ತಾಳಿಕೋಟಿ

ಧರ್ಮಗಳ ಮೌಲ್ಯ ಅರಿತು ಸೌಹಾರ್ದ ಬೆಳೆಸೋಣ

ಧರ್ಮಗಳ ಮೌಲ್ಯ ಅರಿತು ಸೌಹಾರ್ದ ಬೆಳೆಸೋಣ
Let us understand the values ​​of religions and foster harmony


ತಾಳಿಕೋಟಿ 7: ಜಗತ್ತಿನ ಎಲ್ಲ ಧರ್ಮಗಳೂ ಮಾನವ ಕಲ್ಯಾಣವನ್ನೇ ಬಯಸುತ್ತವೆ. ಧರ್ಮಗಳನ್ನು ಕೇವಲ ಆಚರಣೆಗಳಿಗೆ ಸೀಮಿತಗೊಳಿಸದೆ, ಅವುಗಳಲ್ಲಿರುವ ಮಾನವೀಯ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಮುದ್ದೇಬಿಹಾಳ ಮತಕ್ಷೇತ್ರದ ಶಾಸಕ ಸಿ.ಎಸ್‌. ನಾಡಗೌಡ (ಅಪ್ಪಾಜಿ) ಹೇಳಿದರು.  

ಪಟ್ಟಣದ ಶ್ರೀ ವಿಠ್ಠಲ ಮಂದಿರದಲ್ಲಿ ಜಮಾತೆ ಇಸ್ಲಾಮಿ ಹಿಂದ್ ನಗರ ಶಾಖೆ ವತಿಯಿಂದ ಆಯೋಜಿಸಿದ್ದ ‘ಕ್ರಾಂತಿಯ ಜ್ಯೋತಿ ಪ್ರವಾದಿ ಮೊಹಮ್ಮದ್ (ಸ)’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಎಲ್ಲ ಧರ್ಮಗಳ ಸಂದೇಶವೂ ಮಾನವೀಯತೆ, ಶಾಂತಿ ಹಾಗೂ ಸೌಹಾರ್ದತೆಯನ್ನು ಸಾರುತ್ತದೆ. ಇಂತಹ ಕಾರ್ಯಕ್ರಮಗಳು ವಿವಿಧ ಧರ್ಮಗಳ ಜನರನ್ನು ಒಗ್ಗೂಡಿಸುವಲ್ಲಿ ಸಹಕಾರಿಯಾಗುತ್ತವೆ ಎಂದರು.  

ಖ್ಯಾತ ಸಾಹಿತಿ ಯೋಗೇಶ ಮಾಸ್ಟರ್ ಮಾತನಾಡಿ, ಇಂದು ಧರ್ಮದ ಬಾಹ್ಯ ಆಚರಣೆಗಳಿಗೆ ಹೆಚ್ಚು ಒತ್ತು ನೀಡಲಾಗುತ್ತಿದ್ದು, ಧರ್ಮದ ಸಾರವನ್ನು ಅರಿಯುವಲ್ಲಿ ವಿಫಲರಾಗುತ್ತಿದ್ದೇವೆ. ಇದರಿಂದ ಸಮಾಜದಲ್ಲಿ ಗೊಂದಲ ಉಂಟಾಗುತ್ತಿದೆ. ಎಲ್ಲ ಧರ್ಮಗಳ ಪ್ರವಾದಿಗಳು ಹಾಗೂ ಸಂತರು ಸರಳವಾಗಿ ಧರ್ಮದ ಮಾರ್ಗವನ್ನು ಬೋಧಿಸಿದ್ದಾರೆ ಎಂದರು.  

ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ. ಪ್ರಭುಗೌಡ ಲಿಂಗದಳ್ಳಿ ಮಾತನಾಡಿ, ಪ್ರತಿಯೊಬ್ಬರೂ ತಮ್ಮ ಧರ್ಮದ ಆಚರಣೆಗಳನ್ನು ಪಾಲಿಸುವುದರ ಜೊತೆಗೆ ಇತರ ಧರ್ಮಗಳನ್ನು ಅರಿತು ಉತ್ತಮ ನಾಗರಿಕರಾಗಿ ಬದುಕಬೇಕು ಎಂದು ಹೇಳಿದರು.  

ಪ್ರವಚನಕಾರ ಲಾಲಹುಸೇನ್ ಕಂದಗಲ್ ಅವರು ಪ್ರವಾದಿ ಮೊಹಮ್ಮದ್ ಅವರ ಕುರಿತು ಉಪನ್ಯಾಸ ನೀಡಿದರು. ಧಾರ್ಮಿಕ ಮುಖಂಡ ಸಯ್ಯಿದ್ ಶಕೀಲ್ ಅಹ್ಮದ್ ಖಾಜಿ ಹಾಗೂ ಫಾದರ್ ಸುನೀಲ್ ಅಂದ್ರಾದೆ ಸಾನ್ನಿಧ್ಯ ವಹಿಸಿದ್ದರು. ಜೆ.ಇ.ಹಿಂದ್ ಮಾಜಿ ವಿಭಾಗೀಯ ಸಂಚಾಲಕ ಮಹೆಬೂಬ್ ಆಲಂ ಬಡಗಣ ಅಧ್ಯಕ್ಷತೆ ವಹಿಸಿದ್ದರು.  

ಈ ಸಂದರ್ಭದಲ್ಲಿ ಸಾಹಿತಿ ಯೋಗೇಶ ಮಾಸ್ಟರ್ ಅವರನ್ನು ಸನ್ಮಾನಿಸಿ ಗೌರವ ಸಮರ​‍್ಿಸಲಾಯಿತು. ಕಾರ್ಯಕ್ರಮದಲ್ಲಿ ವಿವಿಧ ಸಂಘಟನೆಗಳ ಪದಾಧಿಕಾರಿಗಳು, ಧಾರ್ಮಿಕ ಮುಖಂಡರು, ಮಹಿಳೆಯರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು. 


ಸುದ್ದಿ ಓದಿ