ಬತ್ತುತ್ತಿರುವ ಕೃಷ್ಣೆಯ ಒಡಲು: ನೀರಿಗೆ ಹಾಹಾಕಾರ ಸಂಭವ
ಮಹಾರಾಷ್ಟ್ರ ಸರಕಾರದ ಜೊತೆ ಮಾತುಕತೆ ನಡೆಸಿ ನೀರು ಬಿಡಿಸಬೇಕೆಂಬುದು ಪ್ರಜ್ಞಾವಂತರ ಒತ್ತಾಯ : ಸಂತೋುಷಕುಮಾರ ಕಾಮತ
ಮಾಂಜರಿ 9: ಮಳೆಗಾಲ, ಚಳಿಗಾಲ ಅವಧಿಯಲ್ಲಿ ಮೈದುಂಬಿ ಹರಿಯುತ್ತಿರುವ ಕೃಷ್ಣಾ ನದಿ ಬೇಸಿಗೆ ಕಾಲದಲ್ಲಿ ಹರಿಯುವ ನೀರಿನ ಪ್ರಮಾಣ ಸಂಪೂರ್ಣ ಕಡಿಮೆಯಾಗುತ್ತಿದ್ದು, ನದಿ ತೀರದ ಜನ-ಜಾನುವಾರಗಳಿಗೆ ಕುಡಿಯುವ ನೀರಿಗೆ ಹಾಹಾಕಾರ ಎದುರಾಗುವ ಸಂಭವ ಹೆಚ್ಚಾಗಿದ್ದರಿಂದ ಗಡಿ ಭಾಗದಲ್ಲಿ ಆತಂಕ ಉಲ್ಬಣಗೊಂಡಿದೆ.
ನದಿಯಲ್ಲಿ ಇದೀಗ ನೀರು ಅಲ್ಪಸ್ವಲ್ಪ ಹರಿಯಲಾರಂಭಿಸಿದೆ. ಈಗ ಹರಿಯುವ ನೀರು ಒಂದು ವಾರದವರೆಗೆ ಬಳಕೆಯಾಗಬಹುದು. ಇದೇ ರೀತಿ ನೆತ್ತಿ ಸುಡುವ ಬಿಸಿಲಿನ ಧಗೆ ಮುಂದುವರೆದರೆ ಕೃಷ್ಣಾ ನದಿ ಬತ್ತುವ ದಿನಗಳು ಸಮೀಪಿಸುತ್ತದೆ. ಜೂನ ತಿಂಗಳಲ್ಲಿ ಈ ಗತಿ ಎದುರಾದರೇ ಮುಂದಿನ ತಿಂಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಏನೆಂಬುದು ರೈತರಲ್ಲಿ ಈಗಿನಿಂದಲೇ ಆತಂಕ ಸೃಷ್ಠಿಯಾಗಿದೆ.
ಕಳೆದ ವರ್ಷ ಬೇಸಿಗೆಯ ಜನವರಿ ತಿಂಗಳಿನಲ್ಲೇ ನದಿ ಸಂಪೂರ್ಣ ಬತ್ತಿ ಬರಿದಾಗಿತ್ತು. ನದಿ ತೀರದ ಜನತೆ ನದಿ ಒಡಲಿನಲ್ಲ್ಲಿ ಬಾವಿಗಳನ್ನು ತೋಡಿ ಜನ ಜಾನುವಾರಗಳಿಗೆ ನೀರು ಅಗೆಯುತ್ತಾ ಹನಿ ನೀರಿಗಾಗಿ ಪರದಾಡಿದ್ದರು. ಈ ಬಾರಿ ನದಿ ನೀರು ಜೂನ ತಿಂಗಳವರೆಗೆ ಖಾಲಿಯಾಗಿಲ್ಲ, ಆದರೆ ಹರಿವಿನಲ್ಲಿ ಮಾತ್ರ ಸಂಪೂರ್ಣ ಕಡಿಮೆಯಾಗುತ್ತಿದೆ. ತಗ್ಗು ಪ್ರದೇಶದಲ್ಲಿ ಮಾತ್ರ ನೀರಿನ ಮಟ್ಟ ಹೆಚ್ಚಾಗಿದೆ. ಕೆಲವೊಂದು ಕಡೆಗಳಲ್ಲಿ ನದಿ ನೀರು ತಳ ಕಂಡಿದೆ.
ನೀರಿನ ಪ್ರಮಾಣ ಕುಸಿಯುತ್ತಿರುವುದರಿಂದ ರೈತರು ಬೆಳೆದ ಬೆಳೆಗಳು ಕಮರಿ ಹೋಗುತ್ತಿದ್ದು, ಮೇವಿನ ಕೊರತೆ, ಕುಡಿಯುವ ನೀರಿನ ಸಮಸ್ಯೆ ಉಲ್ಬನಗೊಳ್ಳುತ್ತಿದೆ. ಕೃಷ್ಣಾ ನದಿಯ ನೀರಿನ ಮೇಲೆ ಸುಮಾರು 30 ಗ್ರಾಮಗಳು ಅವಲಂಬಿಸಿವೆ. ಈ ಬಾರಿ ಜುನ ತಿಂಗಳಲ್ಲಿಯೇ ನದಿಯಲ್ಲಿನ ನೀರಿನ ಮಟ್ಟ ಕುಸಿಯುತ್ತಿದ್ದು, ರೈತರಲ್ಲಿ ಆತಂಕವನ್ನುಂಟು ಮಾಡಿದೆ. ಕೃಷ್ಣಾ ನದಿ ನೀರು ನಂಭಿರುವ ಚಿಕ್ಕೋಡಿ ಉಪವಿಭಾಗದ ಅಥಣಿ, ಚಿಕ್ಕೋಡಿ ಮತ್ತು ರಾಯಬಾಗ ತಾಲೂಕಿನ ಜನರು ಪ್ರತಿ ವರ್ಷ ಬೇಸಿಗೆ ಕಾಲದಲ್ಲಿ ಕುಡಿಯುವ ನೀರಿಗೂ ಸಂಕಷ್ಟ ಪಡುವುದು ಸಾಮಾನ್ಯವಾಗಿದೆ.
ಚಿಕ್ಕೋಡಿ ತಾಲೂಕಿನಲ್ಲಿ ಹರಿಯುತ್ತಿರುವ ದೂಧಗಂಗಾ, ವೇಧಗಂಗಾ ನದಿಗಳು ಕಳೆದ ಎರಡು ತಿಂಗಳ ಹಿಂದೆಯೇ ಬತ್ತಿ ಬರಡಾಗಿತ್ತು. ಆದರೆ ಸ್ಥಳೀಯ ಜನಪ್ರತಿನಿಧಿಗಳು ಮತ್ತು ರಾಜ್ಯದ ನೀರಾವರಿ ಇಲಾಖೆ ಅಧಿಕಾರಿಗಳು ಕೊಲ್ಲಾಪೂರದ ನೀರಾವರಿ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿ ದೂಧಗಂಗಾ ನದಿಗೆ ನೀರು ಬಿಡಿಸಿಕೊಂಡು ಬಂದಿರುವದರಿಂದ ಆ ನದಿಗಳಲ್ಲಿ ಇನ್ನೂ ನೀರು ಹರಿಯುತ್ತದೆ. ಅದೇ ರೀತಿ ಕೃಷ್ಣಾ ನದಿ ನೀರು ಬತ್ತುವ ಮುನ್ನವೇ ಮಹಾರಾಷ್ಟ್ರ ಸರಕಾರದ ಜೊತೆ ಮಾತುಕತೆ ನಡೆಸಿ ನೀರು ಬಿಡಿಸುವ ಕೆಲಸ ಮಾಡಬೇಕೆಂಬುದು ಪ್ರಜ್ಞಾವಂತರ ಒತ್ತಾಯವಾಗಿದೆ.
ನದಿ ನೀರು ಖಾಲಿಯಾಗುವ ಮುನ್ನವೇ ಮಹಾರಾಷ್ಟ್ರದ ಸರ್ಕಾರದ ಜೊತೆ ಮಾತುಕತೆ ನಡೆಸಿ ನದಿಗೆ ನೀರು ಬಿಡಿಸಿದರೇ ನದಿ ತೀರದ ರೈತರ ಬಾಳು ಹಸನಾಗುತ್ತಿದೆ. ಇಲ್ಲವಾದರೆ ನೀರಿನಿಂದ ತೆಗೆದ ಮೀನಿನ ಹಾಗೇ ರೈತ ಜೀವನ ಸಾಗುತ್ತದೆ. ಅಧಿಕಾರಿಗಳು ನೀರು ಬಿಡಿಸುವ ಕೆಲಸ ಮಾಡಬೇಕು.
ಶಂಕರ ದೇಸಾಯಿ ಪ್ರಗತಿಪರ ರೈತರು. ಮಾಂಜರಿ
ಬೇಸಿಗೆ ಕಾಲದಲ್ಲಿ ನದಿ ನೀರು ಖಾಲಿಯಾಗುತ್ತದೆ. ಹೀಗಾಗಿ ನದಿಗೆ ನೀರು ಬಿಡಿಸಬೇಕೆಂದು ನೀರಾವರಿ ಇಲಾಖೆಗೆ ಮತ್ತು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯಲಾಗಿದೆ. ಸರ್ಕಾರದ ಮಟ್ಟದಲ್ಲಿ ಕೃಷ್ಣಾ ನದಿಗೆ ನೀರು ಬಿಡುವ ಪ್ರಸ್ತಾಪ ಯತಾವತ್ತಾಗಿ ನಡೆಯುತ್ತದೆ. ನದಿ ತೀರದ ಜನರಿಗೆ ತೊಂದರೆಯಾಗದಂತೆ ನೋಡಿಕೊಳ್ಳಲಾಗುತ್ತದೆ.
ಆನಂದ ಬಣಕಾರ
ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಗ್ರಾ.ಕು.ನೀ.ಸ ಇಲಾಖೆ ಚಿಕ್ಕೋಡಿ