ಕಾರವಾರ ವಿಧಾನಸಭಾ ಕ್ಷೇತ್ರ ಬಿಜೆಪಿಗೆ ಮೀಸಲು :ಅಸ್ನೋಟಿಕರ್ ಗೆ ಸ್ಪಷ್ಟ ರಾಜಕೀಯ ನಿಲುವು ಇಲ್ಲ ; ಮಾಜಿ ಶಾಸಕಿ ರೂಪಾಲಿ ನಾಯ್ಕ
ಕಾರವಾರ 12: ಕಾರವಾರ ವಿಧಾನಸಭಾ ಕ್ಷೇತ್ರಕ್ಕೆ ಮುಂಬರುವ ಚುನಾವಣೆಯಲ್ಲಿ ಬಿಜೆಪಿಗೆ ಟಿಕೆಟ್ ಸಿಗುವುದು ಖಚಿತ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷೆ ಹಾಗೂ ಮಾಜಿ ರೂಪಾಲಿ ನಾಯ್ಕ ಹೇಳಿದರು. ಕಾರವಾರದ ಪತ್ರಿಕಾಭವನದಲ್ಲಿ ರವಿವಾರ ಸುದ್ದಿಗೋಷ್ಠಿ ನಡೆಸಿದ ಅವರು ಕಾರವಾರ ವಿಧಾನಸಭಾ ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿಗೆ ಟಿಕೆಟ್ ಎಂಬ ಮಾಜಿ ಸಚಿವ ಆನಂದ್ ಅಸ್ನೋಟಿಕರ್ ಅವರ ಹೇಳಿಕೆಗಳನ್ನು ಕೇವಲ ರಾಜಕೀಯ ಭ್ರಮೆ ಎಂದು ರೂಪಾಲಿ ಹೇಳಿದರು.
ಅಸ್ನೋಟಿಕರ್ ಗೆ ಸ್ಪಷ್ಟ ರಾಜಕೀಯ ನಿಲುವು ಇಲ್ಲ ಎಂದ ಅವರು ಬಿಜೆಪಿ ಮತ್ತು ಜೆಡಿಎಸ್ ನಡುವಿನ ಮೈತ್ರಿ ಕೇವಲ ಕಳೆದ ಲೋಕಸಭಾ ಚುನಾವಣೆಗೆ ಮಾತ್ರ ಸೀಮಿತವಾಗಿತ್ತು ಹಾಗೂ ವಿಧಾನಸಭಾ ಚುನಾವಣೆಯ ಮೈತ್ರಿ ಕುರಿತು ಯಾವುದೇ ಅಂತಿಮ ನಿರ್ಧಾರವಾಗಿಲ್ಲ ಎಂದು ಸ್ಪಷ್ಟಪಡಿಸಿದರು. ಕರಾವಳಿ ಭಾಗದಲ್ಲಿ ಬಿಜೆಪಿ ಸಂಘಟನಾತ್ಮಕವಾಗಿ ಅತ್ಯಂತ ಪ್ರಬಲವಾಗಿದ್ದು, ಇಲ್ಲಿ ಜೆಡಿಎಸ್ ಅಸ್ತಿತ್ವ ಇಲ್ಲ.
ಕಾರವಾರ ಕ್ಷೇತ್ರದಲ್ಲಿ ಜೆಡಿಎಸ್ ಪ್ರತಿನಿಧಿಸುವ ನಾಯಕರು ಜನರಿಂದ ದೂರವಾಗಿ ದಶಕಗಳೇ ಕಳೆದಿವೆ ಎಂದು ಅವರು ಟೀಕಿಸಿದರು.ವಿಶೇಷವಾಗಿ ಆನಂದ್ ಅಸ್ನೋಟಿಕರ್ ಅವರ ರಾಜಕೀಯ ನಿಲುವನ್ನು ಪ್ರಶ್ನಿಸಿದ ರೂಪಾಲಿ ನಾಯ್ಕ, ಕಳೆದ ವಿಧಾನಸಭಾ ಚುನಾವಣೆಯ ಸಮಯದಲ್ಲಿ ಅಸ್ನೋಟಿಕರ್ ಅವರು ನಾಪತ್ತೆಯಾಗಿದ್ದರು. ಎರಡು ದಿನ ಮಾಡಿದ ನಾಟಕದಲ್ಲಿ ಅವರು ಯಾರನ್ನು ಬೆಂಬಲಿಸಿದ್ದರು ಎಂಬುದು ಕ್ಷೇತ್ರದ ಜನತೆಗೆ ಚೆನ್ನಾಗಿ ತಿಳಿದಿದೆ.
ಸ್ವಂತ ರಾಜಕೀಯ ನೆಲೆ ಇಲ್ಲದ ಅವರು, ಎಚ್.ಡಿ. ಕುಮಾರಸ್ವಾಮಿ ಅವರು ಟಿಕೆಟ್ ನೀಡುತ್ತಾರೆ ಎಂದು ಮಾಧ್ಯಮಗಳ ಮುಂದೆ ಹೇಳಿಕೆ ನೀಡುತ್ತಿರುವುದು ಒಂದು ನಾಟಕೀಯತೆ ಅಷ್ಟೇ. ಕಳೆದ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದಲ್ಲಿದ್ದರೂ ಸ್ಪರ್ಧಿಸದೆ, ಡಮ್ಮಿ ಅಭ್ಯರ್ಥಿಯನ್ನು ಕಣಕ್ಕಿಳಿಸಿ ಪರೋಕ್ಷವಾಗಿ ವಿರೋಧ ಪಕ್ಷದ ಅಭ್ಯರ್ಥಿಗೆ ಸಹಾಯ ಮಾಡಿರುವ ಇತಿಹಾಸ ಅವರದ್ದು ಎಂದರು.
ಕಾರವಾರದಲ್ಲಿ ಜೆಡಿಎಸ್ಗೆ ಟಿಕೆಟ್ ನೀಡುವ ಕುರಿತು ಯಾವುದೇ ಹಂತದಲ್ಲೂ ಚರ್ಚೆ ನಡೆದಿಲ್ಲ ಮತ್ತು ಅಸ್ನೋಟಿಕರ್ ಅವರು ಹಬ್ಬಿಸುತ್ತಿರುವ ಸುದ್ದಿಗಳು ಸಂಪೂರ್ಣ ಸುಳ್ಳಿನಿಂದ ಕೂಡಿದೆ. ಕ್ಷೇತ್ರದಲ್ಲಿ ಅಸ್ತಿತ್ವವೇ ಇಲ್ಲದ ಪಕ್ಷಕ್ಕೆ ಟಿಕೆಟ್ ಕೊಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ.
ಅಸ್ನೋಟಿಕರ್ ಅವರು ಈ ಬಾರಿಯೂ ವಿರೋಧ ಪಕ್ಷದ ಪರವಾಗಿ ಪ್ರಚಾರ ಮಾಡುವುದೇ ಸೂಕ್ತ ಎಂದು ಅವರು ವ್ಯಂಗ್ಯವಾಡಿದರು. ಮಹಿಳಾ ಮೀಸಲಾತಿ ಕುರಿತ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದರಿಂದ ಹೆಚ್ಚಿನ ರಾಜಕೀಯ ಪ್ರತಿಕ್ರಿಯೆಗೆ ಅವರು ನಿರಾಕರಿಸಿದರು. ಕಾರವಾರ ಕ್ಷೇತ್ರವು ಬಿಜೆಪಿಯ ಕೈ ತಪ್ಪುವ ಪ್ರಶ್ನೆಯೇ ಇಲ್ಲ ಎಂದರು.