ಸಾಂಸ್ಕೃತಿಕ ಉತ್ಸವಗಳು ಜನೋತ್ಸವಗಳಾಗಲಿ: ಹೇಮಯ್ಯಸ್ವಾಮಿ
ಹೊಸಪೇಟೆ ಸೆ.1: ಸಾಂಸ್ಕೃತಿಕ ಉತ್ಸವಗಳು ಜನೋತ್ಸವಗಳಾಬೇಕು ಎಂದು ಹಿರಿಯ ಕಲಾ ಪೋಷಕ ಹೇಮಯ್ಯಸ್ವಾಮಿ ಅಭಿಪ್ರಾಯ ಪಟ್ಟರು
ಆಗಸ್ಟ್ 31ರ ಸಂಜೆ ಕಡ್ಡಿರಾಂಪುರ ಗ್ರಾಮದಲ್ಲಿ ಮರಿದೇವ ಸಂಗೀತ ಸಾಂಸ್ಕೃತಿಕ ಕಲಾವೃಂದ, ಕಡ್ಡಿರಾಂಪುರ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು ಇವುಗಳ ಸಹಯೋಗದಲ್ಲಿ ನಡೆದ ಸಾಂಸ್ಕೃತಿಕೋತ್ಸವ-2023ರ ಮುಖ್ಯ ಅತಿಥಿಯಾಗಿ ಪಾಲ್ಗೊಂಡು, ಪ್ರಸ್ತುತ ಕಲಾ ಪ್ರಕಾರಗಳು ಗ್ರಾಮೀಣ ಭಾಗದಲ್ಲಿ ಇಂದಿಗೂ ಜೀವಂತವಾಗಿವೆ. ನಗರಗಳಲ್ಲಿ ವಾಸಿಸುವ ಜನರಲ್ಲೂ ಕಲಾಸಕ್ತರು ಇದ್ದಾರೆ. ಆದರೆ ಕಲಾ ಪೋಷಣೆಗೆ ಸಂಬಂಧಿಸಿದಂತೆ, ಕಲಾ ತಂಡಗಳನ್ನು ಕಟ್ಟಿಕೊಂಡವರಿಗೆ ಇನ್ನೂ ಹೆಚ್ಚಿನ ನೆರವು ಮತ್ತು ಪ್ರೋತ್ಸಾಹ ಸಿಗಬೇಕಿದೆ ಎಂದರು.
ಸಾಂಸ್ಕೃತಿಕೋತ್ಸವ ಆಯೋಜಿಸಿದ ಮರಿದೇವ ಸಂಗೀತ ಸಾಂಸ್ಕೃತಿಕ ಕಲಾವೃಂದದ ಸಂಸ್ಥಾಪಕರು ಹಾಗೂ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅಂಗಡಿ ವಾಮದೇವ ಮಾತನಾಡಿ, ಕಲಾ ಪ್ರಕಾರಗಳಲ್ಲು ಅನೇಕ ಸ್ಥಿತ್ಯಂತರಗಳಾಗುತ್ತಿರುವುದು ನಿಜ. ಅದಕ್ಕೆ ಹೊಂದಿಕೊಂಡಂತೆ ನಮ್ಮ ಕಲೆಗಳಲ್ಲು ಬದಲಾವಣೆಗಳಾಗಬೇಕೆನ್ನುವುದೂ ಸತ್ಯ. ಆದರೆ ಮೂಲ ಜನಪದದ ಸೊಗಡನ್ನು ಎಂದಿಗೂ ಮರೆಯಬಾರದು. ಹಾಗೂ ನಮ್ಮ ನಾಡಿನ ಸೊಗಡಿನಲ್ಲಿರುವ ಕಲೆಗಳನ್ನು ಜನರು ಕಲೆಯುವಂತಾಗಬೇಕು ಹಾಗೂ ಬೆಳೆಸುವಂತಾಗಬೇಕು. ಇತ್ತೀಚಿನ ದಿನಗಳಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಈ ರೀತಿಯ ನೆರವು ಸಿಗುತ್ತಿರುವುದರಿಂದ ಕಲಾ ತಂಡಗಳಾಗಲಿ ಅಥವಾ ಸಂಘ-ಸಂಸ್ಥೆಗಳಾಗಲಿ ಜೀವಂತವಾಗಿವೆ ಎಂದರು.
ಮಲ್ಲಿಕಾರ್ಜುನ ತುರುವನೂರು ಹಿಂದೂಸ್ತಾನಿ ಗಾಯನ, ಕೆ.ಎಂ. ಶ್ರೀರಕ್ಷ ಕಂಪ್ಲಿ, ಉಮಾ ಕಾಳಘಟ್ಟ, ಸಂಗೀತ ಕುಲಕರ್ಣಿ ಭಕ್ತಿಗೀತೆಗಳು, ಗುರುಕೃಪ ಸಂಗೀತ ಪಾಠಶಾಲೆ ಮತ್ತು ಗೀತಾ ಕಾಸಟ್ಟಿ ತಂಡದವರಿಂದ ಸುಗಮ ಸಂಗೀತ, ಅಂಜಲಿ ಭರತನಾಟ್ಯ ಕಲಾ ಕೇಂದ್ರ ಮತ್ತು ಹರ್ಷಿತ ಹೊಸಪೇಟೆ ಇವರಿಂದ ಭರತನಾಟ್ಯ, ಮಲ್ಲಿಕಾರ್ಜುನ ಬಡಿಗೇರ ತಬಲಾ ವಾದನ, ಮಹೇಶ ಬಡಿಗೇರ ಹಾರ್ಮೋನಿಯಂ ಮತ್ತು ಕೀಬೋರ್ಡ್, ಯಲ್ಲಪ್ಪ ಭಂಡಾರದಾರ ಜಾನಪದಗೀತೆ, ಸಮರ್ಥ ಅಂಗಡಿ ನವ್ಯ ಅಂಗಡಿ ವಚನ ಗಾಯನ, ಗ್ರಾಮದ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಂದ ಯೋಗ ನೃತ್ಯ ನೆರವೇರಿತು.
ಕಾರ್ಯಕ್ರಮದಲ್ಲಿ ಕೆ.ಉದ್ದಾನಪ್ಪ, ಹೆಚ್.ಕೆ. ಶರಣೇಶ, ಕುಶಾಲ ಜಿಂಗಾಡೆ ಕಮಲಾಪುರ, ಬಿ.ಸಂಪತ್, ಕೆ.ಪ್ರಶಾಂತ್ ಮುಂತಾದವರಿದ್ದರು. ಎ.ದೊಡ್ಡಬಸಪ್ಪ ಹಾಗೂ ಕೆ.ಪಂಪನಗೌಡ ಕಾರ್ಯಕ್ರಮ ನಿರ್ವಹಿಸಿದರು. ಗ್ರಾಮದಲ್ಲಿ ಅಸಕ್ತಿಯಿಂದ ಪಾಲ್ಗೊಂಡ ನೂರಾರು ಜನ ಇಂತಹ ಕಾರ್ಯಕ್ರಮಗಳು ನಮ್ಮ ಗ್ರಾಮದಲ್ಲಿ ಮತ್ತೆ ಮತ್ತೆ ಆಗಬೇಕೆಂದು ಆಶಿಸಿದರು.