ಕೂನಬೇವು ಗ್ರಾಮದಲ್ಲಿ ಇದ್ದೂ ಇಲ್ಲದಂತಾದ ಶುದ್ಧ ಕುಡಿಯುವ ನೀರಿನ ಘಟಕ
ಲೋಕದರ್ಶನ ವರದಿ
ರಾಣೇಬೆನ್ನೂರು 28: ಸ್ವಚ್ಚ ನಗರ ಸುಂದರ ಗ್ರಾಮಗಳು ಮತ್ತು ಶುದ್ಧ ಕುಡಿಯುವ ನೀರು, ಆರೋಗ್ಯಯುತ ಬದುಕಿಗೆ ಮನೆಗೊಂದು ಶೌಚಾಲಯಗಳು ಕಡ್ಡಾಯವಾಗಿ ಅನುಷ್ಠಾನಗೊಳ್ಳಬೇಕೆನ್ನುವ ಮಹದಾಸೆಯಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರ ಈ ಯೋಜನೆಯನ್ನು ಜಾರಿಗೆ ತಂದು ದೇಶದ ಮತ್ತು ರಾಜ್ಯದ ಜಿಲ್ಲೆಯ ತಾಲೂಕಿನ ಪ್ರತಿ ಗ್ರಾಮೀಣ ಪ್ರದೇಶಗಳಲ್ಲಿ ಈ ಯೋಜನೆಗಳು ಅನುಷ್ಠಾನಗೊಳಿಸಿವೆ. ಆದರೆ, ಶೌಚಾಲಯಗಳನ್ನು ಹೊರತುಪಡಿಸಿ ಮೂಲ ಅಗತ್ಯವಿರುವ ಶುದ್ಧ ಕುಡಿಯುವ ನೀರಿನ ಘಟಕಗಳು ನಿರಂತರವಾಗಿ ನಿರಾತಂಕವಾಗಿ ಕಾರ್ಯ ನಿವ್ಹಿಸುತ್ತಿವೆಯೇ? ಎನ್ನುವ ಪ್ರಶ್ನೆ ಪ್ರತಿಯೊಬ್ಬರಲ್ಲಿ ಕಾಡುತ್ತಲಿದೆ. ಇದಕ್ಕೆ ಉತ್ತರಿಸಬೇಕಾದವರು ನಿರ್ವಹಣೆ ಜವಾಬ್ದಾರಿ ಹೊತ್ತವರು.
ತಾಲೂಕಿನ ಕೂನಬೇವು ಗ್ರಾಮದ ಕವಿ ಪುಟ್ಟರಾಜ ಗವಾಯಿ ಅವರ ರಂಗಮಂದಿರದ ಬಳಿ ಇರುವ ಶುದ್ಧ ಕುಡಿಯುವ ನೀರಿನ ಘಟಕದ ಮುಚ್ಚಿದ ಮನೆ ಕಳೆದ 2 ವರ್ಷಗಳಿಂದ ಮುಚ್ಚಿದ್ದು ಮುಚ್ಚಿದ ಹಾಗೆ ಇರುವುದನ್ನು ನೋಡಿದರೆ ಈ ಶುದ್ಧ ಕುಡಿಯುವ ನೀರಿನ ಘಟಕಗಳು ಗ್ರಾಮೀಣ ನಾಗರಿಕರಿಗೆ ಯಾವ ರೀತಿ ನೀರು ಒದಗಿಸುತ್ತಲಿವೆ ಎನ್ನುವುದು ಹೇಳದೆ ವಿಧಿ ಇಲ್ಲ.
ಅಂದು 2016-17ರಲ್ಲಿ ಕರ್ನಾಟಕ ಸರ್ಕಾರ, ಸಹಕಾರ ಇಲಾಖೆ, ಪಂಚಾಯತ ರಾಜ್ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆ ತನ್ನ ಸಾರ್ವತ್ರಿಕ ಯೋಜನೆಯಲ್ಲಿ ಗ್ರಾಮಸ್ಥರ ಬಹು ಬೇಡಿಕೆಗೆ ಅನುಗುಣವಾಗಿ ಈ ಶುದ್ಧ ಕುಡಿಯುವ ನೀರಿನ ಘಟಕ ಆರಂಭವಾಗಿದ್ದು, ನಿರ್ವಹಣೆ ಜವಾಬ್ದಾರಿ ಹೊತ್ತ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ಲಕ್ಷ್ಯತನದಿಂದಾಗಿ ಗ್ರಾಮಸ್ಥರಿಗೆ ನೀರು ದೊರಕಿಸುವಲ್ಲಿ ಎಡವಿದೆ. ಇದರಿಂದ ಕಳೆದೆರಡು ವರ್ಷಗಳಿಂದ ಮುಚ್ಚಿದ ಬಾಗಿಲು ತೆಗೆದಿಲ್ಲ. ಪುನಃ ಶುದ್ಧ ನೀರು ನಮಗೆ ದೊರೆಯುವುದೇ? ಎನ್ನುವ ಆತಂಕದಲ್ಲಿ ಜನರು ಜಾತಕ ಪಕ್ಷಿಯಂತೆ ಕಾಯುವಂತಾಗಿದೆ.
ಅಂದು ಬ್ಯಾಡಗಿ ಶಾಸಕರಾಗಿದ್ದ ಬಸವರಾಜ ಶಿವಣ್ಣನವರ ಜನರ ಬೇಡಿಕೆಯಂತೆ ಈ ಘಟಕ ಸ್ಥಾಪಿಸಿ ಜನರ ಪ್ರಶಂಸೆಗೆ ಪಾತ್ರರಾಗಿದ್ದರು. ಮುಚ್ಚಿ 2 ವರ್ಷಗಳಾದರೂ ಸಮಸ್ಯೆ ಪರಿಹಾರಕ್ಕೆ ಇಂದಿನ ಶಾಸಕರಾದ ವಿರುಪಾಕ್ಷಪ್ಪ ಬಳ್ಳಾರಿಯವರಿಗೆ ಮೌಖಿಕ ದೂರು ಸಲ್ಲಿಸಲಾಗಿದ್ದರೂ ಯಾವುದೇ ಪ್ರಯೋಜನ ಕಂಡಿಲ್ಲ, ಕಾಣುತ್ತಿಲ್ಲ, ಕಾಣಲೂ ಸಾಧ್ಯವಿಲ್ಲವೇನೋ? ಎನ್ನುವ ಮಾತುಗಳು ಗ್ರಾಮಸ್ಥರಲ್ಲಿ ಕೇಳಿ ಬರುತ್ತಿವೆ. ಬಿಸಿಲಿನ ಬೇಗೆಯಲ್ಲಿ ಬೇಯ್ಯುತ್ತಿರುವ ಗ್ರಾಮಸ್ಥರಿಗೆ ಶುದ್ಧ ಕುಡಿಯುವ ನೀರಿನ ಅವಶ್ಯಕತೆ ತುಂಬಾ ಇದ್ದು, ಇನ್ನಾದರೂ ಸೊಸೈಟಿ ಆಡಳಿತ ಮತ್ತು ಬ್ಯಾಡಗಿ ಶಾಸಕ ವಿರುಪಾಕ್ಷಪ್ಪ ಬಳ್ಳಾರಿ ಅವರು ಗಮನ ಹರಿಸುವರೇ? ಎನ್ನುವ ಮಾತುಗಳು ಸಾರ್ವತ್ರಿಕವಾಗಿ ಕೇಳಿ ಬರುತ್ತಿವೆ.