ವ್ಯಾಕ್ಸಿನ್ ಅಭಿಯಾನ ಪ್ರಾರಂಭಗೊಂಡು ಒಂದು ವರ್ಷ: ನೇರ್ಲಿ
ಲೋಕದರ್ಶನ ವರದಿ
ಅಥಣಿ 18: ಕೋವಿಡ್ ನಂತಹ ಸಾಂಕ್ರಾಮಿಕ ರೋಗ ಇಡೀ ವಿಶ್ವವನ್ನೇ ಆವರಿಸಿದ ಸಂಕಷ್ಟದ ಸಮಯದಲ್ಲಿ ನಮ್ಮ ಪ್ರಧಾನಿ ನರೇಂದ್ರ ಮೋದಿಯವರ ಸಮರ್ಥ ನೇತೃತ್ವದಲ್ಲಿ ವಿಜ್ಞಾನಿಗಳ ತಂಡದ ಪ್ರಯತ್ನದ ಫಲವಾಗಿ ವ್ಯಾಕ್ಸಿನ್ ಅಭಿಯಾನ ಪ್ರಾರಂಭಗೊಂಡು ಒಂದು ವರ್ಷವಾಯಿತು ಎಂದು ಚಿಕ್ಕೋಡಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಡಾ.ರಾಜೇಶ ನೇರ್ಲಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿಶ್ವದ ಅನೇಕ ವೈದ್ಯಕೀಯ ಕ್ಷೇತ್ರದಲ್ಲಿ ಮುಂದುವರೆದ ರಾಷ್ಟ್ರಗಳಿಗೆ ಅಸಾಧ್ಯವೆನಿಸಿದ ಈ ಕಾರ್ಯ ಪ್ರಾರಂಭಿಸುವುದು ಅಷ್ಟು ಸುಲಭವಾಗಿರಲಿಲ್ಲ. ಆದರೆ ಭಾರತದಲ್ಲಿ ಕೋವಿಡ್ ಸಾಂಕ್ರಾಮಿಕ ರೋಗಕ್ಕೆ ದೇಶದ 135 ಕೋಟಿ ಜನರು ಸಿಲುಕುವ ಭಯ ಆವರಿಸಿತ್ತು. ಆದರೆ ಪ್ರಧಾನಿಗಳ ನೇತೃತ್ವದ ವಿಜ್ಞಾನಿಗಳ, ಉದ್ಯಮಿಗಳ ಸತತ ಪ್ರಯತ್ನದ ಫಲವಾಗಿ ಅಸಾಧ್ಯವಾಗಿದ್ದ ವ್ಯಾಕ್ಸಿನ್ ಸಾಧ್ಯವಾಯಿತು. ಅಷ್ಟೇ ಅಲ್ಲದೇ ವೈದ್ಯರು, ಆರೋಗ್ಯ ಕಾರ್ಯಕರ್ತರು ಕೈ ಜೋಡಿಸಿದ ಪರಿಣಾಮ ವ್ಯಾಕ್ಸಿನ್ ಅಭಿಯಾನ ಯಶಸ್ವಿಯಾಯಿತು. ಈ ಅಭಿಯಾನಕ್ಕೆ ಈಗ ಒಂದು ವರ್ಷ.
ಈ ಅವಧಿಯಲ್ಲಿ 157 ಕೋಟಿಗೂ ಹೆಚ್ಚು ಲಸಿಕೆಗಳನ್ನು ನೀಡಲಾಗಿದೆ, ಈ ಪೈಕಿ66 ಕೋಟಿ ಜನ ಸಂಪೂರ್ಣ ಲಸಿಕೆ ಹಾಗೂ 91 ಕೋಟಿ ಜ ಮೊದಲ ಡೋಸ್ ಲಸಿಕೆ ಪಡೆದುಕೊಂಡಿದ್ದಾರೆ ಅಲ್ಲದೆ 60 ವರ್ಷ ಮೇಳ್ಪಟ್ಟವರಿಗೆ ಹಾಗೂ ಆರೋಗ್ಯ ಹಾಗೂ ಮುಂಚೂಣಿ ಕಾರ್ಯಕರ್ತರಿಗೆ ಬೂಸ್ಟರ್ ಡೋಸ್ ಕೂಡ ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ.
15 ರಿಂದ 17 ವರ್ಷದ ಮಕ್ಕಳಿಗೆ ವ್ಯಾಕ್ಸಿನ್ ಅಭಿಯಾನ ಪ್ರಾರಂಭಗೊಂಡು ಕೇವಲ 10 ದಿನಗಳಲ್ಲಿಯೇ 3.31 ಕೋಟಿ ಮಕ್ಕಳಿಗೆ ಡೋಸ್ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಲಕ್ಷಾಂತರ ಸಂಖ್ಯೆಯ ವೈದ್ಯರು, ವಿಜ್ಞಾನಿಗಳು, ಆರೋಗ್ಯ ಕಾರ್ಯಕರ್ತರ ಸಹಕಾರದಲ್ಲಿ ಅಭಿಯಾನ ಯಶಸ್ವಿಯಾಗಿದೆ. ಇವರ ಕಾರ್ಯ ಅಭಿನಂದನಾರ್ಹ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.