ದ್ರಾಕ್ಷಿ, ಕಬ್ಬು ಬೆಳೆಗಳಲ್ಲಿ ಎರೆಹುಳು ಕೃಷಿಯನ್ನು ಮಾಡಬೇಕೆಂದು ಸಲಹೆ
ಜಮಖಂಡಿ 22: ರೈತರು ತಮ್ಮ ಹೊಲ, ಗದ್ದೆಗಳಲ್ಲಿ ರೆಂಟೆ, ಕುಂಟೆಗಳನ್ನು ಬಳಕೆ ಮಾಡುವದರಿಂದ ಕೂಲಿ ಕೆಲಸಗಾರ ಖರ್ಚು ಕಡಿಮೆ ಆಗುತ್ತದೆ. ದ್ರಾಕ್ಷಿ, ಕಬ್ಬು ಬೆಳೆಗಳಲ್ಲಿ ಎರೆಹುಳು ಕೃಷಿಯನ್ನು ಮಾಡಬೇಕೆಂದು ಧಾರವಾಡ ಕೃಷಿ ವಿಶ್ವವಿದ್ಯಾಲಯದ ಸಂಶೋಧನಾ ನಿರ್ದೇಶಕ ಡಾ. ಬಿ. ಖ. ಬಿರಾದಾರ ಸಲಹೆ ನೀಡಿದರು.
ತಾಲೂಕಿನ ಚಿಕ್ಕಲಕಿ ಗ್ರಾಮದ ಪ್ರಗತಿಪರ ರೈತ ಪಾಂಡು ಕೆರಬಾ ಅವರ ತೋಟಕ್ಕೆ ಧಾರವಾಡ ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ. ಪಿ.ಎಲ್.ಪಾಟೀಲ ಅವರ ನೇತೃತ್ವದಲ್ಲಿ ಕೃಷಿ, ತೋಟಗಾರಿಕೆ, ಅರಣ್ಯ, ಪಶುಸಂಗೋಪನೆ ಸೇರಿದಂತೆ ಸಮಗ್ರ ಕೃಷಿ ಪದ್ದತಿಯಲ್ಲಿ ಅಳವಡಿಸಿದ ತಾಂತ್ರಿಕತೆಗಳ ವೀಕ್ಷಣೆ ಮಾಡಿ ಮಾತನಾಡಿದರು.
ಪಾಂಡು ಮಾಡಿಕ ಅವರ 46 ಎಕರೆ ಕ್ಷೇತ್ರದಲ್ಲಿ ಬೆಳೆದ ಅಗಲಸಾಲು ಪದ್ದತಿಯಲ್ಲಿ ಹನಿ ನೀರಾವರಿ, ಜಿ,ಆರ್,ಜಿ ತಳಿಯ ತೊಗರಿ ಬೆಳೆ, ಮೆಕ್ಕೆಜೋಳ, ವಿವಿಧ ಸುಧಾರಿತ ಕಬ್ಬಿನ ತಳಿಗಳು, ದ್ರಾಕ್ಷಿ ಬೆಳೆ, ದ್ರಾಕ್ಷಿ ಬೆಳೆಯಲ್ಲಿ ತೇವಾಂಶ ರಕ್ಷಣೆಗೆ ಗಿಡಗಳ ಸಾಲಿನಲ್ಲಿ ಕೃಷಿ ತ್ಯಾಜ್ಯಗಳಿಂದ ಮೇಲು ಹೊದಿಕೆ ಮಾಡಿದ್ದರಿಂದ ಉತ್ತಮವಾಗಿ ಬೆಳೆದಿರುವ ಬೇರುಗಳ ಬೆಳವಣಿಗೆ. ನೀರುಣಿಸಲು ಅನುಕೂಲವಾಗುವಂತೆ 3 ಎಕರೆ ಪ್ರದೇಶದಲ್ಲಿ ಬೃಹತ್ ಕೃಷಿ ಹೊಂಡ. ಅಂದಾಜು 25 ಲಕ್ಷ ವೆಚ್ಚದ ಸ್ವಯಂಚಾಲಿತ ಪ್ರಚೋದಕ ಯಂತ್ರ, ದ್ರಾಕ್ಷಿ ಸಾರ್ಟಿಂಗ್ ಹಾಗೂ ಗ್ರೇಡಿಂಗ್ ಯಂತ್ರ, ವಿವಿಧ ಆಧುನಿಕ ಕೃಷಿ ಯಂತ್ರೋಪಕರಣಗಳು, ಜಾನುವಾರುಗಳಿಗೆ ಒದಗಿಸುವ ಪೌಷ್ಟಿಕ ಆಹಾರ, ವೈಜ್ಞಾನಿಕ ಕುರಿ ಸಾಕಾಣಿಕೆ, ಕೋಳಿ ಸಾಕಾಣಿಕೆಯ ಲಾಭದ ಕುರಿತು ಮಾಹಿತಿ ಪಡೆದು ವೈಜ್ಞಾನಿಕ ಪದ್ದತಿ ಅಳವಡಿಕೆ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದರು.
ಇದೇ ಸಂದರ್ಭದಲ್ಲಿ ಧಾರವಾಡ ಕೃಷಿ ವಿಶ್ವವಿದ್ಯಾಲಯ ವಿಸ್ತರಣಾ ನಿರ್ದೇಶಕ ಡಾ, ಎಸ್, ಎಸ್, ಅಂಗಡಿ, ವಿಜಯಪುರದ ಸಹ ವಿಸ್ತರಣಾ ನಿರ್ದೇಶಕ ಡಾ, ಆರ್, ಬಿ, ಬೆಳ್ಳಿ, ಡಾ, ಎ, ಎಸ್, ಸಜ್ಜನ, ಜಮಖಂಡಿ ಕೃಷಿ ಇಲಾಖೆಯ ಸಹಾಯಕ ಕೃಷಿ ನಿರ್ದೇಶಕ ಸಿದ್ದಪ್ಪ ಪಟ್ಟಿಹಾಳ, ರವೀಂದ್ರ ತುಳಸಿಗೇರಿ, ಕೆ, ಎ, ಜಮಖಂಡಿ, ರೈತರಾದ ಗಿರಿಮಲ್ಲಯ್ಯ ಮಠಪತಿ, ಸಿದ್ದುಬಾ ಮಾಡಿಕ, ಶಿವಕುಮಾರ ಮಠಪತಿ, ಜ್ಯೋತಿಬಾ ಮಾಡಿಕ ಇದ್ದರು.