ಕಾರ್ಮಿಕ ವಿರೋಧಿ ನೀತಿಗಳನ್ನು ಹಿಮ್ಮೆಟ್ಟಿಸಲು ಹೋರಾಟ ತೀವ್ರವಾಗಲಿ
ಆಶಾ ಕಾರ್ಯಕರ್ತೆಯರಿಗೆ ರಾಜ್ಯ ಕಾರ್ಯದರ್ಶಿ ಡಿ.ನಾಗಲಕ್ಷ್ಮಿ ಕರೆ
ಹೊಸಪೇಟೆ 11: ಇಂದು ಹೊಸಪೇಟೆ ನಗರದಲ್ಲಿ ಎಐಯುಟಿಯುಸಿಗೆ ಸಂಯೋಜನೆಗೊಂಡಿರುವ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಆಶ್ರಯದಲ್ಲಿ ಆಶಾ ಕಾರ್ಯಕರ್ತೆಯರ ವಿಜಯನಗರ ಜಿಲ್ಲಾ ಸಮಾವೇಶವನ್ನು ಒಳಕ್ರೀಡಾಂಗಣದ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಸಮಾವೇಶದ ಮುನ್ನ ಹೊಸಪೇಟೆ ಬಸ್ ನಿಲ್ದಾಣದಿಂದ ಬೃಹತ್ ಮೆರವಣಿಗೆಯನ್ನು ಸಂಘಟಿಸಲಾಗಿತ್ತು. ನೂರಾರು ಸಂಖ್ಯೆಯಲ್ಲಿ ಆಶಾ ಕಾರ್ಯಕರ್ತೆಯರು ‘ಆಶಾ ಸಾಫ್ಟ್ ರದ್ದುಗೊಳಿಸಿ! ಪ್ರೋತ್ಸಾಹ ಧನವಿಲ್ಲದ ಹೆಚ್ಚುವರಿ ಕೆಲಸ ಬೇಡವೇ ಬೇಡ! ಕನಿಷ್ಠ ವೇತನ ರೂ12,000 ನಿಗದಿ ಮಾಡಿ!, ಆಶಾ ಕಾರ್ಯಕರ್ತೆಯರನ್ನು ಕಾರ್ಮಿಕರೆಂದು ಪರಿಗಣಿಸಿ! ಪುಕ್ಸಟ್ಟೆ ದುಡಿಸಿಕೊಳ್ಳುವ ಸರ್ಕಾರಕ್ಕೆ ಧಿಕ್ಕಾರ! ಮುಂತಾದ ಘೋಷಣೆಗಳನ್ನು ಮೆರವಣಿಗೆಯುದ್ದಕ್ಕೂ ಕೂಗಿದರು.
ಉದ್ಘಾಟನೆಯನ್ನು ನೆರವೇರಿಸಿ ಎಐಯುಟಿಯುಸಿ ರಾಜ್ಯ ಉಪಾಧ್ಯಕ್ಷ ಕಾ.ದೇವದಾಸ್ ಅವರು ಮಾತನಾಡುತ್ತಾ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕಾರ್ಮಿಕ ಕಡು ವಿರೋಧಿಯಾಗಿವೆ. ಜನರ ಆರೋಗ್ಯಕ್ಕಾಗಿ ಹಗಲಿರುಳು ಶ್ರಮಿಸುವ, ಕೋವಿಡ್ ಸಂದರ್ಭದಲ್ಲಿ ಪ್ರಾಣ ಪಣಕ್ಕಿಟ್ಟು ದುಡಿದ ಆಶಾ ಕಾರ್ಯಕರ್ತೆಯರನ್ನು ಅತ್ಯಂತ ನಿರ್ಲಕ್ಷ್ಯತೆಯಿಂದ ಕಾಣುತ್ತಿವೆ. ಅವರನ್ನು ಕಾರ್ಮಿಕರೆಂದು ಪರಿಗಣಿಸದೆ ಬಿಡಿಗಾಸು ನೀಡಿ ಕೈತೊಳೆದುಕೊಳ್ಳುತ್ತಿವೆ. ಮತ್ತೊಂದೆಡೆ ಸರ್ಕಾರದಲ್ಲಿನ ಭ್ರಷ್ಟಾಚಾರದಿಂದ, ಕಾರ್ೋರೇಟ್ ಉದ್ಯಮಿಗಳಿಗೆ ತೆರಿಗೆ ರಿಯಾಯಿತಿ ನೀಡುತ್ತಿರುವುದರಿಂದ ಹಾಗೂ ಅವರ ಸಾಲಗಳನ್ನ ಮನ್ನಾ ಮಾಡುತ್ತಿರುವುದರಿಂದ, ಲಕ್ಷ ಕೋಟಿಯಷ್ಟು ಜನರ ತೆರಿಗೆ ಹಣ ಲೂಟಿಯಾಗುತ್ತಿದೆ. ಆದರೆ ಆಶಾ ಕಾರ್ಯಕರ್ತೆಯರಿಗೆ ಜೀವನ ಯೋಗ್ಯ ವೇತನ ನೀಡಲು ಮಾತ್ರ ಸರ್ಕಾರದ ಬಳಿ ಹಣವಿಲ್ಲ.. ಇದೆಕ್ಕಿಂತ ಹಸಿ ಸುಳ್ಳು ಬೇರೆಯಿದೆಯೇ? ಈ ಹಿನ್ನಲೆಯಲ್ಲಿ ಆಶಾ ಕಾರ್ಯಕರ್ತೆಯರು ಸೇರಿದಂತೆ ದುಡಿಯುವ ಜನತೆ ಮತ್ತಷ್ಟು ಸಂಘಟಿತರಾಗಿ ಪ್ರಬಲ ಹೋರಾಟ ರೂಪಿಸಬೇಕಿದೆ. ಆಗ ಮಾತ್ರ ಕೊಳೆತುನಾರುತ್ತಿರುವ ಈ ವ್ಯವಸ್ಥೆ ಬದಲಾಗಲು ಸಾಧ್ಯ ಎಂದರು.
ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ರಾಜ್ಯ ಕಾರ್ಯದರ್ಶಿ ಡಿ.ನಾಗಲಕ್ಷ್ಮಿ ಮಾತನಾಡುತ್ತಾ ಆಶಾ ಕಾರ್ಯಕರ್ತೆಯರ ಸೇವೆಯನ್ನ ಶ್ಲಾಘಿಸಿ, ಸನ್ಮಾನಗಳನ್ನು ಮಾಡಲಾಗುತ್ತಿದೆ. ಆದರೆ ಅವರ ಗಂಭೀರ ಸಮಸ್ಯೆಗಳನ್ನು ಬಗೆಹರಿಸುವುದು ಯಾರಿಗೂ ಬೇಕಾಗಿಲ್ಲ. ಆಶಾ ಸಾಫ್ಟ್ನ (ಆರ್ಸಿಹೆಚ್ ಪೋರ್ಟಲ್) ದೋಷದಿಂದ ಪ್ರತಿ ತಿಂಗಳು ಸಾವಿರಾ ರೂಪಾಯಿ ಆಶಾಗಳಿಗೆ ನಷ್ಟವಾಗುತ್ತಿದೆ. ಕಳೆದ 8 ವರ್ಷಗಳಿಂದ ಈ ಸಮಸ್ಯೆಯ ಬಗ್ಗೆ ಇಲಾಖೆಯ ಹಾಗೂ ಸರ್ಕಾರದ ಗಮನಕ್ಕೆ ತರಲಾಗಿದೆ. ಆದರೂ ಆರ್ಸಿಹೆಚ್ ಪೋರ್ಟಲ್ ರದ್ದುಗೊಳಿಸಲು ಆರೋಗ್ಯ ಇಲಾಖೆ ಮತ್ತು ಸರ್ಕಾರ ಮೀನಮೇಷ ಎಣಿಸುತ್ತಿದೆ. ಈ ಹಿನ್ನಲೆಯಲ್ಲಿ ಆರ್ಸಿಹೆಚ್ ಪೋರ್ಟಲ್ ರದ್ದುಗೊಳಿಸಲು, ಆಶಾಗಳಿಗೆ ಆಗುತ್ತಿರುವ ಆರ್ಥಿಕ ನಷ್ಟ ತುಂಬಿಕೊಡಲು, ಕನಿಷ್ಟ ವೇತನ ರೂ.12000 ನಿಗದಿಗೊಳಿಸಲು, ಹೆಚ್ಚುವರಿ ಕೆಲಸಗಳಿಂದ ಬಿಡುಗಡೆಗೊಳಿಸಲು ಒತಾಯಿಸಿ ಇದೇ ತಿಂಗಳು ಬೆಳಗಾವಿ ಅಧಿವೇಶನದ ಸಂದರ್ಭದಲ್ಲಿ ಡಿಸೆಂಬರ್ 21-28ರವರೆಗೆ ರಾಜ್ಯವ್ಯಾಪಿ ಪ್ರತಿಭಟನೆಯನ್ನು ಹಮ್ಮಿಕೊಳ್ಳುಲಾಗುವುದು. ಈ ಹೋರಟವನ್ನು ಯಶಸ್ವಿಗೊಳಿಸುವಂತೆ ಕರೆ ನೀಡಿದರು.
ಎಐಯುಟಿಯುಸಿ ಜಿಲ್ಲಾ ಕಾರ್ಯದರ್ಶಿ ಡಾ.ಪ್ರಮೋದ್ ಮಾತನಾಡಿದರು. ಸಂಘದ ಜಿಲ್ಲಾ ಗೌರವ ಅಧ್ಯಕ್ಷ ಎ.ಶಾಂತಾ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಆಶಾ ಸಂಘದ ವಿಜಯನಗರ ಜಿಲ್ಲಾ ಸಮಿತಿ ರಚನೆಯಾಯಿತು. ಅಧ್ಯಕ್ಷರಾಗಿ ಡಾ.ಪ್ರಮೋದ್. ಕಾರ್ಯದರ್ಶಿಯಾಗಿ ಗೌರಮ್ಮ, 7 ಉಪಾಧ್ಯಕ್ಷರು, 5 ಜಂಟಿ ಕಾರ್ಯದರ್ಶಿಯುಳ್ಳ 173 ಮುಖಂಡರ ಕಾರ್ಯಕಾರಿ ಸಮಿತಿ ಚುನಾಯಿಸಲಾಯಿತು. ವೇದಿಕೆಯ ಮೇಲೆ ವಿವಿಧ ತಾಲ್ಲೂಕು ಮುಖಂಡರಾದ ಗೀತಾ, ಗೌರಮ್ಮ, ವೀರಮ್ಮ, ನೇತ್ರಾ, ಮಾರೆಕ್ಕ, ನಾಗಮ್ಮ, ಶಾಂತಮ್ಮ ಮುಂತಾದವರು ಉಪಸ್ಥಿತರಿದ್ದರು.