ರಾಣೆಬೆನ್ನೂರ

ಧಾರ್ಮಿಕ ಕಾರ್ಯಕ್ರಮಗಳಲ್ಲಿ ಹೆಚ್ಚೆಚ್ಚು ಪಾಲ್ಗೊಳ್ಳಲಿ: ಶಿವಾಚಾರ್ಯ ಮಹಾಸ್ವಾಮಿಗಳು

ಧಾರ್ಮಿಕ  ಕಾರ್ಯಕ್ರಮಗಳಲ್ಲಿ ಹೆಚ್ಚೆಚ್ಚು ಪಾಲ್ಗೊಳ್ಳಲಿ: ಶಿವಾಚಾರ್ಯ ಮಹಾಸ್ವಾಮಿಗಳು

ರಾಣಿಬೆನ್ನೂರ 19: ಯಾಂತ್ರಿಕೃತ ಬದುಕಿನ ಮಧ್ಯೆಯೂ ಸಂಸಾರದ ಜಂಜಾಟದಲ್ಲಿ ಮುಳುಗಿರುವ ಮನುಜನಿಗೆ ಇಂದು ಜಪತಪ ಸೇರಿದಂತೆ ಧರ್ಮದ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದರಿಂದ ಮಾನಸಿಕ ಶಾಂತಿ ನೆಮ್ಮದಿ ದೊರೆಯುತ್ತದೆ. ಯಂತ್ರದ ಜೀವನದಿಂದ ದೂರವಾಗಿ ಸ್ವಲ್ಪ ಮಟ್ಟಿಗಾದರೂ ಸಮಾಧಾನ, ನೆಮ್ಮದಿ ಕಾಣಲು ಮಠ, ಮಂದಿರದಲ್ಲಿ ನಡೆಯುವ ಧಾರ್ಮಿಕ  ಕಾರ್ಯಕ್ರಮಗಳಲ್ಲಿ ಹೆಚ್ಚೆಚ್ಚು ಪಾಲ್ಗೊಳ್ಳಬೇಕು ಎಂದು ಶ್ರೀಮಠದ ಶಿವಯೋಗಿ ಶಿವಾಚಾರ್ಯ ಮಹಾಸ್ವಾಮಿಗಳು  ಹೇಳಿದರು.

ನಗರದ ಹೊರವಲಯದಲ್ಲಿರುವ ಹಿರೇಮಠದ ಶನೈಶ್ಚರ ಸ್ವಾಮಿ ಮಂದಿರದ ಆವರಣದಲ್ಲಿ ಲೋಕಕಲ್ಯಾಣಾರ್ಥವಾಗಿ ಹಾಗೂ ಪ್ರದೇಶಾಭಿವೃದ್ದಿಗಾಗಿ ನಿರಂತರ 384 ದಿನಗಳ ಕಾಲದ ಮಹಾಮೃತ್ಯುಂಜಯ ಜಪ, ಯಾಗ, ದುರ್ಗಾ ಜಪ, ಹವನ ಮತ್ತು ದೀಪದುರ್ಗಾ ನಮಸ್ಕಾರ ಪೂಜೆಯ ಧಾರ್ಮಿಕ ಧರ್ಮಯಜ್ಞ ಸಮಾರಂಭದ ನಿಮಿತ್ಯ ಹಮ್ಮಿಕೊಂಡಿದ್ದ  ದ್ವಿತೀಯ ಮಂಡಲೋತ್ಸವ(48 ದಿನಗಳ ಕಾಲದ ಕಾರ್ಯಕ್ರಮವು ಒಂದು ಮಂಡಲಕ್ಕೆ ಸಮ) ಕಾರ್ಯಕ್ರಮದ ನೇತೃತ್ವ ವಹಿಸಿ ಮಾತನಾಡಿದರು.

ದೈನಂದಿನ ಬದುಕಿನಲ್ಲಿ ಭಗವಂತನ ಜೊತೆಗೆ ಶೃದ್ದೆ, ಭಕ್ತಿ, ಆತ್ಮವಿಶ್ವಾಸಗಳನ್ನು ಮೈಗೂಡಿಸಿಕೊಂಡು ಮುನ್ನಡೆದರೆ ಅಸಾಧ್ಯ ಎಂಬುವುದು ಬದುಕಿನುದ್ದಕ್ಕೂ ಬರುವುದಿಲ್ಲ, ಇಟ್ಟುಕೊಂಡಿರುವ ಗುರಿಯನ್ನು ಸಾಧಿಸಲು ಆತ್ಮವಿಶ್ವಾಸವು ಬಹಳಷ್ಟು ಸಹಕಾರಿಯಾಗುವುದರ ಮೂಲಕ ಚೈತನ್ಯ ಬರುತ್ತದೆ. ಜೊತೆಗೆ ಪ್ರಯತ್ನದಿಂದ ಮಾಡಿದ ಪ್ರತಿಫಲ ಬದುಕಿನುದ್ದಕ್ಕೂ ಸಾಗುತ್ತದೆ ಎಂದರು.

ಪುಣ್ಯಕೋಟಿಯ ಜಗದೀಶ್ವರ ಸ್ವಾಮಿಗಳು ನೇತೃತ್ವ ವಹಿಸಿ ಮಾತನಾಡಿ   ಗುರುವಾಣಿ ಮತ್ತು ಭಗವಂತನ ಕೃಪೆಯಿಂದ ಜೀವನದಲ್ಲಿ ಏನನ್ನಾದರೂ ಸಾಧಿಸಬಹುದು. ಭಕ್ತಿಗೆ ಅಗಾಧವಾದ ಶಕ್ತಿ ಇದೆ, ಅದನ್ನು ಸದುದ್ದೇಶಕ್ಕೆ ಮಾತ್ರ ಬಳಸಬೇಕು, ಭಕ್ತರಲ್ಲೂ ಸಹ ಭಕ್ತಿಯ ಬಗೆಗೆ ಜಾಗೃತಿ ಮೂಡಿಸುವುದು ಇಂದಿನ ಪರಿಸ್ಥಿತಿಗೆ ಬಹಳಷ್ಟು ಅವಶ್ಯವಾಗಿದೆ ಎಂದರು.

ಶನೈಶ್ಚರ ಮಂದಿರದ ಕುಟೀರದಲ್ಲಿ ಪ್ರತಿದಿನ ಮಹಾಮೃತ್ಯುಂಜಯ ಜಪ, ಯಾಗ, ದುರ್ಗಾ ಜಪ, ಹವನ ಮತ್ತು ದೀಪದುರ್ಗಾ ನಮಸ್ಕಾರ ಪೂಜೆಯ ಧಾರ್ಮಿಕ ಧರ್ಮಯಜ್ಞಗಳು ನಿರಂತರವಾಗಿ ನಡೆಯುತ್ತಿವೆ,  ಶ್ರೀಮಠದ ಶಿವಯೋಗಿ ಮಹಾಸ್ವಾಮಿಗಳು 384 ದಿನಗಳ ಪರ್ಯಂತ ಹಮ್ಮಿಕೊಂಡಿರುವ ದೈನಂದಿನ ವೈವಿಧ್ಯಮಯ ಪೂಜಾ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ಸಮಾಜಮುಖಿಯಾಗಿವೆ ಎಂದರು.

ನಿಚ್ಚವ್ವನಹಳ್ಳಿಯ ಶಿವಯೋಗಿ ಹಾಲಸ್ವಾಮಿಗಳು, ಸಮಿತಿಯ ಅಧ್ಯಕ್ಷ ಎಸ್‍ಎಸ್ ರಾಮಲಿಂಗಣ್ಣನವರ, ಗ್ರಾಮೀಣ ಅಧ್ಯಕ್ಷ ಬಸವರಾಜ ಸವಣೂರ, ರವೀಂದ್ರಗೌಡ ಪಾಟೀಲ ಸೇರಿದಂತೆ ಪಾಠಶಾಲಾ ವಟುಗಳು ಶಾಸ್ರ್ತಿಗಳು ಮತ್ತಿತರರು ಇದ್ದರು. ಇದೇ ಸಂದರ್ಭದಲ್ಲಿ ಶ್ರೀಮಠದ ಶಿವಯೋಗಿ ಮಹಾಸ್ವಾಮಿಗಳು ಲ.ಸಿದ್ದಲಿಂಗ ಸ್ವಾಮಿಗಳ ಕುರಿತು ಹಾಡಿದ ಹಾಡು ಮತ್ತು ಸಂಗೀತ ಕಾರ್ಯಕ್ರಮವು  ಭಕ್ತರ ಮನತಣಿಸಿತು. ಆನಂತರ ಲಿ.ಅಮೃತಮ್ಮ ಮತ್ತು ಲಿ.ಬಸಪ್ಪ ರಾಮಾಳದ ಸ್ಮರಣಾರ್ಥವಾಗಿ ಪ್ರಸಾದ ಸೇವೆ ನೆರವೇರಿತು.

ಸುದ್ದಿ ಓದಿ