ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾದರೆ ಕಾನೂನು ಕ್ರಮ: ಆನಂದಕುಮಾರ ರೌಡಿಗಳಿಗೆ ಎಚ್ಚರಿಕೆ
ಇಂಡಿ: ಸಾರ್ವಜನಿಕರಿಗೆ ತೊಂದರಯಾಗುವಂತೆ ವರ್ತಿಸುವುದು, ಅಪರಾಧಕ್ಕೆ ಬೇಕಾಗುವ ಸಾಮಾನು ಇಟ್ಟುಕೊಳ್ಳುವದು, ನಿರಪರಾದಿಗಳ ಮೇಲೆ ಹಲ್ಲೆ ಮಾಡುವದು, ಮಟಕಾ, ಗಾಂಜಾ, ಶೆರೆ ಪ್ರಕರಣಗಳಲ್ಲಿ ಭಾಗಿಯಾಗುವದು ಸೇರಿದಂತೆ ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾದರೆ ಕಾನೂನು ಕ್ರಮ ಕೈಕೊಳ್ಳಲಾಗುವುದೆಂದು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಆನಂದಕುಮಾರ ರೌಡಿಗಳಿಗೆ ಎಚ್ಚರಿಕೆ ನೀಡಿದರು.
ಅವರು ಶುಕ್ರವಾರ ಪಟ್ಟಣದ ಗ್ರಾಮೀಣ ಪೊಲೀಸ್ಠಾಣೆ ಆವರಣದಲ್ಲಿ ಇಂಡಿ ಗ್ರಾಮೀಣ ಹಾಗೂ ಹೋರ್ತಿ ಪೊಲೀಸ್ ಠಾಣೆಯ ವ್ಯಾಪ್ತಿಯ ರೌಡಿಗಳಿಗೆ ಪರೇಡ್ ನಡೆಸಿದರು.
ರೌಡಿಗಳಿಗೆ ತಾಕೀತು:
ರೌಡಿಗಳಿಗೆ ಪರೇಡು ನಡೆಸಿ ತಾಕೀತು ಮಾಡಿದ ಅವರು, ತಾಲೂಕಿನಲ್ಲಿ ರೌಡಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಸಾರ್ವಜನಿಕರಲ್ಲಿ ಭಯ ಮೂಡಿಸುತ್ತಿರುವದು ಕಂಡು ಬಂದರೆ ಶಿಸ್ತು ಕ್ರಮ ಕೈಗೊಳ್ಳಲಾಗುತ್ತದೆ. ತೊಂದರೆ ನೀಡುವವರ ಬಾಲ ಕಟ್ ಮಾಡಬೇಕಾಗುತ್ತದೆ ಎಂದು ಖಡಕ್ ಎಚ್ಚರಿಕೆ ನೀಡಿದರು.
ಇಸ್ಟೇಟ್ ಸೇರಿದಂತೆ ಇತರೆ ಯಾವುದೇ ರೀತಿಯ ವ್ಯವಹಾರಗಳಲ್ಲಿ ಜನರಿಗೆ ಭಯ, ಹಣ ವಸುಲಿ ಮಾಡುತ್ತಿರುವ, ಸಾರ್ವಜನಿಕರ ನೆಮ್ಮದಿಗೆ ಶಾಂತಿ ಭಂಗ ತರುತ್ತಿರುವವರ ವಿರುದ್ಧ ಇಲಾಖೆಯ ಸಿಬ್ಬಂದಿಗಳು ಕಠಿಣ ಕ್ರಮ ಕೈಗೊಳ್ಳಿ, ಸಮಾಜಕ್ಕೆ ತೊಂದರೆ ಮಾಡುವ ವ್ಯಕ್ತಿಗಳು ಎಷ್ಟೇ ದೊಡ್ಡವರಾಗಿರಲಿ ಎಂಥಹ ಪ್ರಭಾವವೇ ಇರಲಿ ಅವರ ವಿರುದ್ಧ ಮುಲಾಜಿಲ್ಲದೆ ಕ್ರಮ ಜರುಗಿಸಲಾಗುವದು ಎಂದರು.
ಇಲ್ಲಿನ ಪೊಲೀಸ ಅಧಿಕಾರಿಗಳು ಉತ್ತಮವಾಗಿ ಕೆಲಸ ನಿರ್ವಹಿಸುತ್ತಿದ್ದು ಸಣ್ಣ ಪುಟ್ಟ ತಿದ್ದುಪಡಿಯ ಮಾಹಿತಿ ನೀಡಿದ್ದೇವೆ. ಇಲ್ಲಿನ ಅಧಿಕಾರಿಗಳ ಕಾರ್ಯವೈಖರಿ ಮೆಚ್ಚುಗೆ ತಂದಿದ್ದು ಎಲ್ಲಾ ಪ್ರಕರಣಗಳನ್ನು ಪತ್ತೆ ಹಚ್ಚುತ್ತಿದ್ದಾರೆ. ಸಾರ್ವಜನಿಕರಿಗೆ ತೊಂದರೆ ನೀಡುವ ಶಕ್ತಿಗಳ ವಿರುದ್ಧ ಕಠಿಣ ಕ್ರಮಕ್ಕೆ ಸೂಚನೆ ನೀಡಿದ್ದು ಅಧಿಕಾರಿಗಳು ಕ್ರಮ ಕೈಕೊಳ್ಳುತ್ತಾರೆ ಎಂದು ವಿಶ್ವಾಸ ವ್ಯಕ್ತ ಪಡಿಸಿದರು.
ಹೆಚ್ಚಾಗುತ್ತಿರುವ ಸರ ಕಳ್ಳತನ, ಇನ್ನೀತರ ಅಪರಾಧಗಳ ಬಗ್ಗೆ ಗಮನ ಹರಿಸುವಂತೆ ಸೂಚಿಸಿದರು. ರೌಡಿಗಳ ಯಾವದೇ ಪ್ರಕರಣದಲ್ಲಿ ಅವರ ಜೊತೆಗೆ ಸಹಕರಿಸುವದು, ಅವರಿಗೆ ರಕ್ಷಣೆ ನೀಡಿವ ಇಲಾಖೆಯ ವ್ಯಕ್ತಿಗಳ ವಿರುದ್ಧ ಕ್ರಮ ಜರುಗಿಸಲಾಗುವದು ಎಂದರು.
ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಡಾ. ರಾಮ ಅರಸಿಧ್ಧಿ, ಡಿವಿಎಸ್ಪಿ ಚಂದ್ರಕಾಂತ ನಂದರೆಡ್ಡಿ, ಸಿಪಿಐ ಭೀಮನಗೌಡ ಬಿರಾದಾರ, ರಾಜಶೇಖರ ಬಡೆದೇಸಾರ, ಪಿಎಸ್ಐ ಅಶೋಕ ಸೇರಿದಂತೆ ಸಿಬ್ಬಂದಿ ಪಾಲ್ಗೊಂಡಿದ್ದರು.