ಜ್ಞಾನ ಮತ್ತು ಕರ್ಮಗಳು ಕೂಡಿದರೆ ಜೀವನ ಪರಿಪಕ್ವ: ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ
ಲೋಕದರ್ಶನ ವರದಿ
ಗದಗ 19: ಪಂಚಜ್ಞಾನೇಂದ್ರಿಯಗಳು ಹಾಗೂ ಪಂಚ ಕರ್ಮೇಂದ್ರಿಯಗಳು ಶುದ್ಧವಾಗುವುದು ನಿತ್ಯ ಶಿವಾನುಭವ, ಪ್ರವಚನ, ಪುಣ್ಯಕತೆ ಕೇಳುವುದರಿಂದ ಮಾತ್ರ ಸಾಧ್ಯ. ಜ್ಞಾನ ಮತ್ತು ಕರ್ಮಗಳು ಕೂಡಿ ನಡೆದರೆ ಜೀವನ ಪರಿಪಕ್ವವಾಗುತ್ತದೆ ಎಂದು ನರೇಗಲ್ ಹಿರೇಮಠ ಹಾಗೂ ಸವದತ್ತಿ ಮೂಲಿಮಠದ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮಿಗಳು ಹೇಳಿದರು.
ನಗರದ ಅಡವೀಂದ್ರಸ್ವಾಮಿ ಮಠದಲ್ಲಿ 2026ನೇ ಸಾಲಿನ ದಸರಾ ಮಹೋತ್ಸವದಲ್ಲಿ ನಡೆದ ಶ್ರೀದೇವಿ ಪುರಾಣ ಪ್ರವಚನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಶ್ರೀಗಳು ಮಾತನಾಡಿದರು.
ನಮ್ಮಲ್ಲಿ ಯಾವಾಗಲೂ ಆತ್ಮಜ್ಯೋತಿ ಬೆಳಗುತ್ತಿರುತ್ತದೆ. ಜ್ಯೋತಿಯು ನಮ್ಮಲ್ಲೇ ನಮ್ಮೊಳಗೇ ಇದ್ದರೂ, ಕಂಡು ಬರುವುದಿಲ್ಲ. ಪುರಾಣ ಪ್ರವಚನಗಳನ್ನು ಕೇಳಿದಾಗ ಅದರ ಅರಿವು ನಮಗಾಗುತ್ತದೆ. ಇದರಿಂದ ಆತ್ಯಜ್ಯೋತಿ ಒಳಗೇ ಜಾಗೃತವಾದರೆ,
ಹೊರಗೆ ಇಂದ್ರಿಯಗಳು ಶುದ್ಧವಾಗುತ್ತವೆ. ಒಳ್ಳೆಯ ಮಾತುಗಳನ್ನು ಆಡಿದಾಗ ಮನಸ್ಸು ಶುದ್ಧಿಯಾಗುತ್ತದೆ. ಒಳ್ಳೆಯ ವಿಚಾರಗಳು ಬುದ್ಧಿಯನ್ನು ಶುದ್ಧಿ ಮಾಡುತ್ತವೆ. ಸಾತ್ವಿಕತೆ ಗುಣಗಳನ್ನು ನಾವು ಕಂಡುಕೊಂಡಾಗ ಅವು ಕಂಡುಬರುತ್ತವೆ ಎಂದು ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮಿಗಳು ಹೇಳಿದರು.
ಸಮಾರಂಭದಲ್ಲಿ ಗಣ್ಯ ಉದ್ದಿಮೆದಾರರಾದ ಎಸ್.ಪಿ. ಸಂಶಿಮಠ ಅವರಿಗೆ ಶ್ರೇಷ್ಠ ಉದ್ಯಮರತ್ನ, ಎಸ್ವಾಯ್ಬಿಎಂಎಸ್ ಯೋಗಪಾಠ ಶಾಲೆಯ ಪ್ರಾಚಾರ್ಯರಾದ ಕೆ.ಎಸ್. ಪಲ್ಲೇದ ಅವರಿಗೆ ಶ್ರೇಷ್ಠ ಯೋಗರತ್ನ, ಎಂ.ಎ. ಹಿರೇಒಡೆಯರ ಅವರಿಗೆ ಇಂಗ್ಲೀಷ ಸಾಹಿತ್ಯರತ್ನ ಹಾಗೂ ಗೀತಾ ಹೂಗಾರ ಅವರಿಗೆ ಸಾಹಿತ್ಯ ಮತ್ತು ಕಲಾಸೇವಾ ರತ್ನ ಪ್ರಶಸ್ತಿ ಪ್ರದಾನ ಮಾಡಿ, ಸನ್ಮಾನಿಸಿ ಗೌರವಿಸಲಾಯಿತು.