ಕನ್ನಡ ಕಲಾವಿದರ ಸಂಘಕ್ಕೆ ಕಡತಿ, ಭದ್ರಶೆಟ್ಟಿ ನೇಮಕ
ಶಿಗ್ಗಾವಿ 16 : ಉತ್ತರ ಕರ್ನಾಟಕ ಕನ್ನಡ ಕಲಾವಿದರ ಸಂಘದ ರಾಜ್ಯ ಕಾರ್ಯದರ್ಶಿಯಾಗಿ ಕಲಾವಿದ ವಸಂತಕುಮಾರ ಕಡತಿ ಹಾಗೂ ಯುವ ಘಟಕದ ಅಧ್ಯಕ್ಷರಾಗಿ ಚನ್ನಬಸಪ್ಪ ಭದ್ರಶೆಟ್ಟಿ ಅವರನ್ನು ರಾಜ್ಯಾಧ್ಯಕ್ಷರಾದ ಬಸವರಾಜ ಕುರಗೋಡಿ ನೇಮಿಸಿ ಆದೇಶಿಸಿದ್ದಾರೆ.
ಪಟ್ಟಣದ ರೈತ ದ್ವನಿ ಕಾರ್ಯಾಲಯದಲ್ಲಿ ರಾಜ್ಯಾಧ್ಯಕ್ಷ ಬಸವರಾಜ ಕುರಗೋಡಿ ಮಾತನಾಡಿ ರಾಜ್ಯದ ಕಲಾವಿದರ ಕ್ಷೇಮಾಭಿವೃದ್ದಿಗೆ ಹಾಗೂ ಕಲಾವಿದರ ಸಮಸ್ಯೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸುವ ಉದ್ದೇಶದಿಂದ ಸಂಘವನ್ನು ಹುಟ್ಟು ಹಾಕಿದ್ದು ಮುಂದಿನ ದಿನಗಳಲ್ಲಿ ಸಕ್ರೀಯವಾಗಿ ಪದಾಧಿಕಾರಿಗಳು ಕಾರ್ಯಪ್ರವೃತ್ತರಾಗಲು ನೇಮಕ ಮಾಡಲಾಗಿದೆ ಎಂದು ಹೇಳಿದರು.
ರಾಜ್ಯ ಉಪಾಧ್ಯಕ್ಷ ವಿಠಲ್ ಭಜಂತ್ರಿ ಮಾತನಾಡಿ ಕೋರೋನಾ ಸಂದರ್ಭದಲ್ಲಿ ಕಲಾವಿದರಿಗೆ ಸಿಗಬೇಕಾದ ನ್ಯಾಯಯುತ ಬೇಡಿಕೆಗಳು ಸಿಗಲಿಲ್ಲ ಆದ್ದರಿಂದ ಉತ್ತರ ಕರ್ನಾಟಕದ ಕಲಾವಿದರ ಕಾರ್ಯಾಗಾರವನ್ನು ಬರುವ ದಿನಗಳಲ್ಲಿ ಮಾಡಿ ಸರಕಾರಕ್ಕೆ ಸಮಸ್ಯೆಗಳ ತೀವ್ರತೆಯನ್ನು ಮನವಿಯ ಮುಖಾಂತರ ಸಲ್ಲಿಸುತ್ತೇವೆ ಎಂದರು.
ನೂತನ ಆಯ್ಕೆಯಾದ ಕಾರ್ಯದರ್ಶಿ ವಸಂತಕುಮಾರ ಕಡತಿ ಮಾತನಾಡಿ ನಮಗೆ ನೀಡಿದ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ಮಾಡುತ್ತೇವೆ ಹಾಗೂ ಕಲಾವಿದರ ಶ್ರೇಯೋಭಿವೃದ್ಧಿಗೆ ವಿಭಿನ್ನ ನಿಲುವುಗಳನ್ನು ರೂಪಿಸುತ್ತೇವೆ ಎಂದರು.
ಮಂಜುನಾಥಗೌಡ ಪಾಟೀಲ, ನಂದೀಶ ಕುರಗೋಡಿ, ಸಂತೋಷ ಗೋಟಗೋಡಿ, ಸೇರಿದಂತೆ ಇತರ ಕಲಾವಿದರು ಉಪಸ್ಥಿತರಿದ್ದರು.