ನಿಶ್ಚಯವಾಗಿರುತ್ತವೆ. ಯೋಗಾನು ಯೋಗವೆಂಬಂತೆ ಧರ್ಮ ಕ್ಷೇತ್ರದಲ್ಲಿ ದಾಂಪತ್ಯ ಜೀವನಕ್ಕೆ ಪಾದಾರೆ್ಣ ಮಾಡುತ್ತಿರುವುದು ನಿಮ್ಮೆಲ್ಲರ ಸೌಭಾಗ್ಯವಾಗಿದ್ದು, ಪರಸ್ಪರ ಪ್ರೀತಿ, ವಿಶ್ವಾಸ ಮತ್ತು ತಂದೆ ತಾಯಂದಿರನ್ನು ಮರೆಯದೆ ಜೀವನ ಸಾಗಿಸಬೇಕು ಎಂದರು.
ಹೊಳೆಇಟಗಿ ಗ್ರಾಮದ ಶಿಕ್ಷಕ ಪಂಚಾಕ್ಷರಿ ಪಾಟೀಲ ಅವರು ‘ಜೀವನ ಸೌಭಾಗ್ಯ’ ವಿಷಯ ಕುರಿತು ಉಪನ್ಯಾಸ ನೀಡಿದರು. ಸಂತರ, ಮಹಾತ್ಮರ ಜೀವನ ದರ್ಶನ ಕುರಿತು ಮನ್ನೇರಾಳದ ಶ್ರೀ ವೇ.ಮೂರ್ತಿ ಶರಣಬಸವಯ್ಯ ಶಾಸ್ತ್ರಿಗಳವರು ಪ್ರವಚನ ನೀಡಿದರು. ಶಿಕ್ಷಕ ಮಾಲತೇಶಪ್ಪ ಮಡಿವಾಳರ, ಎಪಿಎಂಸಿ ಮಾಜಿ ಅಧ್ಯಕ್ಷ ಬಸವರಾಜಪ್ಪ ಸವಣೂರ, ರೇಣುಕಾ ಮೋಟೇಬೆನ್ನೂರ, ಗುತ್ತೆಪ್ಪ ಮಾಳಗುಡ್ಡಪ್ಪನವರ, ಮಲ್ಲೇಶಪ್ಪ ಮದ್ಲೇರ, ಮಾಲತೇಶ ಕಣದಮನಿ, ಎಸ್.ಸಿ.ಷಡಕ್ಷರಿಮಠ, ಯಲ್ಲಪ್ಪ ಜಾಧವ ಹಾಗೂ ಪತ್ರಕರ್ತರಾದ ಎಸ್.ಜಿ.ಮಹಾನುಭಾವಿಮಠ, ಕೆ.ಎಸ್.ನಾಗರಾಜ ಮತ್ತಿತರ ಗಣ್ಯರು ಉಪಸ್ಥಿತರಿದ್ದರು. ಕಲಾವಿದ ಯಲ್ಲಪ್ಪ ಕೋರಿ ಪ್ರಾರ್ಥಿಸಿದರು. ಮಾಲತೇಶ ಕಣದಮನಿ ಸ್ವಾಗತಿಸಿ ನಿರೂಪಿಸಿದರು.
ಸಂಜೆ 4 ಗಂಟೆಗೆ ವಾರ್ಷಿಕ ಸಂಪ್ರದಾಯದ ಸದ್ಗುರು ಶಿವಯೋಗಿಗಳ ರಥೋತ್ಸವವು ಅಪಾರ ಸಂಖ್ಯೆಯಲ್ಲಿ ಸೇರಿದ್ದ ಭಕ್ತರ ಮಧ್ಯೆ ರಥೋತ್ಸವ ನಡೆಯಿತು.