ಕನ್ನಡ ಭಾಷಾ ಬೋಧಕರು ಅಧ್ಯಯನಶೀಲರಾಗಲಿ: ಪ್ರೋ. ಮರಿಗುದ್ದಿ
ಗೋಕಾಕ 02: ಕನ್ನಡ ಭಾಷೆಯು ಅತ್ಯಂತ ಪ್ರಾಚೀನ ಮತ್ತು ಶ್ರೀಮಂತ ಭಾಷೆಯಾಗಿದೆ. ಅದರಲ್ಲೂ ಹಳೆಗನ್ನಡ ಭಾಷೆಯು ಸಮೃದ್ಧತೆಯಿಂದ ಕೂಡಿದೆ ಎಂದು ಪ್ರೋ. ಗುರುಪಾದ ಮರಿಗುದ್ದಿಯವರು ಅಭಿಪ್ರಾಯಪಟ್ಟರು.
ಅವರು ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಕನ್ನಡ ಭಾಷಾ ಬೋಧಕರ ಕಾರ್ಯಾಗಾರವನ್ನು ಉದ್ದೇಶಿಸಿ ಮಾತನಾಡಿದರು.
ಭಾಷಾ ಬೋಧಕರು ಹಳೆಗನ್ನಡ ಭಾಷೆಯನ್ನು ಅಧ್ಯಯನ ಮಾಡಿ ಅದರ ಸಾರವನ್ನು ಮಕ್ಕಳಿಗೆ ಉಣಬಡಿಸಬೇಕು ಎಂದು ಕರೆ ನೀಡಿದರು.
ಡಾ. ಯಶವಂತ ಕೊಕ್ಕನವರ ಮಾತನಾಡುತ್ತಾ ಪದ್ಯ ಬೋಧನೆಯಲ್ಲಿ ಬರುವ ಸವಾಲುಗಳ ಕುರಿತಾಗಿ ಮಾತನಾಡಿ ಪದ್ಯಗಳ ರಸಾನುಭವವನ್ನು ಉಣಬಡಿಸಿದರು. ಮಾತ್ರವಲ್ಲದೇ ಹಳೆಗನ್ನಡ, ಹೊಸಗನ್ನಡ, ಜಾನಪದ ಮತ್ತು ವಚನಗಳನ್ನು ಹಾಡುವುದರೊಂದಿಗೆ ಪ್ರಭಾವಿ ಬೋಧನೆಯ ಅರಿವು ಮೂಡಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಜಿ. ಬಿ. ಬಳಿಗಾರ ಮಾತನಾಡುತ್ತಾ ಕನ್ನಡ ನಾಡು, ನುಡಿ ಕಟ್ಟುವಲ್ಲಿ ಮತ್ತು ಮಕ್ಕಳಲ್ಲಿ ಸೃಜನ ಶೀಲತೆ ಬೆಳೆಸುವಲ್ಲಿ ಕನ್ನಡ ಭಾಷಾ ಬೋಧಕರ ಪಾತ್ರ ಮಹತ್ವಪೂರ್ಣವಾಗಿದೆ ಎಂದರು. ಜಿಲ್ಲಾ ನೋಡಲ್ ಅಧಿಕಾರಿ ಅರಿಹಂತ ಬಿರಾದಾರಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿ ಕಾರ್ಯಾಗಾರದ ಓಚಿತ್ಯತೆಯನ್ನು ವಿವರಿಸಿದರು.
ಶಿಕ್ಷಣಾಧಿಕಾರಿ ರಾಜೇಂದ್ರ ತೇರದಾಳ ವೇದಿಕೆಯ ಜಿಲ್ಲಾಧ್ಯಕ್ಷ ಶಿವಾನಂದ ಗುಂಡಾಳಿ, ತಾಲೂಕಾಧ್ಯಕ್ಷ ಟಿ. ಬಿ. ಬಿಲ್ಲ್, ಗ್ರಾ.ಪಂ ಸದಸ್ಯ ಸುರೇಶ ಸನದಿ ಸೇರಿದಂತೆ ಹಲವರು ಉಪಸ್ಥಿತರಿದ್ದರು. ನಿವೃತ್ತ ಶಿಕ್ಷಕರು ಹಾಗೂ ಸಾಧಕರ ಸತ್ಕಾರ ನೆರವೇರಿತು. ಶಿಕ್ಷಕ ಎಮ್.ಬಿ.ಹಾದಿಮನಿ ಮತ್ತು ಮಾಳಿ ನಿರೂಪಿಸಿದರು. ಎಮ್.ಆಯ್.ಮುಕಾರ್ತಿಹಾಳ ಸ್ವಾಗತಿಸಿ ವಂದಿಸಿದರು.