ಪತ್ರಕರ್ತರ ವರದಿಗಳು ಕಾನೂನು ವ್ಯಾಪ್ತಿಯಲ್ಲಿಯೇ ಇರಲಿ: ನ್ಯಾ. ಚವ್ಹಾಣ
ಲೋಕದರ್ಶನ ವರದಿ
ಚಿಕ್ಕೋಡಿ 07: ಪತ್ರಕರ್ತರು ಸಮಾಜ ಒಪ್ಪುವಂತಹ ಸುದ್ದಿಗಳನ್ನು ಮಾಡಬೇಕು. ಕಾನೂನು ವ್ಯಾಪ್ತಿಯಲ್ಲಿಯೇ ವರದಿಗಳು ಇರಬೇಕು. ಪತ್ರಿಕಾ ರಂಗ ಸಮಾಜಕ್ಕೆ ಬಹಳ ಮುಖ್ಯವಾದ ಕ್ಷೇತ್ರವಾಗಿದೆ ಎಂದು 7ನೇ ಹೆಚ್ಚುವರಿ ಚಿಕ್ಕೋಡಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎಸ್ ಎಲ್ ಚವ್ಹಾಣ ಹೇಳಿದರು.
ಇಲ್ಲಿನ ಡಯಟ್ ಸಭಾ ಭವನದಲ್ಲಿ ಚಿಕ್ಕೋಡಿ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಚಿಕ್ಕೋಡಿ ಪ್ರೆಸ್ ಕ್ಲಬ್ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮವನ್ನು ಸಸಿಗೆ ನೀರು ಎರೆಯುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಸುದ್ದಿಯ ಸತ್ಯಾಸತ್ಯತೆಯನ್ನು ಅರಿತು ಪತ್ರಕರ್ತರು ವರದಿ ಮಾಡಬೇಕು. ಹಾಗೇನೇ ಸುದ್ದಿ ಮನೆಯಲ್ಲಿ ಸುದ್ದಿಯ ಸತ್ಯಾಸತ್ಯತೆಯನ್ನು ಪರಿಶೀಲಿಸಿ ಪ್ರಕಟಿಸಬೇಕು. ಪತ್ರಕರ್ತರು ಶಬ್ದ ಸಂಗ್ರಹ ಹಾಗೂ ನಿಖರವಾಗಿರುವ ಮಾಹಿತಿಯನ್ನು ಹೊಂದಿರಬೇಕು. ಹಣದ ಆಮಿಷಕ್ಕೆ ಪತ್ರಕರ್ತರು ಒಳಗಾಗದೇ ಪಾರದರ್ಶಕ ಸುದ್ದಿಯನ್ನು ಮಾಡಬೇಕೆಂದು ಹೇಳಿದರು.
ಚಿಕ್ಕೋಡಿ ಉಪ ವಿಭಾಗಾಧಿಕಾರಿ ಮಾಧವ ಗಿತ್ತೆ ಮಾತನಾಡಿ, ಪತ್ರಿಕಾರಂಗದ ಇತಿಹಾಸ ನೋಡಿದರೆ ಈ ಕ್ಷೇತ್ರದಲ್ಲಿ ಸಾಕಷ್ಟು ಕ್ರಾಂತಿಯಾಗಿದೆ. ವರದಿಗಾರಿಕೆಯೊಂದಿಗೆ ಪತ್ರಕರ್ತರು ಸದ್ದಿಲ್ಲದೇ ಸಮಾಜ ಸೇವೆಯನ್ನು ಮಾಡುವ ಮೂಲಕ ಸಾಕಷ್ಟು ಒಳ್ಳೆಯ ಕೆಲಸ ಮಾಡಿದ ಪತ್ರಕರ್ತರಿದ್ದು, ಅವರ ಕಾರ್ಯ ಶ್ಲಾಘಿನೀಯ. ಹಾಗಾಗಿ ಚಿಕ್ಕೋಡಿ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘಕ್ಕೊಂದು ತಾತ್ಕಾಲಿಕವಾಗಿ ಕಚೇರಿ ವ್ಯವಸ್ಥೆ ಕಲ್ಪಿಸಿಕೊಡಲಾಗುವುದು. ನಂತರದಲ್ಲಿ ಕಚೇರಿಗೊಂದು ನಿವೇಶನ ಹಾಗೂ ಕಟ್ಟಡ ನಿರ್ಮಾಣ ಮಾಡಿಕೊಡುವ ಭರವಸೆಯನ್ನು ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಚಿಕ್ಕೋಡಿಯ ಡಯಟ್ ಪ್ರಾಚಾರ್ಯ ಮೋಹನ ಜೀರಗಿಹಾಳ ಮಾತನಾಡಿ, ಈ ಹಿಂದೆ ಪತ್ರಕರ್ತರೂ ಜಾಣರಿದ್ದರು, ಓದುಗರು ಜಾಣರಿದ್ದರು. ಆದರೆ ಇದೀಗ ಅಂತವರ ಸಂಖ್ಯೆ ಶೇ 80 ರಷ್ಟು ಮಾತ್ರ ಇದೆ. ಪತ್ರಿಕೆಗೆ ಸಂಪಾದಕೀಯ ಬಹಳ ಮುಖ್ಯವಾಗಿರುತ್ತದೆ. ಇಡೀ ಪತ್ರಿಕೆಯು ಒಂದು ವಿಶ್ವ ಕೋಶ ಇದ್ದಂತೆ. ಹಾಗಾಗಿ ಪತ್ರಿಕೆಗಳನ್ನು ಉಳಿಸಿ ಬೆಳೆಸುವ ಹೊಣೆಗಾರಿಕೆ ನಮ್ಮೆಲ್ಲರದ್ದಾಗಿದೆ ಎಂದರು.
ಪ್ರಾರಂಭದಲ್ಲಿ ಚಿಕ್ಕೋಡಿ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರಾಜೇಂದ್ರ ಕೋಳಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಪತ್ರಕರ್ತರಿಗೆ ನಿವೇಶನ, ವಿಮೆ ಸೇರಿದಂತೆ ವಿವಿಧ ಸೌಲಭ್ಯ ಮಾಡಿಕೊಡುವ ವ್ಯವಸ್ಥೆ ಸರ್ಕಾರ ಮಾಡಬೇಕಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಚಿಕ್ಕೋಡಿ ಡಿವೈಎಸ್ಪಿ ಬಸವರಾಜ ಯಲಿಗಾರ, ಚಿಕ್ಕೋಡಿ ತಹಶೀಲ್ದಾರ ಚಿದಂಬರ ಕುಲಕರ್ಣಿ, ಬಿ ಕೆ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಸದಾಶಿವ ಹಾದಿಮನಿ, ಹಿರಿಯ ಪತ್ರಕರ್ತ ಸುಭಾಷ ದಲಾಲ, ಮಹಾದೇವ ಪೂಜೇರಿ, ಸಂಜೀವ ಕಾಂಬಳೆ, ಸಂತೋಷ ಕಾಮತ,ಕಾಶಿನಾಥ ಸುಳಕೂಡೆ, ಇಂಗಳಿ ರಾಜು ಕೋಳಿ, ಎಂ.ಬಿ.ಚಿಂಚಣಿ, ಲೋಹಿತ ಶಿರೋಳ, ಲಾಲಸಾಬ ತಟಗಾರ, ಅನಿಲ ದಲಾಲ, ಡಿ.ಕೆ.ಉಪ್ಪಾರ, ತ್ಯಾಗರಾಜ ಕದಮ, ಮಹಾಂತೇಶ ಮಠಪತಿ, ಮುಸ್ತಾಕ ಪಿರಜಾದೆ, ಸುದೀರ ಕುಂಭೋಜಕರ ಮುಂತಾದವರು ಉಪಸ್ಥಿತರಿದ್ದರು.
ಚಿಕ್ಕೋಡಿ ಪ್ರೆಸ್ ಕ್ಲಬ್ ಅಧ್ಯಕ್ಷ ರಾಜು ಸಂಕೇಶ್ವರೆ ಸ್ವಾಗತಿಸಿದರು. ವಿರುಪಾಕ್ಷಿ ಕವಟಗಿ ವಂದಿಸಿದರು. ಚಂದ್ರಶೇಖರ ಚಿನಕೇಕರ ನಿರೂಪಿಸಿದರು.