ಕಂದಾಯ ಇಲಾಖೆ ನಡೆ-ಹಳ್ಳಿಯ ಕಡೆ
ಬ್ಯಾಡಗಿ 19: ರಾಜ್ಯ ಸರ್ಕಾರದ ಆದೇಶದನ್ವಯ ಕಂದಾಯ ಇಲಾಖೆ ನೇತೃತ್ವದಲ್ಲಿ ತಾಲೂಕಿನ ಬಿಸಲಹಳ್ಳಿ ಗ್ರಾಮದ ಹೊಳೆ ಬಸವೇಶ್ವರ ಕಲ್ಯಾಣಮಂಟಪದಲ್ಲಿ ಫೆ.20 ರಂದು ಶನಿವಾರ ‘ನಡೆ-ಹಳ್ಳಿಯ ಕಡೆ’ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದು, ಪಹಣಿಯಲ್ಲಿನ ಲೋಪದೋಷ ತಿದ್ದುಪಡಿ ಸೇರಿದಂತೆ ಸಾಮಾಜಿಕ ಭದ್ರತಾ ಯೋಜನೆಯಡಿ ಪಿಂಚಣಿದಾರರ ಸಮಸ್ಯೆ, ಅತೀವೃಷ್ಟಿ ಹಾನಿ-ಬೆಳೆಹಾನಿ ಪರಿಹಾರ, ಅಂತ್ಯ ಸಂಸ್ಕಾರ ಯೋಜನೆ, ಪಡಿತರ ಚೀಟಿ, ಆಧಾರ ಕಾರ್ಡ ಸಮಸ್ಯೆ, ಮತದಾರರ ಪಟ್ಟಿಯಲ್ಲಿ ಹೆಸರು ನೋಂದಣಿ, ರೈತ ಆತ್ಮಹತ್ಯೆ, ಅಗ್ನಿ ದುರಂತ ಹಾನಿ ಪ್ರಕರಣ, ಹಾವು ಕಡಿತ ಪ್ರಕರಣ, ಹೊಲಗಳಿಗೆ ದಾರಿ ಹಾಗೂ ಸರಕಾರಿ ಜಮೀನು ಒತ್ತುವರಿ ಸೇರಿದಂತೆ ವಿವಿಧ ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರ ಕಂಡುಕೊಳ್ಳಲು ಅವಕಾಶವಿದೆ.
ಕಾರಣ ಬಿಸಲಹಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಗ್ರಾಮಗಳು ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರು ಬೆಳಿಗ್ಗೆ 9.30ಕ್ಕೆ ಹಾಜರಿದ್ದು ಅಹವಾಲು ಹಾಗೂ ಸಮಸ್ಯೆಗೆ ಸಂಬಂಧಿಸಿದ ಲಿಖಿತ ಅರ್ಜಿಗಳನ್ನು ಸಲ್ಲಿಸುವಂತೆ ತಹಶೀಲ್ದಾರ ರವಿಕುಮಾರ ಕೊರವರ ಪ್ರಕಟಣೆಯಲ್ಲಿ ಮನವಿ ತಿಳಿಸಿದ್ದಾರೆ.