ಕಥೆ ಮತ್ತು ವಿಶೇಷ ಲೇಖನಗಳು

ಸ್ನೇಹವೆಂಬುದು ಸುಲಭವೇ?

ಸ್ನೇಹವೆಂಬುದು ಸುಲಭವೇ?

-ಡಾ. ವೈ.ಎಂ.ಯಾಕೊಳ್ಳಿ , ಬೆಳಗಾವಿ

ಮಾನವ ಬದುಕಿನ ಕೆಲವೇ ಕೆಲವು ಅದ್ಭುತ ಸಂಗತಿಗಳಲ್ಲಿ ಸ್ನೇಹವೂ ಒಂದು ಯಾವ ರಕ್ತ ಸಂಬಂಧವೂಮಾಡಲಾರದ,  ಮಾಡಲಾಗದ ಸಹಾಯವನ್ನು ಒಮ್ಮೊಮ್ಮೆ ಸ್ನೇಹ ಮಾಡುತ್ತದೆ. ಅದು ತಂದೆ-ತಾಯಿ ಅಣ್ಣ ತಮ್ಮ ಬಂಧುಗಳು ಈ ಎಲ್ಲ ಬಾಂಧವ್ಯಕ್ಕ್ಕಿಂತಲೂ ಮಿಗಿಲಾದುದು. ಪ್ರಾಚೀನ ಕಾಲದಿಂದಲೂ ಕೃಷ್ಣ -ಸುದಾಮ, ದುರ್ಯೋಧನ ಕರ್ಣ, ಮೊದಲಾದವರು ಸ್ನೇಹಕ್ಕ್ಕೆ ಹೆಸರುವಾಸಿಯಾಗಿದ್ದಾರೆ. 

ಜೀವಕ್ಕೆ ಜೀವ ಕೊಡುವ ಗೆಳೆಯರು ಎಂಬ ಮಾತೇ ಇದೆ. ಸ್ನೇಹಕ್ಕೆ ಶ್ರೀಮಂತಿಕೆ ಬಡತನಗಳ ಜಾತಿಮತಗಳ ಅಂತರವಿಲ್ಲ ಎನ್ನುವದಕ್ಕೆ ಕೃಷ್ಣ ಸುಧಾಮರ, ದುರ್ಯೋಧನ ಕರ್ಣರ ಉದಾಹರಣೆಗಳೇ ಸಾಕ್ಷಿ. ಮಹಾಭಾರತದಲ್ಲಿ ಕರ್ಣ ದುರ್ಯೋಧನರ ನಡುವೆ ಅಂತರ ತರಬೇಕು, ಅವರ ಗೆಳೆತನ ಒಡೆಯಬೇಕು ಎಂದು ಪ್ರಯತ್ನಿಸಿದ ಕೃಷ್ಣನೇ ಸೋಲಬೇಕಾ ಗುತ್ತದೆ. ಕೊನೆಯಲ್ಲಿ  ಗೆಳೆತನವೇ ಗೆಲ್ಲುತ್ತದೆ. "ನಿನ್ನನ್ನು ನಿನ್ನ ಗೆಳೆಯ ದುರ್ಯೋಧನ ಸ್ವಾರ್ಥಕ್ಕಾಗಿ ಸಲುಹಿದ್ದಾನೆ. ಪಾಂಡವರು ನಿನ್ನ ಸಹೋದರರು. ಅವರನ್ನು ನಿನ್ನ ಕೈಯಾರೆ ಕೊಲ್ಲಬೇಕೆಂದು, ಮುಳ್ಳಿನಿಂದಲೇ ಮುಳ್ಳನ್ನು ತೆಗೆಯಬೇಕೆಂದು , ನಿನ್ನೊಡನೆ ಗೆಳೆತನ ಮಾಡಿ ನಿನ್ನನ್ನು ಬಳಸಿಕೊಂಡು ತನ್ನ ಪರಮ ವೈರಿಗಳಾದ ಪಾಂಡವರನ್ನು ನಾಶ ಮಾಡಲು ನಿನ್ನಬಳಸಿಕೊಂಡಿದ್ದಾನೆ"  ಎಂದಾಗ ಕರ್ಣನ ಮನಸ್ಸಿಗೆ ಒಂದು ಕ್ಷಣ ದು:ಖವಾದರೂ ಆತ ತನ್ನ ಸ್ನೇಹಕ್ಕೆ ದ್ರೋಹ ಮಾಡಲು ತಯಾರಾಗುವದಿಲ್ಲ.ತನ್ನ ಮತ್ತು ತನ್ನ ಗೆಳೆಯನ ಗೆಳೆತನದ ಗಾಢತನವನ್ನು ಸೂಚಿಸಲು ಪಗಡೆಯ ಗೆಲ್ಲಪಡೆಯುವ ಭರದಲ್ಲಿ ಅವನ ಹೆಂಡತಿ ಭಾನುಮತಿಯ ಕೊರಳಿಗೆ ಕೈಹಾಕಿ ಮುತ್ತಿನ ಸರ ಹರಿದರೂ ಅದನ್ನು ನೋಡಿಯೂ (ಪರ ಪುರುಷನು  ತನ್ನ ಹೆಂಡತಿಯ ಕೊರಳಿಗೆ ಕೈಹಾಕಿದ್ದು ಕಂಡೂ ಕೂಡ) ದುರ್ಯೋಧನ "ಏನು ಮುತ್ತಿನ ಸಹ ಹರಿಯಿತೆ? ಆರಿಸಿಕೊಡಲೇ?" ಎಂದು ಕೇಳಿದ ಆ ಗೆಳೆಯನ ಸ್ನೇಹದಲ್ಲಿ ಕೊಂಕನ್ನು ಅರಸಲೇ? ಮೂರ್ಖ ಕೃಷ್ಣ" ಎನ್ನುತ್ತಾನೆ. ಗೆಳೆತನ ಹಣದ, ಆಸ್ತಿಯ, ಸಂಪತ್ತಿನ ಆಸೆಗೆ ಸೋಲುವದಲ್ಲ ಎನ್ನುವದಕ್ಕೆ ಸಾಕ್ಷಿಯಾಗಿಯೂ ಕರ್ಣ ದುರ್ಯೋಧನರ ಸ್ನೇಹ ನಮಗೆ ಕಾಣಬರುತ್ತದೆ. "ನಿನಗೆ ರಾಜ್ಯ ಕೊಡುತ್ತೇವೆ, ಪಟ್ಟಗಟ್ಟುತ್ತೇವೆ ಬಾ" ಎಂದ ಕೃಷ್ಣನಿಗೆ ಕರ್ಣ "ಮರುಳು ಮಾಧವ ಮಹಿಯ ರಾಜ್ಯದ ಸಿರಿಗೆ ಸೋಲುವನಲ್ಲ, ಕೌರವರು ಪಾಂಡವರು ಎನಗೆ ಬೆಸಕೈವಲ್ಲಿ ಮನವಿಲ್ಲ ಎಂದು ಸ್ನೇಹವನ್ನೇ ಮೆರೆಯುತ್ತಾನೆ. ಅಂತೆಯೇ ಕುರುಕ್ಷೇತ್ರ ರಣರಂಗದಲ್ಲಿ ತನ್ನ ಗುರು ದ್ರೋಣ, ಮಗ ಲಕ್ಷಣಕುಮಾರ, ತಮ್ಮ ದುಶ್ಯಾಶನ ಈ ಯಾರ ಶವ ಕಂಡಾಗಲೂ ಉಂಟಾಗುವ ದು:ಖಕ್ಕಿಂತ ಅಗಾಧವಾದ ದು:ಖ ಅವನಿಗೆ ಗೆಳೆಯ ಕರ್ಣನ ಶವ ನೋಡಿದಾಗ ಉಂಟಾಗುತ್ತದೆ. ತನ್ನ ಗೆಳೆಯನೇ ತನ್ನನ್ನು ಅಗಲಿ ಹೋದ ಮೇಲೆ ಈ ರಾಜ್ಯಭಾರ ಯಾರಿಗಾಗಿ? ಎಂದು ಪ್ರಶ್ನಿಸುತ್ತನೆ. ಕನ್ನಡದ ಕವಿ ರನ್ನ ಗದಾಯುದ್ಧದಲ್ಲಿ ಈ ಸ್ನೇಹದ ಆಲಾಪ ಅಜರಾಮರವಾಗಿ ಮೂಡಿ ಬಂದಿದೆ. ಕುರುಕ್ಷೇತ್ರ ರಣರಂಗದಲ್ಲಿ ನಡೆದು ಬರುತ್ತಿದ್ದ ದುರ್ಯೋಧನ ಕರ್ಣನ ಶವವನ್ನು ನೋಡಿದೊಡನೆ ಬಾಷ್ಪ ಧಾರಾಪೂರಿತ ಲೋಚನನಾಗಿ- 

ನಿನ್ನಗೆಳೆಯ ಧುರ್ಯೋಧನ ಬಂದಿದ್ದೇನೆ

ನನ್ನನ್ನು ನೋಡದೇ, ನುಡಿಯದೇ ಅಪ್ಪಿಕೊಳ್ಳದೆ ಕೆಲಸವೇನು? ಎನ್ನದೇ, ಏಕೆ ಮಾತನಾಡಿಸದೆ 

ಇರುವೆ ಗೆಳೆಯ ಅಂಗಾಧಿಪತಿ  

ಎಂದು ದು:ಖಿಸಿದುದೇ ಅಲ್ಲದೇ 

ನೀನುಳ್ಳೊಡೆ ಉಂಟು ರಾಜ್ಯಂ 

ನೀನುಳ್ಳೊಡೆ ಪಟ್ಟಮ್ ಉಂಟು, ಬೆಳ್ಗೊಡೆಯುಂಟೈ

ನೀನುಳ್ಳೊಡೆಯುಂಟು ಪೀಳಿಗೆ

ನೀನಿಲ್ಲದೆ ಇವೆಲ್ಲಮ್ ಒಳವೇ ಅಂಗಾಧಿಪತಿ

ಎಂದು ಪರಿಪರಿಯಾಗಿ ರೋಧಿಸುತ್ತಾನೆ. ಇಲ್ಲಿ ಸೂಚಿತವಾಗುವದು ಅವರ ಸ್ನೇಹದ ಗಾಢತೆಯೇ. ರನ್ನ ಕವಿ ಸ್ನೇಹದ ಶಾಸನವನ್ನು ನಿಲ್ಲಿಸಿದ್ದಾನೆ. ಒಬ್ಬ ಅರಸ ತನ್ನ ಕಡೆಯ ವೀರನೊಬ್ಬ ಸತ್ತಾಗ ಹೀಗೆ 'ನೀನಿಲ್ಲದೇ ನನಗೆ ಯಾವ ಸೌಭಾಗ್ಯವೂ ಬೇಡ' ಎಂದು ಕೇಳಿಕೊಳ್ಳುವದು ಸ್ನೇಹ ಎಲ್ಲ ಬಾಂಧವ್ಯಕ್ಕಿಂತ ಮಿಗಿಲು ಎಂಬುದಕ್ಕೆ ಸಾಕ್ಷಿಯಾಗಿದೆ. ಆದ್ದರಿಂದಲೇ ಸ್ನೇಹವೆಂಬಂಥ ಬಲುಭಾಗ್ಯವಿರಲಿ' ಎಂದು ಕವಿಗಳು ಹಾಡಿದ್ದು ಸಾರ್ಥಕವಾಗಿದೆ. 

       ಜಗತ್ತಿನಲ್ಲಿ ಎಲ್ಲೆಡೆ ಸ್ನೇಹದ ನಂಟಿದೆ. ಭಾರತೀಯ ದಾಂಪತ್ಯದಲ್ಲಿ ಗಂಡ ಹೆಂಡತಿ ಅಂತಿಮವಾಗಿ ಸ್ನೇಹಿತರಾಗಿ ಬಿಡುವದು ಬಲುದೊಡ್ಡ ಆದರ್ಶ. ಗಂಡ ಹೆಂಡತಿ ಎಂಬ ಸಂಬಂಧ ಹಿಂದೆ ಸರಿದು ದಾಂಪತ್ಯದಲ್ಲಿ ಸ್ನೇಹ ಒಡಮೂಡುತ್ತದೆ. ಸತಿ ಪತಿ ಗಳು ಸಖಿ-ಸಖರಾಗುತ್ತರೆ. ಅದ್ದರಿಂದಲೇ ವರಕವಿ ಬೇಂದ್ರೆ ತನ್ನ ಮತ್ತು ಒಡನಾಡಿಯ ಹಾಡನ್ನು ಸಖಿಗೀತ ಎಂದು ಕರೆದರು

ಸಖಿ ನಮ್ಮ ಸಖ್ಯದ ಕಟು ಮಧುರ ಆಖ್ಯಾನ

ವ್ಯಾಖ್ಯಾನದೊಡಗೂಡಿ ವಿವರಿಸಲೇ?

ಎಂದು ಬೇಂದ್ರೆ ತನ್ನ ಒಲುಮೆಯನ್ನೇ ಅವರು ಪ್ರಶ್ನಿಸುತ್ತಾರೆ. ಸ್ನೇಹವೆಂಬುದು ಗಂಡು ಹೆಣ್ನಿನ ನಡುವಿನ ಪ್ರೀತಿಗಿಂತಲೂ ಮಿಗಿಲು. ಎಂತಲೇ ಬೇಂದ್ರಯವರು ತಮ್ಮ ದಾಂಪತ್ಯ ಸ್ನೇಹದ ಹಂತಕ್ಕೆರಲಿ ಎಂದು ಬಯಸಿದರು. ಅವರು ದಾಂಪತ್ಯವನ್ನು 'ಸಖ್ಯದ ಆಖ್ಯಾನ' ಎನ್ನುವಲ್ಲಿ, ಹೆಂಡತಿಯನ್ನು 'ಸಖಿ' ಎಂದು ಕರೆದಿರುವಲ್ಲಿ ಸ್ನೇಹಕ್ಕೆ ನೀಡಿದ ಗೌರವವೇ ಕಾಣುತ್ತದೆ. 

ಸ್ನೇಹ ಬರೀ ಮನುಷ್ಯ ಮನುಷ್ಯರ ನಡುವೆ ಮಾತ್ರವಲ್ಲ ಜಗತ್ತಿನ ಎಲ್ಲೆಡೆಯೂ ಇದೆ. ಎಲ್ಲ ಕಡೆ ಇರುವ ಈ ಸ್ನೇಹದ ನಂಟನ್ನು ಡಿ.ವಿ.ಜಿಯವರು

ತರಣಿ ಕಿರಣದ ನಂಟು,ಗಗನ ಸಲೀಲದ ನಂಟು 

ಧರಣಿಯ ಚಲನೆಯ ನಂಟು ಮರುತನೊಳ್ನಂಟು

ಬಗೆಬಗೆಯ ನಂಟಿನಲಿ ನಲಿವ ಒಂದು ಗಂಟೀ.........................ವಿಶ್ವ ಮಂಕುತಿಮ್ಮ

ಎಂದಿದ್ದರು. ಇಲ್ಲಿ ಕವಿಯ ದರ್ಶನಕ್ಕೆ ನಿಸರ್ಗದ ವಸ್ತು ವಸ್ತುಗಳ ನಂಟಿರುವದು ಕಂಡಿದೆ . 

        ಆದರೆ ವಿಷಾದದ ಮಾತೆಂದರೆ ಇಂದು ಈ ಸ್ನೇಹಕ್ಕೆ ಕುಂದು ಬರುವಂತೆ ತೋರುತ್ತಿದೆ. ಜಡ ಜೀವಗಳ ನಡುವೆ ಇರುವ ಈ ನಂಟು ಮನುಷ್ಯ ಮನುಷ್ಯನ ನಡುವೆ ಕಾಣೆಯಾಗುತ್ತಿದೆ. ಎಲ್ಲಿ ನೋಡಿದರೂ ದ್ವೇಷ, ಅಸಹನೆಗಳೇ ತುಂಬಿಕೊಂಡಂತಿದೆ. ಅದಕ್ಕೆ ಕವಿ "ಸಾಮರಸ್ಯವನೆಂತು ಕಾಣ್ಬುದೀ ವಿಷಮದಲಿ?" ಎಂದು ವಿಷಾದವೆತ್ತುತ್ತಾರೆ. ಸ್ನೇಹಕ್ಕೆ ಅತ್ಯಂತ ಅಗತ್ಯವಾಗಿ ಬೇಕಾದುದು ಗಾಢವಾದ ನಂಬಿಕೆ. ಅದರೆ ಇಂದು ಈ ನಂಬಿಕೆಯ ಗಿಡಕ್ಕೆ ಕೊಡಲಿಯೇಟು ಬಿದ್ದಿದೆ. ಸಮಾಜದ ನಡುವೆ ಹೋಗಲಿ, ಗಂಡ ಹೆಂಡತಿಯರ ನಡುವೆ ಈ ನಂಬಿಕೆ ಇಲ್ಲವಾಗಿದೆ. ಅಂದಾಗ ಸ್ನೇಹವೆಲ್ಲಿರಲು ಸಾಧ್ಯ? ಪರಸ್ಪರ ನಂಬಿಕೆಯೇ ಈ ಸ್ನೇಹವೆಂಬ ಕಟ್ಟಡದ ರೂವಾರಿಗಳು. 

ಗೆಳೆತನ ಜಗತ್ತಿನ ಎಲ್ಲ ಬಂಧ ಸಂಬಂಧಗಳಿಗಿಂತ ಮಿಗಿಲು ಎನ್ನುವುದನ್ನು ರಾಷ್ಟ್ರಕವಿಗಳಾಗಿದ್ದ ಜಿ.ಎಸ್.ಶಿವರುದ್ರಪ್ಪ ನವರು  ತಮ್ಮ 'ಗೆಳೆಯನೊಬ್ಬನಿಗೆ ಬರೆದ ಕಾಗದ' ಕವಿತೆಯಲ್ಲಿ ಹೀಗೆ ವಿವರಿಸಿದ್ದಾರೆ. 

ಬಾಳ ಪಯಣದಲಿ ಹಿರಿಯ ಗುರಿಯ ಕಡೆ 

ನಡೆಯುತಿರಲು ನಾನು

ಯಾವ ಜನ್ಮದಲಿ ಗೈದ ಸುಕೃತಿಯೋ

ಮಿಲನವಾದೆ ನೀನು

ತಾಯಿ ಮೊದಲ ಗುರು, ತಂದೆ ರಕ್ಷಕನು

ಮಿತ್ರ ಎರಡೂ ಹೌದು, 

ಎಂಬ ಹಿರಿನುಡಿಯ ನಿನ್ನ ವಾಣಿಯಲಿ

ಕೇಳಿ ನಲಿದೆನಿಂದು 

   ಅಂಥ ಗೆಳೆಯ ಸಿಕ್ಕದ್ದು ದೈವಕೃಪೆ ಎನ್ನುವ ಕವಿಗೆ ಮಿತ್ರನೇ ತಾಯಿ ತಂದೆಗಿಂತ ಮಿಗಿಲು ಎಂಬ ಮಾತಿನಿಂದ ಈ ಗೆಳೆಯನ ಮಹತಿ ವಣರ್ಿಸಿದೆ. ತನ್ನ ಹಿಂದಿನ ಜನ್ಮದ ಫಲವಾಗಿ ಇಂಥ ಗೆಳೆಯ ದೊರೆತಿದ್ದಾನೆ. ಆದರೆ ಇಂತಹ ಸ್ನೇಹವನ್ನು ನಿಭಾಯಿಸಿಕೊಂಡು ಹೋಗುವದೂ ಅಷ್ಟೇ ಕಷ್ಟ. ಅಲ್ಲಿ ಎರಡು ಹೃದಯಗಳು ಒಂದಾಗಬೇಕಾಗುತ್ತದೆ. 

     ಇಂತಹ ಸ್ವಾರ್ಥರಹಿತ ಸ್ನೇಹ ಈ ಜಗತ್ತನ್ನು ಕಾಪಾಡಲಿ. ಮನುಷ್ಯರ ನಡುವೆ ಮಾತ್ರವಲ್ಲ, ದೇಶ ದೇಶಗಳ ನಡುವೆ ಈ ಸ್ನೇಹ ಸಾಧ್ಯವಾಗಿ ಪರಸ್ಪರ ಅಸಹನೆ ನಿಲ್ಲಬೇಕಾಗಿದೆ. ಇದು ಕನಸೇ? ವಾಸ್ತವಾಗಲಾರದೇ? ಏನೆ ಇರಲಿ, ಹಾಗೆ ಬಯಸುವದು ಕವಿ ಮನಸಿನ ಸಹಜ ಬಯಕೆ ತಾನೆ?   


ಸುದ್ದಿ ಓದಿ