ಇತಿಹಾಸ ಮತ್ತು ಸಂಸ್ಕೃತಿಯ ಅರಿವು ತುಂಬಾ ಅವಶ್ಯ: ಬುಳ್ಳಣ್ಣವರ
ಧಾರಡಾಡ,12: ಪಠ್ಯದ ಜೊತೆಗೆ ಇಂದು ನಮಗೆ ನಮ್ಮ ಇತಿಹಾಸ ಮತ್ತು ಸಂಸ್ಕೃತಿಯ ಅರಿವು ತುಂಬಾ ಅವಶ್ಯವಾಗಿದೆ. ಇತಿಹಾಸದ ಜ್ಞಾನವಿಲ್ಲದೇ ವರ್ತಮಾನ ಹಾಗೂ ಭವಿಷ್ಯವನ್ನು ರೂಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಪ್ರಾಂಶುಪಾಲ ಡಾ. ಬಿ.ಎಚ್. ಬುಳ್ಳಣ್ಣವರ ಹೇಳಿದರು.
ಅವರು ಅಣ್ಣಿಗೇರಿಯ ಶ್ರೀ ಮಹಾದೇವಪ್ಪ ಬಸಲಿಂಗಪ್ಪ ಹಳ್ಳಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಇತಿಹಾಸ ವಿಭಾಗವು 2024ರ ಜುಲೈ 10ರಂದು ಹಮ್ಮಿಕೊಂಡಿದ್ದ ‘ವಿಜಯನಗರ ಕಾಲದ ಕಲೆ ಮತ್ತು ವಾಸ್ತುಶಿಲ್ಪ’ ವಿಶೇಷ ಉಪನ್ಯಾಸ ಕಾರ್ಯಕ್ರಮದ ಅಧ್ಯಕ್ಷೀಯ ಮಾತುಗಳನ್ನಾಡುತ್ತ ಕರ್ನಾಟಕದ ಇತಿಹಾಸದಲ್ಲಿ ವಿಜಯನಗರ ಮನೆತನಕ್ಕೆ ಅತ್ಯುನ್ನತ ಸ್ಥಾನಮಾನವಿದ್ದು, ವಿದ್ಯಾರ್ಥಿಗಳು ಆ ಮನೆತನದ ಇತಿಹಾಸವನ್ನು ಕೇವಲ ಪರೀಕ್ಷೆಗಾಗಿ ಓದದೆ ಬದುಕನ್ನು ರೂಪಿಸಿಕೊಳ್ಳುವ ಉದ್ದೇಶದಿಂದ ಓದಿದರೆ ಆ ಕಾಲದ ಜೀವನ ಮೌಲ್ಯಗಳು ತಮ್ಮ ಬದುಕಿಗೆ ಆದರ್ಶಗಳಾಗುತ್ತವೆ ಎಂದು ಹೇಳಿದರು.
ಸಂಪನ್ಮೂಲ ವ್ಯಕ್ತಿ ಹುಲಕೋಟಿಯ ಶ್ರೀ ಕೆ.ಎಚ್. ಪಾಟೀಲ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥ ಮತ್ತು ಸಹ ಪ್ರಾಧ್ಯಾಪಕ ಡಾ. ಅಪ್ಪಣ್ಣ ಹಂಜೆ ಅವರು ಕರ್ನಾಟಕದ ಸಂಸ್ಕೃತಿಯ ರಕ್ಷಣೆ ಉದ್ದೇಶದಿಂದ ಉದಯಿಸಿದ ವಿಜಯನಗರ ಕಾಲದ ಧಾರ್ಮಿಕ ಮತ್ತು ಲೌಕಿಕ ಸ್ಮಾರಕಗಳು, ಶಿಲ್ಪಗಳು ಕೇವಲ ಸೌಂದರ್ಯಕ್ಕೆ ಹೆಸರಾಗಿರದೆ ಆ ಕಾಲದ ಸಂಸ್ಕೃತಿ, ಸಾಹಿತ್ಯ, ಸಮಾಜ, ಜೀವನ ಮೌಲ್ಯಗಳ ಪ್ರತೀಕಗಳಾಗಿದ್ದು, ಎಂತಲೇ ಅವು ಜಗತ್ಪ್ರಸಿದ್ಧವಾಗಿವೆ. ಅವುಗಳ ತಾತ್ವಿಕ, ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ ಪರಿಕಲ್ಪನೆಗಳನ್ನು ಅರಿತಾಗ ಮಾತ್ರ ಅಂದಿನ ಕಲೆ ಮತ್ತು ವಾಸ್ತುಶಿಲ್ಪದ ಶ್ರೇಷ್ಠತೆಯನ್ನು ಅರಿಯಲು ಸಾಧ್ಯವೆಂದು ಹೇಳುತ್ತ ವಿಜಯನಗರ ಕಾಲದ ಸ್ಮಾರಕಗಳ ವಾಸ್ತು ಲಕ್ಷಣಗಳು ಮತ್ತು ಶಿಲ್ಪಗಳ ಪ್ರತಿಮಾ ಲಕ್ಷಣಗಳನ್ನು ವಿದ್ಯಾರ್ಥಿಗಳಿಗೆ ಮನಮುಟ್ಟುವಂತೆ ವಿವರಿಸಿದರು.
ಇತಿಹಾಸ ವಿಭಾಗದ ಮುಖ್ಯಸ್ಥರು ಮತ್ತು ಸಹ ಪ್ರಾಧ್ಯಾಪಕಿ ಡಾ. ವಿದ್ಯಾ ಎಸ್. ಹಡಗಲಿ ಪ್ರಾಸ್ತಾವಿಕವಾಗಿ ಮಾತನಾಡುತ್ತ ವಿದ್ಯಾರ್ಥಿಗಳ ಜ್ಞಾನವನ್ನು ವಿಸ್ತರಿಸುವ ಉದ್ದೇಶದಿಂದ ಇಂಥ ವಿಶೇಷ ಉಪನ್ಯಾಸಗಳನ್ನು ಹಮ್ಮಿಕೊಳ್ಳುತ್ತಿದ್ದು, ಇವುಗಳಲ್ಲಿ ವಿದ್ಯಾರ್ಥಿಗಳು ಆಸಕ್ತಿಯಿಂದ ಭಾಗವಹಿಸಬೇಕೆಂದರು. ಕಾರ್ಯಕ್ರಮದಲ್ಲಿ ಕಾಲೇಜಿನ ಬೋಧಕರು ಮತ್ತು ಬೋಧಕೇತರ ಸಿಬ್ಬಂದಿಗಳು ಭಾಗವಹಿಸಿದ್ದರು. ಕುಮಾರಿ ಅಶ್ವಿನಿ ಪೂಜಾರ ಪ್ರಾರ್ಥಿಸಿದರು. ರಿಯಾನಾ ದಾದಾಪೀರ ಸ್ವಾಗತಿಸಿದರು. ಪ್ರೊ. ಎಸ್.ಎಚ್. ಹರ್ಲಾಪೂರ ವಂದಿಸಿದರು. ಸುಕನ್ಯಾ ಮದಗುಣಕಿ ನಿರೂಪಿಸಿದರು.