ಕಾರವಾರ

ಪರಿಸರ ಅಭಿವೃದ್ಧಿಯೊಂದಿಗೆ ಸುಸ್ಥಿರ ಅಭಿವೃದ್ಧಿಯಾಗಲಿ : ಜಿಲ್ಲಾ ಪರಿಸರ ಅಧಿಕಾರಿ

ಪರಿಸರ ಅಭಿವೃದ್ಧಿಯೊಂದಿಗೆ ಸುಸ್ಥಿರ ಅಭಿವೃದ್ಧಿಯಾಗಲಿ : ಜಿಲ್ಲಾ ಪರಿಸರ ಅಧಿಕಾರಿ

ಲೋಕದರ್ಶನ ವರದಿ

ಕಾರವಾರ 05:  ಪ್ರಕೃತಿಯು ಮನುಷ್ಯನಿಗೆ ಬದುಕಲು ಅಗತ್ಯವಿರುವ ಎಲ್ಲಾ ಸೌಲಭ್ಯಗಳನ್ನು ಒದಗಿಸಿದ್ದು, ಪ್ರಕೃತಿಯನ್ನು ಉಳಿಸಿ, ಬೆಳೆಸುವ ಜವಾಬ್ದಾರಿ ಪ್ರತಿಯೊಬ್ಬರದ್ದೂ ಆಗಿದ್ದು, ಪರಿಸರ ಅಭಿವೃದ್ಧಿಯೊಂದಿಗೆ ಸುಸ್ಥಿರ ಅಭಿವೃದ್ಧಿಯಾಗಬೇಕು ಎಂದು ಜಿಲ್ಲಾ ಪರಿಸರ ಅಧಿಕಾರಿ ಬಿ.ಕೆ.ಸಂತೋಷ್ ತಿಳಿಸಿದರು.  

ಅವರು ಶುಕ್ರವಾರ ಹಿಂದೂ ಪ್ರೌಢಶಾಲಾ ಸಭಾಂಗಣದಲ್ಲಿ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಪ್ರಾದೇಶಿಕ ಕಚೇರಿ ವತಿಯಿಂದ ಆಯೋಜಿಸಲಾದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.  

ಪ್ರತಿಯೊಬ್ಬರೂ ಆರೋಗ್ಯಯುತ ಜೀವನ ಸಾಗಿಸಲು ಉತ್ತಮ ಪರಿಸರ ಅತ್ಯಗತ್ಯವಾಗಿದ್ದು, ಅಭಿವೃದ್ಧಿಯ ಹೆಸರಿನಲ್ಲಿ ಪರಿಸರದ ನಾಶ ಸಲ್ಲದು. ಪರಿಸರ ಸಂರಕ್ಷಣೆಗಾಗಿ ಪ್ರತಿಯೊಬ್ಬರೂ ಒಟ್ಟಾಗಿ ಮುಂದೆ ಬರಬೇಕು. ಪ್ಲಾಸ್ಟಿಕ್ ವಸ್ತುಗಳ ಬಳಕೆಯನ್ನು ತ್ಯಜಿಸಬೇಕು. ಪ್ಲಾಸ್ಟಿಕ್ ಕ್ಯಾರಿಬ್ಯಾಗ್ಗಳ ಬದಲಿಗೆ ಬಟ್ಟೆ ಚೀಲಗಳನ್ನು ಬಳಸಬೇಕು ಎಂದರು.  

ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ಈ ್ರ್ಝ್ಟು ಘೋಷವಾಕ್ಯ “ಹವಾಮಾನ ಕ್ರಮ” (ಪ್ರಕೃತಿಯಿಂದ ಪ್ರೇರಿತ, ಹವಾಮಾನಕ್ಕಾಗಿ, ಮುಂದಿನ ಭವಿಷ್ಯಕ್ಕಾಗಿ) ಆಗಿದ್ದು, ಹವಾಮಾನ ಬದಲಾವಣೆ ಇಂದು ವಿಶ್ವದ ಅತಿ ದೊಡ್ಡ ಸವಾಲುಗಳಲ್ಲಿ ಒಂದಾಗಿದೆ. ಮನೆಯಲ್ಲಿ ಉತ್ಪಾದನೆ ಆದ ಘನತ್ಯಾಜ್ಯಗಳನ್ನು ಹಸಿ ಕಸ ಮತ್ತು ಒಣ ಕಸವನ್ನಾಗಿ ಬೇರಿ​‍್ಡಸಿ ವೈಜ್ಞಾನಿಕವಾಗಿ ವಿಲೇವಾರಿ ಮಾಡಬೇಕು, ತ್ಯಾಜ್ಯವನ್ನು ಕಡಿಮೆ ಮಾಡಿ, ಮರು ಬಳಕೆ ಮತ್ತು ಪುನರ್ಬಳಕೆ ಮಾಡಬೇಕು ಎಂದರು.  

ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಪ್ರಾದೇಶಿಕ ಕಚೇರಿಯ ಯೋಜನಾ ಸಹಾಯಕಿ ಡಾ.ಅಮೃತಾ ಶೇಟ್ ಮಾತನಾಡಿ, ಪರಿಸರ ಸಂರಕ್ಷಣೆಯಲ್ಲಿ ವಿದ್ಯಾರ್ಥಿಗಳ ಪಾತ್ರ, ಘನತ್ಯಾಜ್ಯ, ಪ್ಲಾಸ್ಟಿಕ್ ತ್ಯಾಜ್ಯ, ಇ-ತ್ಯಾಜ್ಯ, ಅಪಾಯಕಾರಿ ತ್ಯಾಜ್ಯ ಹಾಗೂ ವೈದ್ಯಕೀಯ ತ್ಯಾಜ್ಯಗಳ ನಿರ್ವಹಣೆ ಮತ್ತು ಅವುಗಳ ವೈಜ್ಞಾನಿಕ ವಿಲೇವಾರಿ ಬಗ್ಗೆ ವಿವರಿಸಿ, ಪರಿಸರ ಸ್ನೇಹಿಯಾಗಿ ಜೀವನ ನಡೆಸಿ, ಪರಿಸರವನ್ನು ಕಾಪಾಡಬೇಕು ಎಂದರು.   

ಹಿಂದೂ ಪ್ರೌಢಶಾಲೆಯ ಮುಖ್ಯಾಧ್ಯಾಪಕ ರೋಹಿದಾಸ ದೇಶಭಂಡಾರಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ವಾರ್ತಾಧಿಕಾರಿ ಬಿ. ಶಿವಕುಮಾರ್, ಶ್ರೀಮತಿ. ಸುಮತಿ ದಾಮ್ಲೆ ಪ್ರೌಢ ಶಾಲೆಯ ಮುಖೋಧ್ಯಾಪಕ ಟಿ.ಎಮ್‌. ಶಮೀಂದ್ರ, ಉಪ-ಪ್ರಾದೇಶಿಕ ವಿಜ್ಞಾನ ಕೇಂದ್ರದ ಸದಸ್ಯ ಕಾರ್ಯದರ್ಶಿ ರೋಹನ ಭುಜಲೆ ಇದ್ದರು.  ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರದ ಕವಿತಾ ಮೇಸ್ತ ಸ್ವಾಗತಿಸಿದರು. ಶಿಕ್ಷಕಿ ವನಿತಾ ಶೇಟ್, ನಿರೂಪಿಸಿದರು. ಪ್ರಿಯಾಂಕಾ ದೇಶಭಂಡಾರಿ ವಂದಿಸಿದರು.  

 ಕಾರ್ಯಕ್ರಮದಲ್ಲಿ ಪರಿಸರ ದಿನಾಚರಣೆ ಪ್ರಯುಕ್ತ ಆಯೋಜಿಸಲಾದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತ ವಿಧ್ಯಾರ್ಥಿಗಳಾದ ಕಾಂಚಿಕಾ ಆರ್‌. ನಾಯ್ಕ, ಸಾನಿಯಾ ಮೋಹನ ಖಾರ್ವಿ, ಎನ್‌.ವಿ. ಇಂಪನಾ ಮತ್ತು ಚಿತ್ರಕಲಾ ಸ್ಪರ್ಧೆಯಲ್ಲಿ ವಿಜೇತರಾದ ಅಮುಲ್ಯಾ ಖಾರ್ವಿ, ಹುರೇನ್ ಶೇಖ್, ಶ್ರೇಯಾ ಎಮ್‌. ಶೇಟ್ ಅವರಿಗೆ ಪ್ರಶಸ್ತಿ ವಿತರಿಸಲಾಯಿತು.  

 ಪರಿಸರ ಸಂರಕ್ಷಣೆಯ ಕಾರ್ಯದಲ್ಲಿ ಶ್ರಮಿಸುತ್ತಿರುವ ಕಾರವಾರ ನಗರಸಭೆಯ ಕಿರಿಯ ಆರೋಗ್ಯ ನೀರೀಕ್ಷಕಿ ಕು. ದೀಪಾ ಎಮ್‌. ಶೆಟ್ಟಿ ಮತ್ತು ಪೌರ ಕಾರ್ಮಿಕರಾದ ಪೆದ್ದಣ್ಣ ಪೆದ್ದ ಕೊಂಡಯ್ಯ, ನಿರ್ಮಲಾ ಮಹಾಬಳೇಶ್ವರ ಕುಮಟಾಕರ ಅವರನ್ನು ಅಭಿನಂದಿಸಲಾಯಿತು.  ಕಾರ್ಯಕ್ರಮದ ಆರಂಭದಲ್ಲಿ ಹಿಂದೂ ಹೈಸ್ಕೂಲ್ ಆವರಣದಲ್ಲಿ ಗಿಡಗಳನ್ನು ನೆಡಲಾಯಿತು.   


ಸುದ್ದಿ ಓದಿ