ಗಡಿ ವಿಚಾರದಲ್ಲಿ ರಾಜ್ಯ ಸರ್ಕಾರ ಸಕ್ರಿಯವಾಗಲಿ: ಕನ್ನಡ ಸಂಘಟನೆಗಳ ಆಗ್ರಹ
ಲೋಕದರ್ಶನ ವರದಿ
ಬೆಳಗಾವಿ 1: ಗಡಿ ವಿವಾದಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಕಾನೂನು ಹಾಗೂ ಆಡಳಿತಾತ್ಮಕ ಕ್ರಮಗಳನ್ನು ತ್ವರಿತವಾಗಿ ಕೈಗೊಳ್ಳಬೇಕು ಮತ್ತು ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಕರ್ನಾಟಕ ಪರ ನಿರ್ಣಯ ಅಂಗೀಕಾರದ ವಿಳಂಬವನ್ನು ಕೂಡಲೇ ನಿವಾರಿಸಬೇಕು ಎಂದು ವಿವಿಧ ಕನ್ನಡಪರ ಸಂಘಟನೆಗಳು ಆಗ್ರಹಿಸಿವೆ. ರಾಣಿ ಕಿತ್ತೂರು ಚನ್ನಮ್ಮ ವೃತ್ತದ ಕನ್ನಡ ಸಾಹಿತ್ಯ ಭವನದಲ್ಲಿ ಬುಧವಾರ ನಡೆದ ಸಮಾನ ಮನಸ್ಕ ಕನ್ನಡ ಸಂಘಟನೆಗಳ ಸಭೆಯಲ್ಲಿ ಈ ಕುರಿತು ಚರ್ಚಿಸಿ ಆರು ಪ್ರಮುಖ ನಿರ್ಣಯಗಳನ್ನು ಸರ್ವಾನುಮತದಿಂದ ಅಂಗೀಕರಿಸಲಾಯಿತು. ಸಭೆಯ ಅಧ್ಯಕ್ಷತೆಯನ್ನು ಕಿತ್ತೂರು ಕರ್ನಾಟಕ ಸೇನೆಯ ರಾಜ್ಯಾಧ್ಯಕ್ಷ ಮಹಾದೇವ ತಳವಾರ ವಹಿಸಿದ್ದರು.
2004ರಲ್ಲಿ ಮಹಾರಾಷ್ಟ್ರ ಸರ್ಕಾರ ಸುಪ್ರೀಂ ಕೋರ್ಟ್ನಲ್ಲಿ ಸಲ್ಲಿಸಿರುವ ಗಡಿ ವಿವಾದ ಅರ್ಜಿಯನ್ನು ಆರಂಭಿಕ ಹಂತದಲ್ಲಿಯೇ ವಜಾಗೊಳಿಸುವಂತೆ ರಾಜ್ಯ ಸರ್ಕಾರ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸಭೆ ಒತ್ತಾಯಿಸಿತು. ಜೊತೆಗೆ, ಬೆಳಗಾವಿ ಗಡಿ ಸಂರಕ್ಷಣಾ ಆಯೋಗವನ್ನು ಬೆಂಗಳೂರಿನಿಂದ ಬೆಳಗಾವಿಗೆ ಸ್ಥಳಾಂತರಿಸಿ, ನಿವೃತ್ತ ನ್ಯಾಯಮೂರ್ತಿಯನ್ನು ಅಧ್ಯಕ್ಷರನ್ನಾಗಿ ನೇಮಿಸುವಂತೆ ಆಗ್ರಹಿಸಲಾಯಿತು. ಮಹಾರಾಷ್ಟ್ರ ಮಾದರಿಯಲ್ಲಿ ಕರ್ನಾಟಕದಲ್ಲಿಯೂ ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಗಡಿ ಸಮಿತಿ ರಚಿಸಿ, ಗಡಿ ವಿಚಾರಕ್ಕೆ ಪ್ರತ್ಯೇಕ ಉಸ್ತುವಾರಿ ಸಚಿವರನ್ನು ನೇಮಿಸಬೇಕು ಎಂದು ಸಭೆ ಒತ್ತಾಯಿಸಿತು. ಬೆಳಗಾವಿ ಹಾಗೂ ಚಿಕ್ಕೋಡಿ ಲೋಕಸಭಾ ಕ್ಷೇತ್ರಗಳ ಜನಪ್ರತಿನಿಧಿಗಳನ್ನೊಳಗೊಂಡ ಸಮನ್ವಯ ಸಮಿತಿ ರಚಿಸುವಂತೆ ಸಹ ಆಗ್ರಹಿಸಲಾಯಿತು.
ಗಡಿ ವಿವಾದ ಕುರಿತು ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಉನ್ನತ ಮಟ್ಟದ ಸಭೆ ನಡೆಸಿ ರಾಜ್ಯದ ನಿಲುವನ್ನು ಸ್ಪಷ್ಟವಾಗಿ ಪ್ರತಿಪಾದಿಸಬೇಕು ಎಂದು ಸಭೆ ತಿಳಿಸಿತು. ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಕರ್ನಾಟಕ ಪರ ನಿರ್ಣಯ ಅಂಗೀಕಾರ ವಿಳಂಬವಾಗುತ್ತಿರುವುದನ್ನು ಸಭೆ ತೀವ್ರವಾಗಿ ಖಂಡಿಸಿತು. ಈ ಕುರಿತು ಜಿಲ್ಲಾ ಉಸ್ತುವಾರಿ ಸಚಿವರು ತಕ್ಷಣ ಮಧ್ಯಪ್ರವೇಶಿಸಿ ಸಮಸ್ಯೆ ಬಗೆಹರಿಸಬೇಕು ಎಂದು ಒತ್ತಾಯಿಸಲಾಯಿತು. ವಿಳಂಬ ಮುಂದುವರಿದರೆ ಪಾಲಿಕೆ ಎದುರು ಪ್ರತಿಭಟನೆ ಹಾಗೂ ಸತ್ಯಾಗ್ರಹ ಹಮ್ಮಿಕೊಳ್ಳುವುದಾಗಿ ಎಚ್ಚರಿಕೆ ನೀಡಲಾಯಿತು.