ಕರ್ನಾಟಕ ಪಬ್ಲಿಕ್ ಶಾಲೆ ಶಿಕ್ಷಕರು ಮಕ್ಕಳಿಗೆ ಹೂ ಗುಚ್ಛ ನೀಡಿ ಸ್ವಾಗತ
ಯರಗಟ್ಟಿ 31: ಕಳೆದ ಒಂದೂವರೆ ತಿಂಗಳಿಂದ ಬೇಸಿಗೆ ರಜೆಯಿಂದ ಬಂದ್ ಆಗಿದ್ದ ಶಾಲೆಗಳು ಇಂದಿನಿಂದ ಕಲಿಕೆಗೆ ತೆರೆದುಕೊಂಡಿವೆ. ಹಲವು ಖಾಸಗಿ ಶಾಲೆಗಳು ಈಗಾಗಲೇ ತರಗತಿಗಳನ್ನು ಆರಂಭಿಸಿದ್ದು, ಇಂದು ಸರ್ಕಾರಿ ಶಾಲೆಗಳು ಅಧಿಕೃತವಾಗಿ ಪುನರಾರಂಭಗೊಂಡಿವೆ.
ಸಮೀಪದ ಸತ್ತಿಗೇರಿ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ, ಶಾಲಾ ಪ್ರಾರಂಭೋತ್ಸವದ ನಿಮಿತ್ತವಾಗಿ ಚಿಣ್ಣರಿಗೆ, ಹೂ ಗುಚ್ಚ ಹಾಗೂ ಸಿಹಿ ನೀಡಿ ಶಿಕ್ಷಕರು ಬರಮಾಡಿಕೊಂಡರು. ಎತ್ತಿನ ಬಂಡಿಯಲ್ಲಿ ಮೆರವಣಿಗೆ ಹೊರಟು ಗಮನ ಸೆಳೆದರು. ಅಲ್ಲದೇ ಪ್ರಾಥಮಿಕ ವಿಭಾಗದ ಶಿಕ್ಷಕರು, ಶಾಲಾ ಸೌಲಭ್ಯಗಳನ್ನು ಸಾರುವ ಕರಪತ್ರಗಳನ್ನು ಗ್ರಾಮದ ಮನೆಮನೆಗಳಿಗೆ ತಲುಪಿಸಿ ತಮ್ಮ ಶಾಲೆಗೆ ಮಕ್ಕಳನ್ನು ದಾಖಲಿಸುವಂತೆ ಪಾಲಕರಿಗೆ ವಿನಂತಿ ಮಾಡಿಕೊಂಡರು.ಈ ಬಗ್ಗೆ ಕರ್ನಾಟಕ ಪಬ್ಲಿಕ್ ಶಾಲೆಯ ಉಪ ಪ್ರಾಂಶುಪಾಲ ಎಂ.ಕೆ.ಹಾದಿಮನಿ ಅವರು ಮಾತನಾಡಿ ನಮ್ಮ ಶಾಲೆಯ ಪ್ರತಿಯೊಂದು ತರಗತಿ ಕೊಠಡಿ, ಹೊರಾಂಗಣ, ಬಿಸಿಯೂಟ ಕೊಠಡಿ, ಆಟದ ಮೈದಾನ, ಕಾಂಪೌಂಡ್ ಸೇರಿದಂತೆ ಉತ್ತಮ ರೀತಿಯಲ್ಲಿ ಸ್ವಚ್ಛಗೊಳಿಸಲಾಗಿದೆ. ಮಕ್ಕಳು ಶಾಲೆಗೆ ಬರುತ್ತಿದ್ದಂತೆ ಅವರಿಗೆ ಹೂವು, ಚಾಕೊಲೇಟ್ ನೀಡಿ ಸ್ವಾಗತ ನೀಡಲಾಯಿತು.ಈಗಾಗಲೇ ಮಕ್ಕಳಿಗೆ ಸಮವಸ್ತ್ರ ಪೂರ್ಣ ಪ್ರಮಾಣದಲ್ಲಿ ಶಾಲೆಗೆ ರವಾನೆಯಾಗಿದ್ದು, ಪಠ್ಯಪುಸ್ತಕಗಳನ್ನು ವಿತರಣೆ ಮಾಡಲಾಯಿತು ಎಂದರು.ಎಸ್ಡಿಎಂಸಿ ಸ್ಥಾಯಿ ಸಮಿತಿಗಳ ಅಧ್ಯಕ್ಷ ಉಮೇಶ ಮಾಗುಂಡನವರ, ಈರಣ್ಣ ಹೊಸಮನಿ, ಪ್ರಭಾರಿ ಪ್ರಾಂಶುಪಾಲ ವಿವೇಕ ದಿವಟೆ, ಸಿಆರ್ಿ ಬಾಳೇಶ ಸಿದ್ದಬಸನ್ನವರ, ಪ್ರಾಥಮಿಕ ವಿಭಾಗದ ಮುಖ್ಯ ಶಿಕ್ಷಕ ಎಸ್. ಬಿ.ತೊರಗಲ್ಲ ಸೇರಿದಂತೆ ಎಲ್ಲ ಶಿಕ್ಷಕರು, ಮಕ್ಕಳು ಮತ್ತು ನಾಗರೀಕರು ಈ ಸಂದರ್ಭದಲ್ಲಿ ಇದ್ದರು.