ಕಾರವಾರ ಕಡಲತೀರದಲ್ಲಿ ಕಡಲ್ಕೊರೆತದ ಭೀತಿ : ಒಂದು ಕಿ.ಮೀ. ಉದ್ದಕ್ಕೆ ಅಲ್ಲಲ್ಲಿ ಕೊರೆತ
ಕಾರವಾರ 27: ಕಾರವಾರದ ಬಳಿಯ ಅರಬ್ಬೀ ಸಮುದ್ರ ಕಡಲ ತೀರದಲ್ಲಿ ಅಲೆಗಳ ಅಬ್ಬರ ಜೋರಾಗಿದ್ದು ಒಂದು ಕಿ.ಮೀ.ಉದ್ದಕ್ಕೆ ಅಲ್ಲಲ್ಲಿ ಕಡಲ್ಕೊರೆತ ಉಂಟಾಗಿದೆ. ನಗರದ ಟಾಗೋರ್ ಕಡಲ ತೀರದ ಅಜ್ವಿ ಹೋಟೆಲ್ ಹಿಂದಿನ ಕಡಲತೀರ, ಹನುಮಾನ್ ಪ್ರತಿಮೆ ಸನಿಹದ ಕಡಲು ಹಾಗೂ ದಿವೇಕರ್ ಕಾಲೇಜಿನ ಹಿಂಭಾಗ, ರಾಕ್ ಗಾರ್ಡನ್ ಹಿಂಭಾಗದ ಹತ್ತಿರ ತೀವ್ರ ಕಡಲ ಕೊರೆತ ಕಾಣಿಸಿಕೊಂಡಿದೆ. ಮಳೆಗಾಲದಲ್ಲಿ ಕಡಲ್ಕೊರೆತ ಸಾಮಾನ್ಯವಾಗಿದ್ದು, ಈ ವರ್ಷ ಕಡಲ ಅಬ್ಬರಕ್ಕೆ ಹಲವು ಗಾಳಿ ಮರಗಳು ಹಾಗೂ ನೆರಳು ಗೋಪುರಗಳು ದಂಡೆಗೆ ಉರುಳಿವೆ.
ನಗರದ ಟಾಗೋರ್ ಕಡಲತೀರದಿಂದ ಹಿಡಿದು ಅಳ್ವೇವಾಡದ ದಿವೇಕರ್ ಕಾಲೇಜಿನ ಹಿಂಬದಿಯವರೆಗೂ ಕಡಲ ಕೊರೆತ ಹೆಚ್ಚಾಗಿದ್ದರಿಂದ ವಿಪರೀತ ಮರಳಿನ ಸವಕಳಿ ಉಂಟಾಗಿದೆ. ಇದೇ ಪ್ರದೇಶದಲ್ಲಿರುವ ರಾಕ್ ಗಾರ್ಡನ್ ಹಾಗೂ ಅಜ್ವಿ ಹೊಟೇಲ್ ಹಿಂಭಾಗದಲ್ಲಿ ಸಮುದ್ರದ ಅಬ್ಬರ ಜೋರಾಗಿದ್ದರಿಂದ ಅಲ್ಲಿನ ಕಂಪೌಂಡ್ ಗೋಡೆ ಕುಸಿದು ಹಾನಿಗೊಳಗಾಗಿದೆ. ಕಳೆದ ಎರಡು ಮೂರು ವರ್ಷಗಳಿಂದಲೂ ರಾಕ್ ಗಾರ್ಡ್ ಕಂಪೌಂಡ್ ವರೆಗೆ ಕಡಲ ಕೊರೆತ ಉಂಟಾಗಿದ್ದರಿಂದ ಈ ವರ್ಷ ಮತ್ತಷ್ಟು ಕಲ್ಲಿನ ತಡೆಗೋಡೆ ಹಾಕಲಾಗಿತ್ತು. ಆದರೆ ಈ ವರ್ಷವೂ ಸಮುದ್ರದ ಅಲೆಗಳ ಅಬ್ಬರ ಜೋರಾಗಿದ್ದರಿಂದ ರಾಕ್ ಗಾರ್ಡನ್ ಕಂಪೌಂಡ್ ವರೆಗೆ ಅಲೆಗಳು ಅಬ್ಬರಿಸುತ್ತಿದೆ. ರಾಕ್ ಗಾರ್ಡನ್ಗೆ ಸಮುದ್ರ ಕೊರೆತದಿಂದಾಗಿ ಹಾನಿಯಾಗುವ ಸಂಭವ ಹೆಚ್ಚಾಗಿದೆ.
ಕಾರವಾರ ತಾಲೂಕಿನ ಅಲಿಗದ್ದಾ, ಮಾಜಾಳಿ, ದೇವಬಾಗ, ನಗರದ ಮಕ್ಕಳ ಉದ್ಯಾನವನದ ಬಳಿ, ಚಾಪೆಲ್ ವಾರ್ಶಿಪ್ ಮ್ಯೂಸಿಯಂ ಸೇರಿದಂತೆ ಹಲವೆಡೆ ಕಡಲ ಕೊರೆತ ಆರಂಭಗೊಂಡಿದೆ. ಸಮುದ್ರದಲ್ಲಿ ಅಲೆಗಳ ಅಬ್ಬರಕ್ಕೆ ಮರಳು ಕೊಚ್ಚಿ ಹೋಗಿ ಕಡಲ ಕೊರೆತ ಉಂಟಾಗುತ್ತಿದೆ. ಇಲ್ಲಿನ ಹನುಮಾನ ಮೂರ್ತಿಯಿಂದ ರಾರ್ಕ್ಗಾಡವರೆಗೆ ಕಡಲ ಕೊರತೆ ತಡೆಯಲು ಲೋಕೋಪಯೋಗಿ ಇಲಾಖೆಯಿಂದ ಲಕ್ಷಾಂತ ರೂ ಅನುದಾನದಲ್ಲಿ ತಡೆಗೋಡೆ ನಿರ್ಮಾಣ ಮಾಡಲು ಚಾಲನೆ ನೀಡಲಾಗಿತ್ತು. ಆದರೆ ಸ್ಥಳೀಯ ಸಾಂಪ್ರದಾಯಿಕ ಮೀನುಗಾರರು ಮೀನುಗಾರಿಕೆ ನಡೆಸಲು ಹಾಗೂ ದೋಣಿ ನಿಲುಗಡೆ ಮಾಡಲು ಸಮಸ್ಯೆಯಾಗುತ್ತದೆ ಎಂದು ಪ್ರತಿಭಟನೆ ನಡೆಸಿದ್ದರಿಂದ ತಡೆಗೋಡೆ ನಿರ್ಮಾಣ ಕೈಬಿಡಲಾಗಿತ್ತು.
ರಾಕ್ ಗಾರ್ಡನ್ ಬಳಿ ಹಾಕಲಾಗಿದ್ದ ಕಲ್ಲು ಬಂಡೆಗಳ ಸುತ್ತಲಿನ ಮರಳು ಸಮುದ್ರ ಸೇರಿದೆ. ಅಜ್ವಿ ಹೊಟೇಲ್ ಹಿಂಭಾಗದ ಪ್ರದೇಶದಲ್ಲಿ ದಾಸ್ತಾನಿಟ್ಟಿರುವ ಪುಟಾಣಿ ರೈಲ್ವೆಗಳ ಹಳಿಗಳ ಅಡಿ ಮರಳು ಅಲೆಯ ರಭಸಕ್ಕೆ ಕೊಚ್ಚಿ ಹೋಗಿದೆ.
ಪರಿಣಾಮ ಹಳಿಗಳು ಸಮುದ್ರ ಸೇರುವ ಸಾಧ್ಯತೆಗಳಿವೆ. ಸಮುದ್ರದಂಡೆಯಲ್ಲಿ ಸಾರ್ವಜನಿಕರು ಕುಳಿತುಕೊಳ್ಳಲು ಹಾಕಲಾಗಿದ್ದು ಪರಗೋಲಾ ಸಮುದ್ರದ ಆರ್ಭಟಕ್ಕೆ ನೆಲಕ್ಕೆ ಉರುಳಿವೆ.
ಗಾಳಿ ಮರಗಳು ನೆಲಕ್ಕೆ :
ಕೋಡಿಭಾಗ ಅಳ್ವೇವಾಡದ ದಿವೇಕರ್ ಕಾಲೇಜು ಹಾಗೂ ಸಾಗರ ದರ್ಶನ ಹಾಲ್ ಹಿಂಭಾಗದಲ್ಲಿ ಸಮುದ್ರದ ಅಲೆ ಭಾರೀ ಅಲೆಗಳು ಸೃಷ್ಟಿಯಾಗಿದ್ದರಿಂದ ಸಮುದ್ರ ತೀರದಲ್ಲಿ ಮರಳು ಸವಕಳಿ ಹೆಚ್ಚಿನ ಪ್ರಮಾಣದಲ್ಲಿ ಆಗಿದೆ. ಈ ಪ್ರದೇಶದಲ್ಲಿ ಭಾರೀ ಗಾತ್ರದ ಅಲೆಗಳು ಸೃಷ್ಟಿಯಾಗುತ್ತಿದ್ದರಿಂದ ಕೆಲವು ಮರಗಳು ಬುಡಸಮೇತವಾಗಿ ಉರುಳಿ ಬಿದ್ದಿವೆ. ಇನ್ನಷ್ಟು ಮರಗಳ ಬೇರು ಮೇಲೆದ್ದಿದ್ದು ಉರುಳುವ ಹಂತಕ್ಕೆ ತಲುಪಿದೆ. ಕಡಲ ಕೊರೆತ ತಪ್ಪಿಸಲು ಕೆಲವು ಕಡೆಗಳಲ್ಲಿ ಹಾಕಲಾಗಿದ್ದ ಕಲ್ಲು ಬಂಡೆಗಳು ಮೇಲೆದ್ದಿದ್ದು ಸುತ್ತಮುತ್ತಲಿನ ಮರಳು ಸಮುದ್ರಪಾಲಾಗಿದೆ.
ಸವಕಳಿ ತಡೆಯುವ ಬಂಗುಡೆ ಬಳ್ಳಿ:
ಕಡಲತೀರದ ಬಳಿ ಹೇರಳವಾಗಿ ಬೆಳೆಯುವ ಬಂಗುಡೆ ಬಳ್ಳಿಯಿಂದಾಗಿ ಸಮುದ್ರ ಕೊರೆತ ತಡೆಯಲು ಸಾಧ್ಯವಾಗುತ್ತದೆ. ಆದರೆ ಕಾರವಾರದ ಕೆಲವೆಡೆ ಕಡಲತೀರಗಳಲ್ಲಿ ಈ ಬಂಗುಡೆ ಬಳ್ಳಿಯು ವ್ಯಾಪಕ ಪ್ರಮಾಣದಲ್ಲಿ ಇಲ್ಲದಿರುವ ಕಾರಣ ಕಡಲಕೊರೆತ ತೀವ್ರವಾಗುತ್ತಿದೆ ಎಂಬುದು ಪರಿಸರ ಪ್ರೇಮಿಗಳ ಮಾತಾಗಿದೆ. ಇದಕ್ಕೆ ಸಾಕ್ಷಿ ಎಂಬಂತೆ ಈ ಬಂಗುಡೆ ಬಳ್ಳಿ ಇರವು ಪ್ರದೇಶದಲ್ಲಿ ಅದರ ಬೇರುಗಳು ಮರಳಿನ ಆಳದಲ್ಲಿ ಹುಗಿಸಿರುವದರಿಂದ ಅಲೆಗಳ ರಭಸ ಎಷ್ಟೇ ಇದ್ದರೂ ಹೆಚ್ಚಿನ ಸವಕಳಿ ಆಗದೇ ಇರುವುದು ಕೆಲವೆಡೆ ಕಂಡು ಬಂದಿದೆ. ಈ ಬಳ್ಳಿ ರಕ್ಷಣೆ ಹಾಗೂ ಇದನ್ನು ಇನ್ನಷ್ಟು ಬೆಳೆಸುವ ಮೂಲಕ ಕಡಲ ಕೊರೆತವನ್ನು ತಡೆಗಟ್ಟಬಹುದು ಎಂದು ಕಡಲ ವಿಜ್ಞಾನಿಗಳಾದ ಡಾ. ಶಿವಕುಮಾರ್ ಹರಗಿ ಅಭಿಪ್ರಾಯಪಡುತ್ತಾರೆ.