ಅಂತರರಾಜ್ಯ ಕಳ್ಳರನ್ನು ಬಂಧಿಸುವಲ್ಲಿ ಕಾಗವಾಡ ಪೊಲೀಸರು ಯಶಸ್ವಿ: ರೂ. 7.95 ಲಕ್ಷ ಮೌಲ್ಯದ ಚಿನ್ನಾಭರಣ ವಶ
ಕಾಗವಾಡ 22: ಕಾಗವಾಡ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಚಿನ್ನಾಭರಣ ಕಳವು ಪ್ರಕರಣವನ್ನು ಭೇದಿಸಿರುವ ಪೊಲೀಸರು ಆರು ಮಂದಿ ಅಂತರರಾಜ್ಯ ಕಳ್ಳರನ್ನು ಬಂಧಿಸಿ, ರೂ.7.95 ಲಕ್ಷ ಮೌಲ್ಯದ 53 ಗ್ರಾಂ ಚಿನ್ನಾಭರಣವನ್ನು ವಶಪಡಿಸಿಕೊಂಡಿದ್ದಾರೆ.
ಮೇ 11, 2026ರಂದು ವೈಶಾಲಿ ಮಲ್ಲಯ್ಯ ದೊಡ್ಡಮನಿ ಅವರು ಕಾಗವಾಡ ಬಸ್ ನಿಲ್ದಾಣದಿಂದ ಜುಗುಳಕ್ಕೆ ತೆರಳುವ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ, ಅಪರಿಚಿತರು ಅವರ 30 ಗ್ರಾಂ ತೂಕದ ತಾಳಿಸರ, 12 ಗ್ರಾಂ ತೂಕದ ನೆಕ್ಲೆಸ್, 11 ಗ್ರಾಂ ತೂಕದ ಮತ್ತೊಂದು ಚಿನ್ನದ ತಾಳಿಸರ, 1 ಗ್ರಾಂ ತೂಕದ ಉಂಗುರ ಹಾಗೂ ರೂ.15,000 ನಗದು ಸೇರಿ ಒಟ್ಟು ರೂ. 4.68 ಲಕ್ಷ ಮೌಲ್ಯದ ವಸ್ತುಗಳನ್ನು ಕಳವು ಮಾಡಿದ್ದರು. ಈ ಕುರಿತು ಕಾಗವಾಡ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 135/2026, ಕಲಂ 303(2) ಬಿಎನ್‌ಎಸ್-2023ರಡಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ತನಿಖೆ ಕೈಗೊಂಡ ಪೊಲೀಸ್ ತಂಡವು ಉತ್ತರ ಪ್ರದೇಶ ಮೂಲದ ಆರೋಪಿಗಳಾದ ಮೊಹಮ್ಮದ್ ಇಸ್ಲಾಂ, ಜಫರಯಾಬ್, ಮೊಹಮ್ಮದ್ ಅಕೀಲ್, ರಾಜಪಾಲ್, ದೌಜಿ ಹಾಗೂ ಕೈರಾತ್ ಎಂಬವರನ್ನು ಬಂಧಿಸಿದೆ. ಇವರು ಉತ್ತರ ಪ್ರದೇಶ ಮೂಲದವರಾಗಿದ್ದು, ವಿವಿಧ ರಾಜ್ಯಗಳಲ್ಲಿ ಕಳ್ಳತನ ನಡೆಸುತ್ತಿದ್ದ ಅಂತರರಾಜ್ಯ ಕಳ್ಳರ ತಂಡದ ಸದಸ್ಯರೆಂದು ತಿಳಿದುಬಂದಿದೆ.
ಬಂಧಿತರಿಂದ ರೂ. 7.95 ಲಕ್ಷ ಮೌಲ್ಯದ 53 ಗ್ರಾಂ ಚಿನ್ನಾಭರಣವನ್ನು ವಶಪಡಿಸಿಕೊಂಡು ಬಳಿಕ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಈ ಕಾರ್ಯಾಚರಣೆಯನ್ನು ಜಿಲ್ಲಾ ಪೊಲೀಸ್ ಅಧೀಕ್ಷಕರ ಮಾರ್ಗದರ್ಶನದಲ್ಲಿ ಡಿಎಸ್ಪಿ ಪ್ರಶಾಂತ ಮುನ್ನೋಳಿ, ಸಿಪಿಐ ಸಂತೋಷ ಹಳ್ಳೂರ ಹಾಗೂ ಪಿಎಸ್‌ಐ ರಾಘವೇಂದ್ರ ಖೋತ ಅವರ ನೇತೃತ್ವದಲ್ಲಿ ವಿಶೇಷ ಪೊಲೀಸ್ ತಂಡ ಯಶಸ್ವಿಯಾಗಿ ನಡೆಸಿತು. ಪ್ರಕರಣ ಭೇದಿಸಿದ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯ ಕಾರ್ಯವನ್ನು ಜಿಲ್ಲಾ ಪೊಲೀಸ್ ಅಧೀಕ್ಷಕರು ಪ್ರಶಂಸಿಸಿದ್ದಾರೆ.