ಅಥಣಿ

ಕೆರೆ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ

ಕೆರೆ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ

ಲೋಕದರ್ಶನ ವರದಿ 

ಅಥಣಿ 21: ತೋಟಗಾರಿಕೆ ಇಲಾಖೆಯಡಿ ಕಾಗವಾಡ ಮತಕ್ಷೇತ್ರದ ಗುಂಡೇವಾಡಿ ಗ್ರಾಮದಲ್ಲಿರುವ 72 ಎಕರೆ ಪ್ರದೇಶದಲ್ಲಿ ವಿವಿಧ ತೋಟಗಾರಿಕೆ ಬೆಳೆಗಳನ್ನು ಬೆಳೆಯಲು ಆದ್ಯತೆ ನೀಡಲಾಗುವುದು ಎಂದು ಮಾಜಿ ಸಚಿವ, ಕಾಗವಾಡ ಶಾಸಕ ಶ್ರೀಮಂತ ಪಾಟೀಲ ಹೇಳಿದರು.  

ಅವರು ತಾಲೂಕಿನ ಗುಂಡೇವಾಡಿ ಗ್ರಾಮದ ಫಾರ್ಮನಲ್ಲಿ 38 ಲಕ್ಷ ರೂ.ಗಳ ಅನುದಾನದಲ್ಲಿ ಮಂಜೂರಾದ ಕೆರೆ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡುತ್ತಿದ್ದರು. 

       ಈ ಐತಿಹಾಸಿಕ ಫಾರ್ಮನಲ್ಲಿ ಈ ಮೊದಲು ಸಾವಿರಾರು ಸಂಖ್ಯೆಯಲ್ಲಿ ಮಾವು ಸೇರಿದಂತೆ ಅನೇಕ ತೋಟಗಾರಿಕೆ ಬೆಳೆಗಳನ್ನು ಬೆಳೆಯಲಾಗುತ್ತಿತ್ತು. ಆದರೆ ಕಳೆದ ಒಂದೆರಡು ದಶಕಗಳಿಂದ ಉಂಟಾದ ನೀರಿನ ತೊಂದರೆಯ ಪರಿಣಾಮ ತೋಟಗಾರಿಕೆ ಬೆಳೆಗಳು ನಾಶವಾದವು. ಹೀಗಾಗಿಯೇ ಮುಂದಿನ ದಿನಗಳಲ್ಲಿ ತೋಟಗಾರಿಕೆ ಬೆಳೆಗಳನ್ನು ಸಂರಕ್ಷಿಸುವ ದೃಷ್ಟಿಯಿಂದ ಜಿಲ್ಲಾ ಪಂಚಾಯತ ಇಲಾಖೆ ಮೂಲಕ ಬೃಹತ್ ಕೆರೆ ನಿರ್ಮಿಸಲಾಗುತ್ತಿದೆ ಎಂದ ಅವರು ಈ ಕೆರೆಗೆ ಮಳೆಗಾಲದ ಸಂದರ್ಭದಲ್ಲಿ ಹರಿದು ಬರುವ ಹೆಚ್ಚುವರಿ ನೀರಿನ ಮೂಲಕ ಹಾಗೂ ಸದ್ಯ ಅಸ್ತಿತ್ವದಲ್ಲಿದ್ದ ಭಾವಿಯ ಮೂಲಕ ನೀರು ತುಂಬಿಸಿ ಇನ್ನುಳಿದ ಅವಧಿಯಲ್ಲಿ ಕೆರೆ ನೀರನ್ನು ತೋಟಗಾರಿಕೆ ಬೆಳೆಗಳಿಗೆ ಉಪಯೋಗಿಸಿಕೊಳ್ಳಲಾಗುವುದು ಎಂದು ಹೇಳಿದರು.  

       ಇಡೀ ಜಿಲ್ಲೆಯಲ್ಲಿಯೇ ತೋಟಗಾರಿಕೆ ಇಲಾಖೆಗೆ ಸೇರಿದ ಗುಂಡೇವಾಡಿಯಲ್ಲಿರುವ 72 ಎಕರೆ ಪ್ರದೇಶವನ್ನು ಸಂರಕ್ಷಿಸುವ ಮತ್ತು ತೋಟಗಾರಿಕೆ ಬೆಳೆಗಳನ್ನು ಬೆಳೆಸುವ ಜವಾಬ್ದಾರಿ ಸ್ಥಳೀಯ ತೋಟಗಾರಿಕೆ ಅಧಿಕಾರಿಗಳ ಮೇಲಿದೆ. ಇಲ್ಲಿ ತೋಟಗಾರಿಕೆ ಬೆಳೆಗಳನ್ನು ಬೆಳೆಯಲು ಇನ್ನೂ ಏನಾದರು ಸೌಲಭ್ಯಗಳು ಬೇಕೆಂದಲ್ಲಿ ತಕ್ಷಣ ನನ್ನ ಗಮನಕ್ಕೆ ತನ್ನಿ ನಾನು ಅವಶ್ಯ ಇರುವ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಕ್ರಮ ಜರುಗಿಸುತ್ತೇನೆ ಎಂದರು. 

 ಕಾಗವಾಡ ಮತಕ್ಷೇತ್ರದಲ್ಲಿ ಕಳಪೆ ಕಾಮಗಾರಿಗೆ ಅವಕಾಶ ಇಲ್ಲ. ನಾನು ಅಧಿಕಾರಕ್ಕೆ ಬಂದ ನಂತರದಲ್ಲಿ ಅನುಷ್ಠಾನಗೊಂಡ ರಸ್ತೆ ಕಾಮಗಾರಿಗಳು ನಾಲ್ಕು ವರ್ಷ ಪೂರ್ಣಗೊಂಡರೂ ಕೂಡ ಇಲ್ಲಿಯವರೆಗೂ ಕೆಟ್ಟಿಲ್ಲ. ಅದರೆ ಇದೇ ಕ್ಷೇತ್ರದಲ್ಲಿ ಈ ಹಿಂದಿನ ಅವಧಿಯಲ್ಲಿ 6 ತಿಂಗಳೊಳಗಾಗಿಯೇ ಅದೇಷ್ಟೋ ರಸ್ತೆ ಕಾಮಗಾರಿಗಳು ಹದಗೆಟ್ಟ ಉದಾಹರಣೆಗಳು ನಮ್ಮೆದುರೇ ಸಾಕಷ್ಟಿವೆ ಎಂದರು.  

      ಗುಂಡೇವಾಡಿ ಫಾರ್ಮನಲ್ಲಿರುವ ವಿವಿಧ ತೋಟಗಾರಿಕೆ ಬೆಳೆಗಳನ್ನು ಹಾಗೂ ಇದಕ್ಕೂ ಮೊದಲು ಅಸ್ತಿತ್ವದಲ್ಲಿದ್ದ ಕೆರೆಯನ್ನು ಶಾಸಕರು ವೀಕ್ಷಿಸಿದರು. ಈ ಸಂದರ್ಭದಲ್ಲಿ ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕಿ ಶ್ವೇತಾ ಹಾಡಕರ, ತೋಟಗಾರಿಕೆ ಇಲಾಖೆಯ ಸಹಾಯಕಿ ಎನ್‌.ಎಸ್‌.ಸಿರಗೂರ, ಗುಂಡೇವಾಡಿ ಗ್ರಾ.ಪಂ ಅಧ್ಯಕ್ಷೆ ಸಂಕ್ರೆವ್ವಾ ಜಾಗವಾನಕರ, ಉಪಾಧ್ಯಕ್ಷ ಗುರುಶಾಂತ ಗೆಜ್ಜಿ, ಧುರೀಣರಾದ ಆರ್‌.ಎಮ್‌.ಪಾಟೀಲ, ಶಿವಾನಂದ ಗೊಲಭಾವಿ, ಶಿದರಾಯ ತೇಲಿ, ರವಿ ಕಾಂಬಳೆ, ಡಿ.ಕೆ.ಪಾಟೀಲ, ಎಮ್‌.ಡಿ.ಜಾಧವ, ಅಬ್ಬಾಸ ಚವ್ಹಾಣ< ರಜಾಕ ಮುಲ್ಲಾ, ಈಶ್ವರ ಕುಂಬಾರೆ, ಲಕ್ಷ್ಮಣ ಐಹೊಳೆ, ವಿಠ್ಠಲ್ ಗಾಡಿವಡ್ಡರ, ಗಣೇಶ ಕಾಂಬಳೆ, ಜಿಲ್ಲಾ ಪಂಚಾಯತನ ವೀರಣ್ಣಾ ವಾಲಿ, ಎಸ್‌.ಎ.ಸಾಂವಗಾಂವ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. 


ಸುದ್ದಿ ಓದಿ