ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಂಕು ಸ್ಥಾಪನೆ
ಬ್ಯಾಡಗಿ 02: ಕ್ಷೇತ್ರದ ಅಭಿವೃದ್ಧಿಗಾಗಿ ನಿರಂತರ ಶ್ರಮ ನನ್ನದಾಗಿದೆ ಎಂದು ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ತಿಳಿಸಿದರು. ಬ್ಯಾಡಗಿ ಮತ ಕ್ಷೆತ್ರದ ಬೆನಕನಕೊಂಡ ಗ್ರಾಮದಲ್ಲಿ 1 ಕೋಟಿ ರೂ. ಅನುದಾನದಲ್ಲಿ ಬೆನಕನಕೊಂಡ -ತಿರುಮಲದೇಕೊಪ್ಪ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಂಕು ಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.
ಆರ್ಥಿಕ ಪ್ರಗತಿಯಲ್ಲಿ ಗುಣಮಟ್ಟದ ರಸ್ತೆಗಳ ಅಭಿವೃದ್ಧಿ ಅತೀ ಮುಖ್ಯ. ಎರಡು ಗ್ರಾಮಗಳ ಬಹುದಿನದ ಬೇಡಿಕೆ ಇದಾಗಿದ್ದು ಇಂದು ಸಾಕಾರಗೊಂಡಿರುವುದು ಜನರಲ್ಲಿ ಸಂತಸ ಉಂಟುಮಾಡಿದೆ. ಗ್ರಾಮೀಣ ಭಾಗದ ವಿವಿಧ ರಸ್ತೆ ಅಭಿವೃದ್ಧಿಗಾಗಿ ಕ್ಷೇತ್ರಕ್ಕೆ ಸಾಕಷ್ಟು ಅನುದಾನ ಈಗಾಗಲೇ ಮಂಜೂರ ಮಾಡಿಸಿರುವೆ. ಗ್ರಾಮೀಣ ರಸ್ತೆಗಳ ಸುಧಾರಣೆಯಲ್ಲಿ ಇದು ಮಹತ್ವದ ಹೆಜ್ಜೆಯಾಗಿದೆ. ಕ್ಷೇತ್ರದ ಶಾಶ್ವತ ನೀರಾವರಿಗಾಗಿ ಮಾಜಿ ಮುಖ್ಯಮಂತ್ರಿ ಯಡಿಯೂರ್ಪ ಅವರ ಕೊಡುಗೆ ಅನನ್ಯ.
ಪ್ರಸ್ತುತ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮನೆಮನೆಗೂ ಕುಡಿಯುವ ನೀರನ್ನು ಒದಗಿಸುವ ಯೋಜನೆ ಮಂಜೂರು ಮಾಡಿದ್ದಾರೆ. ಕ್ಷೇತ್ರದ ಜನತೆಯ ಪರವಾಗಿ ಅವರಿಗೆ ಕೃತಜ್ಞತೆ ಸಲ್ಲುತ್ತವೆ. ಕ್ಷೇತ್ರದ ಜನತೆಯ ಧ್ವನಿಯಾಗಿ ಕಾರ್ಯನಿರ್ವಹಿಸುತ್ತಿರುವ ಆತ್ಮತೃಪ್ತಿ ನನಗಿದೆ ಎಂದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷೆ ಲಕ್ಷ್ಮವ್ವ ಕೊಧಾರಿ, ಉಪಾಧ್ಯಕ್ಷೆ ನಿರ್ಮಲಾ ಗೌಡರ, ಶಿವಕುಮಾರ ಮುದ್ದಪ್ಪಳವರ, ಚನಬಸಣ್ಣ ಬಿದರಿ, ಲಿಂಗನಗೌಡ್ರ ಸಂಗನಗೌಡ್ರ, ಮಂಜಪ್ಪ ಆನ್ವೆರಿ, ಬಸಯ್ಯ ಕೇರುಡಿಮಠ ಹಾಗೂ ಇಲಾಖೆ ಅಭಿಯಂತರರು ಸೇರಿದಂತೆ ಇನ್ನಿತರರಿದ್ದರು.