ಕರ್ನಾಟಕ ವಿದ್ಯಾವರ್ಧಕ ಸಂಘದ ಸಂಸ್ಥಾಪನಾ ದಿನಾಚರಣೆ: 20ರಿಂದ 24ರವರೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು
ಲೋಕದರ್ಶನ ವರದಿ
ಧಾರವಾಡ: ಕರ್ನಾಟಕ ವಿದ್ಯಾವರ್ಧಕ ಸಂಘದ 137ನೇ ಸಂಸ್ಥಾಪನಾ ದಿನಾಚರಣೆಯ ಅಂಗವಾಗಿ ಜುಲೈ 20ರಿಂದ 24, 2026ರವರೆಗೆ ಪ್ರತಿದಿನ ಸಂಜೆ 5.30ಕ್ಕೆ ಸಂಘದ ನಾಡೋಜ ಡಾ. ಪಾಟೀಲ ಪುಟ್ಟಪ್ಪ ಸಭಾಭವನದಲ್ಲಿ ವಿವಿಧ ಸಾಂಸ್ಕೃತಿಕ ಹಾಗೂ ಸಾಹಿತ್ಯಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಈ ಸಂದರ್ಭದಲ್ಲಿ ‘ಸಿರಿಗನ್ನಡಂ ಗೆಲ್ಗೆ ಶ್ರೀ ರಾ. ಹ. ದೇಶಪಾಂಡೆ ಪ್ರಶಸ್ತಿ’ ಹಾಗೂ ‘ಕನ್ನಡ ಪ್ರಪಂಚ ಡಾ. ಪಾಟೀಲ ಪುಟ್ಟಪ್ಪ ಪ್ರಶಸ್ತಿ’ ಪ್ರದಾನ ಸಮಾರಂಭ, ಸುಗಮ ಸಂಗೀತ, ಜಾನಪದ ಹಾಡು, ನಾಟಕ ಪ್ರದರ್ಶನ, ಚಿತ್ರಕಲಾ ಪ್ರದರ್ಶನ ಮತ್ತು ಸಂಘದ ಹಿರಿಯ ಸದಸ್ಯರ ಸನ್ಮಾನ ಕಾರ್ಯಕ್ರಮಗಳು ನಡೆಯಲಿವೆ.
ಜುಲೈ 20ರಂದು ಸಂಜೆ 5.30ಕ್ಕೆ ಕಲಾವಿದೆ ಪೂಜಾ ಶಿ. ಮರಬಸಣ್ಣವರ ಅವರ ಚಿತ್ರಕಲಾ ಪ್ರದರ್ಶನ ಉದ್ಘಾಟನೆಯಾಗಲಿದೆ. ಬಳಿಕ ‘ಸಿರಿಗನ್ನಡಂ ಗೆಲ್ಗೆ ಶ್ರೀ ರಾ. ಹ. ದೇಶಪಾಂಡೆ ಪ್ರಶಸ್ತಿ’ ಪ್ರದಾನ ಸಮಾರಂಭ ಜರುಗಲಿದೆ.
ಬೈಲೂರು ನಿಷ್ಕಳ ಮಂಟಪ ಹಾಗೂ ಮುಂಡರಗಿ ತೋಂಟದಾರ್ಯ ಮಠದ ಪೂಜ್ಯ ಶ್ರೀ ನಿಜಗುಣಾನಂದ ಮಹಾಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ಕರ್ನಾಟಕ ವಿದ್ಯಾವರ್ಧಕ ಸಂಘದ ಕಾರ್ಯಾಧ್ಯಕ್ಷ ಬಸವಪ್ರಭು ಹೊಸಕೇರಿ ಪ್ರಾಸ್ತಾವಿಕವಾಗಿ ಮಾತನಾಡಲಿದ್ದು, ಹುಬ್ಬಳ್ಳಿಯ ಮಾಜಿ ಸಂಸದ ಪ್ರೊ. ಐ. ಜಿ. ಸನದಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.
ಬೆಂಗಳೂರುದ ಮಾಜಿ ಸಚಿವರು ಹಾಗೂ ಸಾಹಿತಿ ಡಾ. ಲೀಲಾದೇವಿ ಆರ್. ಪ್ರಸಾದ್ ಅವರಿಗೆ ‘ಸಿರಿಗನ್ನಡಂ ಗೆಲ್ಗೆ ಶ್ರೀ ರಾ. ಹ. ದೇಶಪಾಂಡೆ ಪ್ರಶಸ್ತಿ’ ಪ್ರದಾನ ಮಾಡಲಾಗುತ್ತದೆ. ಧಾರವಾಡದ ಅಂತಾರಾಷ್ಟ್ರೀಯ ಭಾಷಾತಜ್ಞ ಪ್ರೊ. ಗಣೇಶ್ ದೇವಿ ಪ್ರಶಸ್ತಿ ಪ್ರದಾನ ಮಾಡಲಿದ್ದು, ಕಿತ್ತೂರಿನ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದ ಪ್ರಾಧ್ಯಾಪಕಿ ಡಾ. ಪ್ರಜ್ಞಾ ಮತ್ತಿಹಳ್ಳಿ ಅಭಿನಂದನಾ ನುಡಿಗಳನ್ನಾಡಲಿದ್ದಾರೆ.
ಈ ಸಂದರ್ಭದಲ್ಲಿ ಕರ್ನಾಟಕ ಕುಲಪುರೋಹಿತ ಆಲೂರು ವೆಂಕಟರಾವ್ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ (ರಿ.) ಪ್ರಕಟಿಸಿರುವ ಕರ್ನಾಟಕ ಏಕೀಕರಣ ಹೋರಾಟಗಾರರ ವ್ಯಕ್ತಿಚಿತ್ರ ಮಾಲೆಯಡಿ ಶ್ರೀನಿವಾಸ ವಾಡಪ್ಪಿ ರಚಿಸಿರುವ ‘ರಾ. ಹ. ದೇಶಪಾಂಡೆ’ ಕೃತಿಯನ್ನು ಬಿಡುಗಡೆ ಮಾಡಲಾಗುತ್ತದೆ.
ಕರ್ನಾಟಕ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಚಂದ್ರಕಾಂತ ಗುರ್ಪ ಬೆಳ್ಳದ ಅಧ್ಯಕ್ಷತೆ ವಹಿಸಲಿದ್ದು, ಶ್ರೀಮತಿ ಶಕ್ತಿ ಪಾಟೀಲ ಮತ್ತು ತಂಡದವರಿಂದ ಸುಗಮ ಸಂಗೀತ ಕಾರ್ಯಕ್ರಮ ನಡೆಯಲಿದೆ. ಸಾಹಿತಿಗಳು, ಚಿಂತಕರು, ಕಲಾವಿದರು, ವಿದ್ಯಾರ್ಥಿಗಳು, ಸಾರ್ವಜನಿಕರು ಹಾಗೂ ಸಂಘದ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಸಂಘದ ಪ್ರಧಾನ ಕಾರ್ಯದರ್ಶಿ ಪ್ರಕಟಣೆಯಲ್ಲಿ ಕೋರಿದ್ದಾರೆ.