ರಾಣೆಬೆನ್ನೂರ

ಸಾರಿಗೆ ನೌಕರರು ಕರ್ತವ್ಯಕ್ಕೆ ಹಾಜರಾಗಲಿ: ಕೇಲಗಾರ

ಸಾರಿಗೆ ನೌಕರರು ಕರ್ತವ್ಯಕ್ಕೆ ಹಾಜರಾಗಲಿ: ಕೇಲಗಾರ
ನಗರದ ಬಸ್ ನಿಲ್ದಾಣದಲ್ಲಿ ಡಾ. ಬಸವರಾಜ ಕೇಲಗಾರ ಸಾಧಕ-ಬಾಧಕ ಕುರಿತು ಅಧಿಕಾರಿಗಳ ಜೊತೆ ಚರ್ಚಿಸಿದರು.

ರಾಣೇಬೆನ್ನೂರು 21: ಕರೊನಾ ಮಹಾಮಾರಿಯ ಕರಿ ನೆರಳಿನಲ್ಲಿ ಸರ್ಕಾರ ಆರ್ಥಿಕ ನಷ್ಠ ಅನುಭವಿಸುತ್ತಿದೆ ಇದನ್ನು ಅರಿತು ಸಾರಿಗೆ ನೌಕರರು ಕರ್ತವ್ಯಕ್ಕೆ ಹಾಜರಾಗಬೇಕು ತಮ್ಮ ಬೇಡಿಕೆ ಈಡೇರಿಸಬೇಕೆಂಬ ಹಠಮಾರಿತನದ ಧೋರಣೆಯನ್ನು ಕೈಬಿಡಬೇಕು ಯಾವತ್ತೂ ಸರ್ಕಾರ ನಿಮ್ಮೊಂದಿಗಿದೆ ಎಂದು ವಾಯುವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನೂತನ ಉಪಾಧ್ಯಕ್ಷ ಡಾ. ಬಸವರಾಜ ಕೇಲಗಾರ ಭರವಸೆ ನೀಡಿದರು.

ನಗರದ ಬಸ್ ನಿಲ್ದಾಣವನ್ನು ಪರಿಶೀಲಿಸಿ ಸಾರಿಗೆ ಸಂಸ್ಥೆಯ ಮೇಲ್ವಿಚಾರಕರು ಮತ್ತು ಖಾಸಗಿ ವಾಹನ ಮಾಲೀಕರೊಡನೆ ಚರ್ಚಿಸಿದ ಅವರು, ಸರ್ಕಾರವು ಈಗಾಗಲೇ ಸಾರಿಗೆ ನೌಕರರ 8 ಬೇಡಿಕೆಗಳನ್ನು ಈಡೇರಿಸಿದೆ ಇಂದಿನ ಆರ್ಥಿಕ ಸಂಕಷ್ಠದ ಪರಿಸ್ಥಿತಿಯಲ್ಲಿ ಸಾರಿಗೆ ಸಂಸ್ಥೆ ನಷ್ಟ ಅನುಭವಿಸುತ್ತಿದ್ದರೂ 6 ನೇ ವೇತನ ಜಾರಿ ಕುರಿತು ಸರ್ಕಾರ ನಿಲುವು ಸ್ಪಷ್ಠವಾಗಿದ್ದು ನೌಕರರು ಇಂಥಹ ಸಂದರ್ಭದಲ್ಲಿ ಕರ್ತವ್ಯಕ್ಕೆ ಹಾಜರಾಗದಿರುವುದು ಸಾರ್ವಜನಿಕರಿಗೆ ಸಾಕಷ್ಟು ತೊಂದರೆಯಾಗಿದೆ. ಜೊತೆಗೆ ತಮಗೆ ಅನ್ನ ನೀಡಿದ ಸಾರಿಗೆ ಸಂಸ್ಥೆಯೂ ಮತ್ತಷ್ಟು ನಷ್ಟ ಅನುಭವಿಸಬೇಕಾಗುತ್ತದೆ ಆದ್ದರಿಂದ ಕರ್ತವ್ಯಕ್ಕೆ ಹಾಜರಾಗಿ ಪರೋಪಕಾರಿ ಗುಣ ಬೆಳೆಸಿಕೊಳ್ಳಬೇಕೆಂದರು.

ಸರ್ಕಾರವು ಅತೀ ಶೀಘ್ರದಲ್ಲಿಯೇ ತಮ್ಮ ನಿರ್ಧಾರವನ್ನು ಪ್ರಕಟಿಸಲಿದ್ದು ಅಲ್ಲಿಯವರೆಗೆ ಗಲಾಟೆ, ದಾಂಧಲೆಯಂತಹ ಪ್ರಸಂಗಗಳಿಗೆ ಅವಕಾಶವಾಗದಂತೆ ಸಾರಿಗೆ ಸಂಸ್ಥೆಯವರೊಂದಿಗೆ ಖಾಸಗೀ ವಾಹನದದವರು ಉತ್ತಮ ಬಾಂಧವ್ಯದೊಂದಿಗೆ ವರ್ತಿಸಬೇಕು. ನಗರದ ಬಸ್ ನಿಲ್ದಾಣದಲ್ಲಿ ಸ್ವಚ್ಛತೆಗೆ ಆಧ್ಯತೆ ನೀಡಬೇಕು. ಗುಟ್ಕಾ, ಮಾದಕ ವಸ್ತುಗಳ ಸೇವನೆಗೆ ಕಡಿವಾಣ ಹಾಕಬೇಕು. ಅಲ್ಲಲ್ಲಿ ಉಗುಳುವವರ ಮೇಲೆ ಕ್ರಮಕ್ಕೆ ಮುಂದಾಗಿ ದಂಡ ವಿಧಿಸುವ ಪ್ರಕ್ರಿಯೆಯಾಗಬೇಕು. ಪ್ರಯಾಣಿಕರಿಗೆ ಕುಡಿಯುವ ನೀರು ಸೌಲಭ್ಯ, ಶೌಚಾಲಯ ವ್ಯವಸ್ಥೆ ದೊರೆಯುವಂತಾಗಬೇಕು ಎಂದು ತಿಳಿಸಿದರು.

ಸುದ್ದಿ ಓದಿ