ಕಾರವಾರ

ರಾಜ್ಯದ ಐದು ಕಡೆ ಅಣು ವಿದ್ಯುತ್ ಸ್ಥಾವರ ಸ್ಥಾಪನೆಗೆ ಭೂಮಿ ಅಧ್ಯಯನ? :

ರಾಜ್ಯದ ಐದು ಕಡೆ ಅಣು ವಿದ್ಯುತ್ ಸ್ಥಾವರ ಸ್ಥಾಪನೆಗೆ ಭೂಮಿ ಅಧ್ಯಯನ? :

*ಮಣ್ಣೂರು, ಬನ್ನಿ ಕುಮಟ, ಹಲ್ಕವಟಗಿ, ಬೇಸೂರು, ಭಾವಿಕೇರಿ ಯಲ್ಲಿ ಬರಲಿವೆ ವಿದ್ಯುತ್ ಅಣುಸ್ಥಾವರಗಳು  

ನಾಗರಾಜ್ ಹರಪನಹಳ್ಳಿ  

ಕಾರವಾರ 28: ರಾಜ್ಯದ ಐದು ಕಡೆ ಅಣುಸ್ಥಾವರ ಸ್ಥಾಪನೆಗೆ ಸದ್ದಿಲ್ಲದೆ ಭೂಮಿ ಲಭ್ಯತೆ ಹಾಗೂ ವೈಜ್ಞಾನಿಕ ಅಧ್ಯಯನ ನಡೆದಿದೆ ಎನ್ನಲಾಗಿದೆ. ಕಂದಾಯ ಇಲಾಖೆಯ ಅಪರ ಕಾರ್ಯದರ್ಶಿ ಈ ಕುರಿತು ಜಿಲ್ಲಾಧಿಕಾರಿಗಳಿಗೆ ಕಳೆದ ಜನೇವರಿಯಲ್ಲೇ ಭೂಮಿ ಲಭ್ಯತೆ ಪರೀಶೀಲನೆ ಮಾಡಲು ಸೂಚನೆ ನೀಡಿ, ಫೆಬ್ರುವರಿ 3 ರಂದು ವಿಡಿಯೋ ಕಾನ್ಪರೆನ್ಸ ಮೀಟಿಂಗ್ ಮಾಡಿದ್ದಾರೆ ಎಂದು ವಿಶ್ವಸನೀಯ ಮೂಲಗಳು ತಿಳಿಸಿವೆ.  

ಉತ್ತರ ಕನ್ನಡ ಜಿಲ್ಲೆಯ ಭಾವಿಕೇರಿ, ವಿಜಯಪುರ ಜಿಲ್ಲೆಯ ಮಣ್ಣೂರು, ಕೊಪ್ಪಳರ ಬನ್ನಿ ಕುಮಟ, ರಾಯಚೂರಿನ ಹಲ್ಕವಟಗಿ, ಶಿವಮೊಗ್ಗದ ಬೇಸೂರು ಪರಿಸರದಲ್ಲಿ ವಿದ್ಯುತ್ ಅಣುಸ್ಥಾವರಗಳು ಬರಲಿವೆ . ನ್ಯೂಕ್ಲಿಯರ್ ಪವರ್ ಕಾರ​‍್ೊರೇಷನ್ ಲಿಮಿಟೆಡ್ ಇಂಡಿಯಾ ದವರು 2000 ಮೆಗಾ ವ್ಯಾಟ್ ಸಾಮರ್ಥ್ಯದ ಅಣು ವಿದ್ಯುತ್ ಸ್ಥಾವರಕ್ಕೆ 1200 ಎಕರೆ , 4000 ಮೆಗಾ ವ್ಯಾಟ್ ಉತ್ಪಾದನಾ ಸ್ಥಾವರಕ್ಕೆ 1600 ಎಕರೆ , 6000 ಮೆಗಾ ವ್ಯಾಟ್ ವಿದ್ಯುತ್ ಅಣು ಸ್ಥಾವರಕ್ಕೆ 2000 ಎಕರೆ ಭೂಮಿ ಬೇಕು ಎಂದಿದೆ. ಅಣುಸ್ಥಾವರ ನೌಕರರ ವಸತಿ ಕಾಲೂನಿಗೆ 100-150 ಎಕರೆ ಭೂಮಿಯನ್ನು ಕೇಳಿದೆ. ರಾಜ್ಯದಲ್ಲಿ ಈಗ ಏಕೈಕ ಅಣುಸ್ಥಾವರ ಕಾರವಾರ ಬಳಿಯ ಕೈಗಾದಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಈಗ ಇರುವ ನಾಲ್ಕು ಘಟಕಗಳ ಪೈಕಿ ಮೂರು ಘಟಕಗಳು ತಲಾ 220 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನಾ ಮಾಡುತ್ತಿವೆ.  

ಒಂದನೇ ಘಟಕ 25 ವರ್ಷ ಅವಧಿ ವಿದ್ಯುತ್ ಉತ್ಪಾದನೆ ಮಾಡಿದ್ದು ದಾಖಲೆ ನಿರ್ಮಿಸಿದೆ. ಹಾಗೂ ನವೀಕರಣದ ಕಾರಣಕ್ಕಾಗಿ ಮುಚ್ಚಿದೆ. ತಲಾ 700 ಮೆಗಾ ವ್ಯಾಟ್ ಸಾಮರ್ಥ್ಯದ ಘಟಕಗಳು ನಿರ್ಮಾಣ ಹಂತದಲ್ಲಿವೆ. ದೇಶದಲ್ಲಿ ಕಲ್ಲಿದ್ದಲು ಆಧಾರಿತ ಉಷ್ಣ ವಿದ್ಯುತ್ ಸ್ಥಾವರ ಮುಚ್ಚಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಬಯಸಿವೆ. ಪರಿಸರ ಹಾನಿ ಹಾಗೂ ಕಲ್ಲಿದ್ದಲು ಕೊರತೆ ಕಾರಣ ಉಷ್ಣ ವಿದ್ಯುತ್ ಸ್ಥಾವರ ಮುಚ್ಚಿ, ಅಣು ವಿದ್ಯುತ್, ಪವನ ,ಸೌರ ವಿದ್ಯುತ್ ಉತ್ಪಾದನೆಗೆ ಹೆಚ್ಚಿನ ಆದ್ಯತೆ ನೀಡುವ ನೀತಿ ಕೇಂದ್ರ ಸರ್ಕಾರದ್ದು. ದೇಶದಲ್ಲಿ ಯುರೇನಿಯಂ ಯಥೇಚ್ಛವಾಗಿ ಲಭ್ಯ ಇರುವ ಕಾರಣ ಅಣುಸ್ಥಾವರ ನಿರ್ಮಾಣಕ್ಕೆ ಕೇಂದ್ರ ಸರ್ಕಾರದ ಅಧೀನದ ನ್ಯೂಕ್ಲಿಯರ್ ಪವರ್ ಕಾರ​‍್ೊರೇಷನ್ ಇಂಡಿಯಾ ಹೆಚ್ಚಿನ ಆಸಕ್ತಿ ತೋರುತ್ತಿದೆ. ಭಾರತದ ಅಣುಶಕ್ತಿ ನಿಗಮ ಸಹ ಮುಂದಿನ ದಿನಗಳಲ್ಲಿ ವಿದ್ಯುತ್ ಬೇಡಿಕೆ ಪೂರೈಸಲು ಅಣು ವಿದ್ಯುತ್ ಅನಿವಾರ್ಯ ಎಂಬ ನಿಲುವಿಗೆ ಬಂದಿದೆ.  

ಈಗ ಉ.ಕ. ಜಿಲ್ಲೆಯಲ್ಲಿ ಇನ್ನೊಂದು ಪರಮಾಣು ಸ್ಥಾವರಕ್ಕೆ ಭೂಮಿ ಲಭ್ಯತೆಯ ಹುಡುಕಾಟ ನಡೆದಿದೆ. ಕುಡಂಕುಲಂ ಮಾದರಿಯಲ್ಲಿ ಸಮುದ್ರ ದಂಡೆಗೆ ಹೊಂದಿಕೊಂಡು ಒಂದು ಸ್ಥಾವರ ಮಾಡಬಹುದೇ ಎಂಬ ಆಲೋಚನೆ ಅಣು ವಿಜ್ಞಾನಿಗಳ ಮುಂದೆ ಇತ್ತು. ಆದರೆ ಭಾವಿಕೇರಿ ಸಮೀಪ ಬಂದರು, ನೌಕಾನೆಲೆ, ವಜ್ರಕೋಶ ( ಶಸ್ತ್ರಾಸ್ತ್ರ ಸಂಗ್ರಹ ಡಿಪೋ) , ಸ್ಥಾನನೆಯಾಗಲಿರುವ ವಿಮಾನ ನಿಲ್ದಾಣ ಕಾರಣ , ಅಣುಸ್ಥಾವರ ಸ್ಥಾಪನೆಗೆ ಸ್ಥಳ ಸೂಕ್ತವಲ್ಲ . ಮೇಲಾಗಿ ಸರ್ಕಾರಿ ಭೂಮಿಯೂ ಲಭ್ಯತೆ ಇಲ್ಲ .ಇರುವುದು ಖಾಸಗಿ ಜಮೀನು. ಹಾಗಾಗಿ ಭಾವಿಕೇರಿಯಲ್ಲಿ ಅಣು ಸ್ಥಾವರ ಸ್ಥಾಪನೆಗೆ ಸೂಕ್ತ ಸ್ಥಳವಲ್ಲ ಎಂದು ಜಿಲ್ಲಾಧಿಕಾರಿ ಸರ್ಕಾರಕ್ಕೆ ವರದಿ ನೀಡಿದ್ದಾರೆ . ಅವಕಾಶ ಬೇಡ : ಕೇಂದ್ರ-ರಾಜ್ಯ ಸರ್ಕಾರಗಳು ಈಗಾಗಲೇ ಪರಮಾಣು ಸ್ಥಾವರ ಸ್ಥಳ ಗುರುತಿಸಿವೆ. ಈಗ ಸ್ಥಳ ಸಮೀಕ್ಷೆಗೆ ಇಂಧನ ಇಲಾಖೆ ಈ ಸಮೀಕ್ಷೆಗೆ ಮುಂದಾಗಿದೆ. ಈ ಸ್ಥಳದಲ್ಲಿ ಅಣುಸ್ಥಾವರ ಬೇಡ ಎಂದು ವೃಕ್ಷ ಆಂದೋಲನದ ಸ್ಥಾಪಕ ಅನಂತ ಹೆಗಡೆ ಆಶೀಸರ ವಿರೋಧ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಮಾಧ್ಯಮಗಳಿಗೆ ಲಿಖಿತ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಜಿಲ್ಲೆಯಲ್ಲಿ ಶರಾವತಿ ಪಂಪ್ ಸ್ಟೋರೇಜ್ ವಿದ್ಯುತ್ ಉತ್ಪಾದನಾ ಘಟಕ ಸ್ಥಾಪನೆಗೆ ವಿರೋಧ ವ್ಯಕ್ತವಾಗಿದೆ. ಇನ್ನೊಂದೆಡೆ ದೇಶದಲ್ಲಿ ವಿದ್ಯುತ್ ಬೇಡಿಕೆ ಹೆಚ್ಚುತ್ತಿದೆ . ಬೇಡಿಕೆಗೆ ತಕ್ಕಂತೆ ವಿದ್ಯುತ್ ಉತ್ಪಾದನಾ ಮಾರ್ಗಗಳನ್ನು ಸರ್ಕಾರ ಹುಡುಕುತ್ತಿದೆ.  

ರಾಜ್ಯದಲ್ಲಿ ಉತ್ಪಾದನೆಯಾಗುವ ಒಟ್ಟು ವಿದ್ಯುತ್ ನಲ್ಲಿ ಶೇ.47 ರಷ್ಟು ಕೃಷಿ ಚಟುವಟಿಕೆಗೆ ಮೀಸಲಾಗಿದೆ ಎಂದು ಇಂಧನ ಇಲಾಖೆ ಹೇಳುತ್ತಿದೆ. ಕೈಗಾ ಅಣುಸ್ಥಾವರ ಘಟಕ 5-6 ದಿಂದ ಮುಂದಿನ ದಿನಗಳಲ್ಲಿ ಉತ್ಪಾದನೆಯಾಗುವ 1400 ಮೆಗಾವ್ಯಾಟ್ ನಲ್ಲಿ 700 ಮೆಗಾವ್ಯಾಟ್ ಕರ್ನಾಟಕಕ್ಕೆ ಪಾಲು ಸಿಗಲಿದೆ ಎಂಬುದು ಸಮಾಧಾನದ ಸಂಗತಿಯಾಗಿದೆ.  

ಉತ್ತರ ಕನ್ನಡದ ಭಾವಿಕೇರಿ ಅಣುಸ್ಥಾವರ ಸ್ಥಾಪನೆಗೆ ಸೂಕ್ತಸ್ಥಳವಲ್ಲ. ಅಲ್ಲಿ ಸಾವಿರ ಎಕರೆಯಷ್ಟು ಸರ್ಕಾರಿ ಭೂಮಿಯೂ ಇಲ್ಲ. ನೌಕಾನೆಲೆ ಹತ್ತಿರ ಇರುವ ಕಾರಣ ಅಣುಸ್ಥಾವರ ಸ್ಥಾಪನೆ ಬೇಡ ಎಂದು ಸರ್ಕಾರಕ್ಕೆ ವರದಿ ನೀಡಿದ್ದೇನೆ.  

-ಕೆ.ಲಕ್ಷ್ಮಿಪ್ರಿಯಾ .ಜಿಲ್ಲಾಧಿಕಾರಿ. ಉತ್ತರ ಕನ್ನಡ ಜಿಲ್ಲೆ. 


ಸುದ್ದಿ ಓದಿ